ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿ: ಯಶ್‌ ಮಿಂಚು; ಭಾರತಕ್ಕೆ ಯಶಸ್ಸು

ಧುಳ್‌ ಪಡೆಯ ಶುಭಾರಂಭ

ಪಿಟಿಐ
Published 16 ಜನವರಿ 2022, 11:33 IST
Last Updated 16 ಜನವರಿ 2022, 11:33 IST
ಯಶ್ ಧುಳ್ ಬ್ಯಾಟಿಂಗ್‌ ಪರಿ– ಐಸಿಸಿ ಟ್ವಿಟರ್‌ ಚಿತ್ರ
ಯಶ್ ಧುಳ್ ಬ್ಯಾಟಿಂಗ್‌ ಪರಿ– ಐಸಿಸಿ ಟ್ವಿಟರ್‌ ಚಿತ್ರ   

ಜಾರ್ಜ್‌ಟೌನ್‌: ನಾಯಕ ಯಶ್ ಧುಳ್ (82) ಅವರ ಜವಾಬ್ದಾರಿಯುತ ಬ್ಯಾಟಿಂಗ್‌, ವಿಕಿ ಒಸ್ತವಾಲ್‌ ಮತ್ತು ರಾಜ್‌ ಬಾವಾ (47ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್‌ (28ಕ್ಕೆ 5) ನೆರವಿನಿಂದ ಭಾರತ ತಂಡವು 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಪ್ರಾವಿಡೆನ್ಸ್ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ‘ಬಿ’ ಗುಂಪಿನ ಪಂದ್ಯದಲ್ಲಿ ನಾಲ್ಕು ಬಾರಿಯ ಚಾಂಪಿಯನ್‌ ಭಾರತ 45 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡಕ್ಕೆ ಸೋಲುಣಿಸಿತು. ಟಾಸ್ ಗೆದ್ದ ದಕ್ಷಿಣ ಆಫ್ರಿಕಾ, ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 232 ರನ್‌ಗಳಿಗೆ ಎಲ್ಲ ವಿಕೆಟ್‌ ಕಳೆದುಕೊಂಡಿತು. ಆದರೆ ದಕ್ಷಿಣ ಆಫ್ರಿಕಾ ತಂಡವನ್ನು 187 ರನ್‌ಗಳಿಗೆ ಕಟ್ಟಿ ಹಾಕಿತು.

233 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಈಥನ್ ಜಾನ್ ಕನ್ನಿಂಗ್‌ಹ್ಯಾಮ್ ಅವರನ್ನು ಮೊದಲ ಓವರ್‌ನಲ್ಲೇ ಕಳೆದುಕೊಂಡಿತು. ಬಳಿಕ ವ್ಯಾಲೆಂಟಿನ್ ಕಿಟಿಮ್‌ (25) ಮತ್ತು ಡೆವಾಲ್ಡ್‌ ಬ್ರೆವಿಸ್‌ (65) ಎರಡನೇ ವಿಕೆಟ್‌ಗೆ 57 ರನ್‌ ಸೇರಿಸಿದರು.

ADVERTISEMENT

12ನೇ ಓವರ್‌ನಲ್ಲಿ ಒಸ್ತವಾಲ್‌ ಅವರು ಕಿಟಿಮ್‌ ಅವರನ್ನು ಔಟ್‌ ಮಾಡುವ ಮೂಲಕ ಈ ಜೊತೆಯಾಟವನ್ನು ಮುರಿದರು. ಈ ಹಂತದಿಂದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳನ್ನು ನೆಲೆಯೂರಲು ಭಾರತದ ಬೌಲರ್‌ಗಳು ಬಿಡಲಿಲ್ಲ.

ನಾಯಕ ಜಾರ್ಜ್‌ ವ್ಯಾನ್‌ ಹೀರ್ಡನ್‌ (36) ಮಾತ್ರ ಪ್ರತಿರೋಧ ತೋರಿದರು. 45.4 ಓವರ್‌ಗಳಲ್ಲಿ ತಂಡವು ಆಲೌಟಾಯಿತು.

