ಮೆಲ್ಬರ್ನ್: ಭಾರತ ತಂಡವು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಸೋತಿದೆ. ಆದರೂ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (ಡಬ್ಲ್ಯುಟಿಸಿ) ಫೈನಲ್ ತಲುಪುವ ಸಾಧ್ಯತೆ ಇನ್ನೂ ಇದೆ. ಬಾರ್ಡರ್–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಕೊನೆಯ ಪಂದ್ಯವು ಸಿಡ್ನಿಯಲ್ಲಿ ಮುಂದಿನ ವಾರ ನಡೆಯಲಿದೆ. ಅದರಲ್ಲಿ ಭಾರತ ತಂಡವು ಜಯಿಸಬೇಕು. ನಂತರ ಆಸ್ಟ್ರೇಲಿಯಾ ತಂಡವು ಶ್ರೀಲಂಕಾ ಎದುರಿನ ಸರಣಿಯಲ್ಲಿ ಸೋಲಬೇಕು ಅಥವಾ ಎರಡೂ ಪಂದ್ಯಗಳು ಡ್ರಾ ಆಗಬೇಕು.
ಸೋಮವಾರ ಭಾರತ ತಂಡವು ಪಂದ್ಯ ಸೋತ ನಂತರ ಪಾಯಿಂಟ್ ಪರ್ಸಂಟೇಜ್ (ಪಿಸಿಟಿ) 52.78ಕ್ಕೆ ಇಳಿಯಿತು. ಮೊದಲು 55.89 ಇತ್ತು. ಅದೇ ಆಸ್ಟ್ರೇಲಿಯಾ ತಂಡ ಪಿಸಿಟಿಯು 61.46ಕ್ಕೇರಿತು.
ದಕ್ಷಿಣ ಆಫ್ರಿಕಾ ತಂಡವು ಭಾನುವಾರ ಪಾಕಿಸ್ತಾನ ಎದುರಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆದ್ದ ನಂತರ ಡಬ್ಲುಟಿಸಿ ಫೈನಲ್‌ನಲ್ಲಿ ಸ್ಥಾನ ಖಚಿಪಡಿಸಿಕೊಂಡಿದೆ. ಎರಡನೇ ತಂಡದ ಪೈಪೋಟಿಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಜಿದ್ದಾಜಿದ್ದಿ ನಡೆಸಿವೆ. ಆದರೆ, ಭಾರತಕ್ಕೆ ಈ ಆವೃತ್ತಿಯಲ್ಲಿ ಉಳಿದಿರುವುದು ಏಕೈಕ ಟೆಸ್ಟ್ ಮಾತ್ರ. ಆದರೆ ಆಸ್ಟ್ರೇಲಿಯಾಗ ಮೂರು ಪಂದ್ಯಗಳು ಬಾಕಿ ಇವೆ.
ಸಿಡ್ನಿ ಟೆಸ್ಟ್‌ನಲ್ಲಿ ಭಾರತ ತಂಡವು ಗೆದ್ದರೆ ಪಿಸಿಟಿಯು 55.26ಕ್ಕೇರುತ್ತದೆ. ಆಸ್ಟ್ರೇಲಿಯಾ 54.26ಕ್ಕೆ ಇಳಿಯುತ್ತದೆ. ಆಗ ಶ್ರೀಲಂಕಾ ದಲ್ಲಿ ನಡೆಯುವ ಎರಡು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾದ ಸೋಲು ಗೆಲುವಿನ ನಂತರ ಭಾರತದ ಹಣೆಬರಹ ಸ್ಪಷ್ಟವಾಗಲಿದೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ಭಾರತ ತಂಡವು ಎಲ್ಲ ಮೂರು ಪಂದ್ಯಗಳಲ್ಲಿಯೂ ಸೋತಿತ್ತು. ಆಗ ಅಂಕಗಳಲ್ಲಿ ಕುಸಿತವಾಗಿತ್ತು. ಪರ್ತ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಗೆಲ್ಲುವಲ್ಲಿ ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾ ಪಡೆ ಯಶಸ್ವಿಯಾಗಿತ್ತು. ಅದರಿಂದಾಗಿ ಸತತ 3ನೇ ಸಲ ಡಬ್ಲ್ಯುಟಿಸಿ ಫೈನಲ್ ಪ್ರವೇಶದ ಕನಸು ಗರಿಗೆದರಿತ್ತು. ಆದರೆ ಅಡಿಲೇಡ್ ಮತ್ತು ಮೆಲ್ಬರ್ನ್ ಟೆಸ್ಟ್‌ಗಳಲ್ಲಿ ಸೋತಿತು. ಬ್ರಿಸ್ಬೇನ್ ಟೆಸ್ಟ್ ಡ್ರಾ ಆಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.