ADVERTISEMENT

IPL 2025 | LSG vs SRH: ಗೆಲುವಿನ ಒತ್ತಡದಲ್ಲಿ ಪಂತ್ ಬಳಗ

ಲಖನೌ ಸೂಪರ್ ಜೈಂಟ್ಸ್‌–ಸನ್‌ರೈಸರ್ಸ್ ಹೈದರಾಬಾದ್ ಹಣಾಹಣಿ ಇಂದು

ಪಿಟಿಐ
Published 19 ಮೇ 2025, 0:42 IST
Last Updated 19 ಮೇ 2025, 0:42 IST
ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್‌  –ಎಎಫ್‌ಪಿ ಚಿತ್ರ
ಲಖನೌ ಸೂಪರ್‌ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್‌  –ಎಎಫ್‌ಪಿ ಚಿತ್ರ   

ಲಖನೌ: ಈ ಸಲ ಐಪಿಎಲ್‌ನಲ್ಲಿ ಪ್ಲೇ ಆಫ್‌ ಪ್ರವೇಶದ  ಚಿಕ್ಕ ಅವಕಾಶವೊಂದನ್ನು ಉಳಿಸಿಕೊಂಡಿರುವ ಲಖನೌ ಸೂಪರ್ ಜೈಂಟ್ಸ್ ತಂಡವು ಸೋಮವಾರ ಸನ್‌ರೈಸರ್ಸ್ ಹೈದರಾಬಾದ್ ಎದುರು ಕಣಕ್ಕಿಳಿಯಲಿದೆ. 

ಲಖನೌ ತಂಡವು ತನ್ನ ಪಾಲಿಗೆ ಉಳಿದಿರುವ 3 ಪಂದ್ಯಗಳಲ್ಲಿಯೂ ಗೆದ್ದರೆ ಒಟ್ಟು 16 ಅಂಕಗಳನ್ನು ಗಳಿಸುತ್ತದೆ. ಅದರೊಂದಿಗೆ ನೆಟ್‌ ರನ್‌ರೇಟ್‌ ಕೂಡ ಉತ್ತಮಪಡಿಸಿಕೊಳ್ಳಬೇಕು. ಅದೃಷ್ಟವೂ ಜೊತೆಯಾಗಬೇಕು. ಏಕೆಂದರೆ ಸದ್ಯ ಅಗ್ರ ನಾಲ್ಕರಲ್ಲಿರುವ ತಂಡಗಳು ತಮ್ಮ ಪಂದ್ಯಗಳನ್ನು ಸೋಲಬೇಕು. 

ಆದರೆ ಈ ಮೂರು ಹಣಾಹಣಿಗಳಲ್ಲಿ ಒಂದರಲ್ಲಿ ಸೋತರೂ ಲಖನೌ ತಂಡದ ಪ್ಲೇ ಆಫ್‌ ಅವಕಾಶದ ಬಾಗಿಲು ಮುಚ್ಚುತ್ತದೆ. ಇದೆಲ್ಲದರೊಂದಿಗೆ ಪಂತ್ ಅವರಿಗೆ ತಮ್ಮ ಬ್ಯಾಟಿಂಗ್ ಲಯಕ್ಕೆ ಮರಳುವ ಸವಾಲು ಕೂಡ ಇದೆ. ನಿಕೊಲಸ್ ಪೂರನ್, ಏಡನ್ ಮರ್ಕರಂ (348 ರನ್), ಆಯುಷ್ ಬಡೋಣಿ (326 ರನ್) ಹಾಗೂ ಡೇವಿಡ್ ಮಿಲ್ಲರ್ (160 ರನ್) ಅವರು ಕೂಡ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಬ್ಯಾಟಿಂಗ್ ವಿಭಾಗ ಬಲಗೊಳ್ಳಲಿದೆ. 

ADVERTISEMENT

ಶಾರ್ದೂಲ್ ಠಾಕೂರ್, ಆವೇಶ್ ಖಾನ್ (10 ವಿಕೆಟ್), ಸ್ಪಿನ್ನರ್ ದಿಗ್ವೇಶ್ ಸಿಂಗ್ ರಾಠಿ (12 ವಿಕೆಟ್), ರವಿ ಬಿಷ್ಣೋಯಿ ಅವರು ಸನ್‌ರೈಸರ್ಸ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರೆ ಆತಿಥೇಯರಿಗೆ ಗೆಲುವು ಒಲಿಯಬಹುದು. 

ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡದ ಅಭಿಷೇಕ್ ಶರ್ಮಾ (311 ರನ್), ಇಶಾನ್ ಕಿಶನ್, ಟ್ರಾವಿಸ್ ಹೆಡ್, ನಿತೀಶ್ ಕುಮಾರ್ ರೆಡ್ಡಿ ಅವರೂ ಬ್ಯಾಟಿಂಗ್ ವಿಭಾಗಕ್ಕೆ ಶಕ್ತಿ ತುಂಬಬೇಕಿದೆ. ಅನುಭವಿ ಮೊಹಮ್ಮದ್ ಶಮಿ, ಜಯದೇವ್ ಉನದ್ಕತ್ ಮತ್ತು ಹರ್ಷಲ್ ಪಟೇಲ್ ಅವರು ಎದುರಾಳಿ ಬ್ಯಾಟರ್‌ಗಳನ್ನು ಒತ್ತಡಕ್ಕೆ ತಳ್ಳುವ ಸಮರ್ಥರಾಗಿದ್ದಾರೆ. 

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೊ ಹಾಟ್‌ಸ್ಟಾರ್ ಆ್ಯಪ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.