ADVERTISEMENT

ಪಿಸಿಬಿಯಿಂದ ಆಹ್ವಾನ: ಲಾಹೋರ್‌ಗೆ ತೆರಳಿದ ಬಿನ್ನಿ, ಶುಕ್ಲಾ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2023, 15:24 IST
Last Updated 4 ಸೆಪ್ಟೆಂಬರ್ 2023, 15:24 IST
ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರು ಸೋಮವಾರ ವಾಘಾ ಗಡಿ ಮೂಲಕ ಪಾಕ್‌ಗೆ ಪ್ರಯಾಣಿಸಿದರು –ಪಿಟಿಐ ಚಿತ್ರ
ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರು ಸೋಮವಾರ ವಾಘಾ ಗಡಿ ಮೂಲಕ ಪಾಕ್‌ಗೆ ಪ್ರಯಾಣಿಸಿದರು –ಪಿಟಿಐ ಚಿತ್ರ   

ಅಮೃತಸರ: ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ ಮತ್ತು ಉಪಾಧ್ಯಕ್ಷ ರಾಜೀವ್‌ ಶುಕ್ಲಾ ಅವರು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯ (ಪಿಸಿಬಿ) ಆಹ್ವಾನದಂತೆ ಸೋಮವಾರ ವಾಘಾ ಗಡಿ ಮೂಲಕ ಲಾಹೋರ್‌ಗೆ ತೆರಳಿದರು.

ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯವನ್ನು ವೀಕ್ಷಿಸಲು ಪಾಕ್‌ಗೆ ಬರುವಂತೆ ಪಿಸಿಬಿಯು, ಬಿಸಿಸಿಐ ಪದಾಧಿಕಾರಿಗಳಿಗೆ ಆಹ್ವಾನ ನೀಡಿತ್ತು. ಬಿಸಿಸಿಐ ಪದಾಧಿಕಾರಿಗಳು ಪಾಕ್‌ಗೆ ಭೇಟಿ ನೀಡಿದ್ದು 17 ವರ್ಷಗಳ ಬಳಿಕ ಇದೇ ಮೊದಲು.

ರಾಜಕೀಯ ಇಲ್ಲ: ‘ಏಷ್ಯಾ ಕಪ್‌ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಿದೆ. ಎರಡು ದಿನಗಳ ನಮ್ಮ ಈ ಭೇಟಿಯು ಕ್ರಿಕೆಟ್‌ ಕಾರಣದಿಂದ ನಡೆಯುತ್ತಿದೆಯೇ ಹೊರತು, ಯಾವುದೇ ರಾಜಕೀಯ ಇಲ್ಲ. ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಗವರ್ನರ್‌ ಆಯೋಜಿಸುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದೇವೆ. ಬಾಂಗ್ಲಾದೇಶ, ಅಫ್ಗಾನಿಸ್ತಾನ ಮತ್ತು ಪಾಕ್‌ ಆಟಗಾರರು ಈ ವೇಳೆ ಹಾಜರಿರುವರು. ನಾವು ಕ್ರಿಕೆಟ್‌ಅನ್ನು ರಾಜಕೀಯದೊಂದಿಗೆ ಬೆರೆಸಬಾರದು’ ಎಂದು ಪಾಕ್‌ಗೆ ತೆರಳುವ ಮುನ್ನ ಶುಕ್ಲಾ ಅವರು ಮಾಧ್ಯಮದವರಿಗೆ ತಿಳಿಸಿದರು.

ADVERTISEMENT

ಏಷ್ಯಾ ಕಪ್‌ ಟೂರ್ನಿಗೆ ಭಾರತ ತಂಡವನ್ನು ಪಾಕ್‌ಗೆ ಕಳುಹಿಸುವುದಿಲ್ಲ ಎಂದು ಬಿಸಿಸಿಐ ಹೇಳಿತ್ತು. ಆದ್ದರಿಂದ ಈ ಬಾರಿ ‘ಹೈಬ್ರಿಡ್‌ ಮಾದರಿ’ಯಲ್ಲಿ ಟೂರ್ನಿ ನಡೆಯುತ್ತಿದ್ದು, ಪಾಕ್‌ ಜತೆ ಶ್ರೀಲಂಕಾ ಕೂಡಾ ಜಂಟಿ ಆತಿಥ್ಯ ವಹಿಸಿಕೊಂಡಿದೆ.

ಭಾರತ ಕ್ರಿಕೆಟ್‌ ತಂಡ 2008ರ ಏಷ್ಯಾ ಕಪ್‌ ಟೂರ್ನಿಯಲ್ಲಿ ಪಾಲ್ಗೊಳ್ಳಲು ಕೊನೆಯದಾಗಿ ಪಾಕ್‌ಗೆ ಭೇಟಿ ನೀಡಿತ್ತು. ಪಾಕ್‌ ನೆಲದಲ್ಲಿ ಉಭಯ ತಂಡಗಳ ನಡುವಣ ಕೊನೆಯ ಸರಣಿ 2006ರಲ್ಲಿ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.