ಧುಳ್ ಆಸರೆ: ಪ್ರತಿಕೂಲ ಹವಾಮಾನದ ಕಾರಣ ಪಂದ್ಯವು 40 ನಿಮಿಷ ತಡವಾಗಿ ಆರಂಭವಾಯಿತು. ಭರ್ಜರಿ ಲಯದಲ್ಲಿರುವ ಭಾರತದ ಆರಂಭಿಕ ಬ್ಯಾಟರ್‌ ಹರ್ನೂರ್‌ ಸಿಂಗ್‌ (1) ಮತ್ತು ಅಂಗ್‌ರಿಕ್ಷ್‌ ರಘುವಂಶಿ (5) ಬೇಗನೆ ವಿಕೆಟ್‌ ಒಪ್ಪಿಸಿದರು. ಎಡಗೈ ವೇಗಿ ಅಪಿವ್‌ ನ್ಯಾಂದಾ (29ಕ್ಕೆ 2) ಇವರಿಬ್ಬರ ವಿಕೆಟ್‌ ಕಬಳಿಸಿ ಎದುರಾಳಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಈ ವೇಳೆ ಜೊತೆಗೂಡಿದ ಧುಳ್ ಮತ್ತು ಶೇಕ್ ರಶೀದ್‌ (31) ಇನಿಂಗ್ಸ್ ಬೆಳೆಸುವ ಹೊಣೆ ಹೊತ್ತರು. ಇವರಿಬ್ಬರು 71 ರನ್‌ಗಳ ಜೊತೆಯಾಟವಾಡಿದರು. ಬರೋಬ್ಬರಿ 100 ಎಸೆತಗಳನ್ನು ಎದುರಿಸಿದ ಯಶ್‌ 11 ಬೌಂಡರಿ ಸಿಡಿಸಿದರು. ರಶೀದ್ ಔಟಾದ ಬಳಿಕ ಧುಳ್‌ ಮತ್ತು ನಿಶಾಂತ್ ಸಿಂಧು (27) ಜೊತೆ 44 ರನ್‌ ಸೇರಿಸಿದರು.

ಕೊನೆಯ ಹಂತದಲ್ಲಿ ಕೌಶಲ್ ತಾಂಬೆ (35) ಅವರ ನೆರವಿನಿಂದ ತಂಡವು 200ರ ಗಡಿ ದಾಟಿತು. ದಕ್ಷಿಣ ಆಫ್ರಿಕಾ ತಂಡದ ಮ್ಯಾಥ್ಯೂ ಬೋಸ್ಟ್‌ (40ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು.

ಭಾರತ ತಂಡವು ಮುಂದಿನ ಪಂದ್ಯದಲ್ಲಿ ಬುಧವಾರ ಐರ್ಲೆಂಡ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ 19 ವರ್ಷದೊಳಗಿನವರ ತಂಡ: 46.5 ಓವರ್‌ಗಳಲ್ಲಿ 232 (ಯಶ್‌ ಧುಳ್‌ 82, ಕೌಶಲ್ ತಾಂಬೆ 35, ಶೇಕ್ ರಶೀದ್‌ 31, ನಿಶಾಂತ್ ಸಿಂಧು 27; ಮ್ಯಾಥ್ಯು ಬೋಸ್ಟ್‌ 40ಕ್ಕೆ 3, ಅಪಿವ್‌ ನ್ಯಾಂದಾ 29ಕ್ಕೆ 2, ಡೇವಾಲ್ಡ್ ಬ್ರೆವಿಸ್‌ 43ಕ್ಕೆ 3). ದಕ್ಷಿಣ ಆಫ್ರಿಕಾ 19 ವರ್ಷದೊಳಗಿನವರ ತಂಡ: 45.4 ಓವರ್‌ಗಳಲ್ಲಿ 187 (ವ್ಯಾಲೆಂಟಿನ್‌ ಕಿಟಿಮ್‌ 25, ಡೆವಾಲ್ಡ್ ಬ್ರೆವಿಸ್‌ 65, ಜಾರ್ಜ್‌ ವ್ಯಾನ್‌ ಹೀರ್ಡನ್‌ 36. ಲಿಯಾಮ್ ಅಲ್ಡರ್‌ 17; ರಾಜ್‌ ಬಾವಾ 47ಕ್ಕೆ 4, ವಿಕಿ ಒಸ್ತವಾಲ್‌ 28ಕ್ಕೆ 5). ಫಲಿತಾಂಶ: ಭಾರತ ತಂಡಕ್ಕೆ 45 ರನ್‌ಗಳ ಜಯ

ಯುಎಇ, ಐರ್ಲೆಂಡ್‌, ಜಿಂಬಾಬ್ವೆ ತಂಡಗಳಿಗೆ ಗೆಲುವು

ಶನಿವಾರ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಯುನೈಟೆಡ್‌ ಅರಬ್‌ ಎಮಿರೇಟ್ಸ್ 49 ರನ್‌ಗಳಿಂದ ಕೆನಡಾ ತಂಡವನ್ನು ಮಣಿಸಿತು. ಬಿ ಗುಂಪಿನಲ್ಲಿ ಐರ್ಲೆಂಡ್‌ 39 ರನ್‌ಗಳಿಂದ ಉಗಾಂಡ ತಂಡವನ್ನು ಮತ್ತು ಸಿ ಗುಂಪಿನಲ್ಲಿ ಜಿಂಬಾಬ್ವೆ 228 ರನ್‌ಗಳಿಂದ ಪಪುವಾ ನ್ಯೂಗಿನಿ ಎದುರು ಗೆಲುವು ಸಾಧಿಸಿದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.