ADVERTISEMENT

U19 WC: ವೈಷ್ಣವಿ ಹ್ಯಾಟ್ರಿಕ್ ಸೇರಿದಂತೆ 5 ವಿಕೆಟ್;2.5 ಓವರ್‌ನಲ್ಲೇ ಗೆದ್ದ ಭಾರತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2025, 9:17 IST
Last Updated 21 ಜನವರಿ 2025, 9:17 IST
<div class="paragraphs"><p>ವೈಷ್ಣವಿ ಶರ್ಮಾ</p></div>

ವೈಷ್ಣವಿ ಶರ್ಮಾ

   

(ಚಿತ್ರ ಕೃಪೆ: X/@T20WorldCup)

ಕ್ವಾಲಾಲಂಪುರ: ಪದಾರ್ಪಣೆ ಪಂದ್ಯದಲ್ಲೇ ‘ಹ್ಯಾಟ್ರಿಕ್’ ಸೇರಿ ಐದು ವಿಕೆಟ್ ಸಾಧನೆ ಮೆರೆದ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಅವರ ಪರಿಣಾಮಕಾರಿ ದಾಳಿಯ ಬಲದಿಂದ ಮಂಗಳವಾರ ಭಾರತದ ವನಿತೆಯರು ಐಸಿಸಿ 19 ವರ್ಷದೊಳಗಿನ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದರು.

ADVERTISEMENT

ಟಾಸ್‌ ಸೋತು ಬ್ಯಾಟಿಂಗ್‌ಗೆ ಬಂದ ಆತಿಥೇಯ ತಂಡಕ್ಕೆ ಭಾರತದ ವೈಷ್ಣವಿ (5ಕ್ಕೆ5) ಮತ್ತು ಆಯುಷಿ ಶುಕ್ಲಾ (8ಕ್ಕೆ 3) ಬಲವಾದ ಪೆಟ್ಟು ನೀಡಿದರು. ಯಾವ ಹಂತದಲ್ಲೂ ಎದುರಾಳಿ ತಂಡವನ್ನು ಚೇತರಿಸಿಕೊಳ್ಳಲು ಅವಕಾಶ ನೀಡಲಿಲ್ಲ. ಹೀಗಾಗಿ, ಮಲೇಷ್ಯಾ 14.3 ಓವರ್‌ಗಳಲ್ಲಿ 31 ರನ್‌ಗೆ ಆಲೌಟ್‌ ಆಯಿತು. ಯಾರೊಬ್ಬರೂ ಐದು ರನ್‌ ದಾಟಲಿಲ್ಲ.

ಭಾರತ ತಂಡವು ಈ ಗುರಿಯನ್ನು ವಿಕೆಟ್‌ ನಷ್ಟವಿಲ್ಲದೆ 2.5 ಓವರ್‌ಗಳಲ್ಲಿ ತಲುಪಿ, ಜಯಭೇರಿ ಬಾರಿಸಿತು. ಜಿ. ತ್ರಿಶಾ 12 ಎಸೆತಗಳಲ್ಲಿ ಐದು ಬೌಂಡರಿ ಸೇರಿದಂತೆ ಔಟಾಗದೇ 27 ರನ್ ಗಳಿಸಿದರು.

ಪಿಚ್‌ನಲ್ಲಿ ಗಮನಾರ್ಹವಾದ ತಿರುವು ಮತ್ತು ಬೌನ್ಸ್‌ಗಳು ಕಂಡುಬಂದವು. ವೈಷ್ಣವಿ ಅವರ ಕೈಚಳಕದ ಮುಂದೆ ಆತಿಥೇಯ ತಂಡದ ಬ್ಯಾಟರ್‌ಗಳು ತಬ್ಬಿಬ್ಬಾದರು. ಅವರು 14ನೇ ಓವರ್‌ನಲ್ಲಿ ನೂರ್ ಐನ್ ಬಿಂಟಿ ರೋಸ್ಲಾನ್, ನೂರ್ ಇಸ್ಮಾ ದಾನಿಯಾ ಮತ್ತು ಸಿತಿ ನಜ್ವಾಹ್ ಅವರ ವಿಕೆಟ್‌ ಪಡೆದು ಹ್ಯಾಟ್ರಿಕ್‌ ಮೆರೆದರು. ವೈಷ್ಣವಿ ಅವರ ಅಂಕಿಅಂಶವು ಟೂರ್ನಿಯ ಇತಿಹಾಸದಲ್ಲೇ ಅತ್ಯುತ್ತಮ ಬೌಲಿಂಗ್‌ ದಾಖಲೆಯಾಗಿದೆ. 

ಸತತ ಎರಡೂ ಪಂದ್ಯಗಳನ್ನು ಗೆದ್ದ ಭಾರತ 4 ಅಂಕಗಳೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಗೆದ್ದು ನಿಕಿ ಪ್ರಸಾದ್‌ ಬಳಗ ಅಭಿಯಾನ ಆರಂಭಿಸಿತ್ತು. ಭಾರತಕ್ಕಿಂತ ಕಡಿಮೆ ನೆಟ್‌ ರನ್‌ ರೇಟ್‌ ಹೊಂದಿರುವ ಶ್ರೀಲಂಕಾ (4 ಅಂಕ) ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಇದೇ 23ರಂದು ಭಾರತ ಗುಂಪಿನ ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್‌: ಮಲೇಷ್ಯಾ: 14.3 ಓವರ್‌ಗಳಲ್ಲಿ 31 (ವೈಷ್ಣವಿ ಶರ್ಮಾ 5ಕ್ಕೆ 5, ಆಯುಷಿ ಶುಕ್ಲಾ 8ಕ್ಕೆ 3). ಭಾರತ: 2.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 32 (ಜಿ.ತ್ರಿಶಾ ಔಟಾಗದೇ 27). ಫಲಿತಾಂಶ: ಭಾರತಕ್ಕೆ 10 ವಿಕೆಟ್‌ ಜಯ. ಪಂದ್ಯದ ಆಟಗಾರ್ತಿ: ವೈಷ್ಣವಿ ಶರ್ಮಾ

ಮಲೇಷ್ಯಾ ಬ್ಯಾಟಿಂಗ್ ಕಾರ್ಡ್ ಹೀಗಿತ್ತು: 5, 0, 5, 1, 0, 2, 3, 3, 0, 0, 1

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.