
ಹರಾರೆ: ಐದು ಸಲದ ಯುವ ವಿಶ್ವಕಪ್ ವಿಜೇತ ಭಾರತ 19 ವರ್ಷದೊಳಗಿನವರ ತಂಡವು ಬುಧವಾರ ನಡೆಯುವ ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ.
ಟೂರ್ನಿಯಲ್ಲಿ ಇದುವರೆಗೆ ಭಾರತದ ಯುವಪಡೆಯು ಅಜೇಯವಾಗಿದೆ. ಐದು ಬಾರಿ ಪ್ರಶಸ್ತಿ ವಿಜಯ (2000, 2008, 2012, 2018 ಮತ್ತು 2022) ಸಾಧಿಸಿದೆ. ಆಸ್ಟ್ರೇಲಿಯಾ ಇದುವರೆಗೆ ನಾಲ್ಕು ಸಲ ಗೆದ್ದಿದೆ.
ಭಾರತ ತಂಡವು ಸೂಪರ್ ಸಿಕ್ಸ್ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ 58 ರನ್‌ಗಳಿಂದ ಜಯಭೇರಿ ಬಾರಿಸಿತ್ತು. ಅಫ್ಗಾನಿಸ್ತಾನ ತಂಡವು ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿದೆ. ಶ್ರೀಲಂಕಾ ಎದುರು ನಾಲ್ಕು ವಿಕೆಟ್‌ಗಳಿಂದ ಪರಾಭವಗೊಂಡಿತ್ತು. ಆದರೆ ಅನುಭವ ಮತ್ತು ಆಟಗಾರರ ಫಾರ್ಮ್ ನೋಡಿದರೆ ಮೇಲ್ನೋಟಕ್ಕೆ ಭಾರತ ತಂಡ ಬಲಿಷ್ಠವಾಗಿದೆ.
ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟರ್ ಅಭಿಗ್ಯಾನ್ ಕುಂಡು ಇಲ್ಲಿಯವರೆಗೆ ಐದು ಪಂದ್ಯಗಳಿಂದ 199 ರನ್ ಸೇರಿಸಿದ್ದಾರೆ. ಅದರಲ್ಲಿ ಎರಡು ಅರ್ಧಶತಕಗಳು ಇವೆ. ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (196 ರನ್, 2 ಅರ್ಧಶತಕ), ಆಲ್‌ರೌಂಡರ್ ವಿಹಾನ್ ಮಲ್ಹೋತ್ರಾ (172ರನ್ ) ಅವರು ಅಮೋಘ ಲಯದಲ್ಲಿದ್ದಾರೆ. ವಿಹಾನ್ ಒಂದು ಶತಕ ಕೂಡ ಗಳಿಸಿದ್ದಾರೆ.
ನಾಯಕ ಆಯುಷ್ ಮ್ಹಾತ್ರೆ ಬೌಲಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಒಟ್ಟು ಆರು ವಿಕೆಟ್‌ಗಳು ಅವರ ಖಾತೆಯಲ್ಲಿವೆ. ಅವರು ಬ್ಯಾಟಿಂಗ್‌ನಲ್ಲಿ ಲಯಕ್ಕೆ ಮರಳಬೇಕಿದೆ. ಆರಂಭಿಕ ಬ್ಯಾಟರ್ ಆ್ಯರನ್ ಜಾರ್ಜ್ ಅವರು ಲಯದಲ್ಲಿ ಇಲ್ಲ. ಬಲಗೈ ಬ್ಯಾಟರ್ ಆಗಿರುವ ಅವರು ಇದುವರೆಗೆ ಒಟ್ಟು 46 ರನ್ ಮಾತ್ರ ಗಳಿಸಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ವೇಗಿಗಳಾದ ಹೆನಿಲ್ ಪಟೇಲ್ ಮತ್ತು ಆರ್ ಎಸ್. ಅಂಬರೀಷ್ ಅವರು ಕ್ರಮವಾಗಿ 11 ಹಾಗೂ 8 ವಿಕೆಟ್‌ಗಳನ್ನು ಗಳಿಸಿದ್ದಾರೆ. ಎಡಗೈ ಸ್ಪಿನ್ನರ್ ಖಿಲಾನ್ ಪಟೇಲ್ ಐದು ಪಂದ್ಯಗಳಿಂದ ಎಂಟು ವಿಕೆಟ್ ಗಳಿಸಿ ಉತ್ತಮ ಕಾಣಿಕೆ ನೀಡಿದ್ದಾರೆ. ಆಯುಷ್ ಮತ್ತು ಮಲ್ಹೋತ್ರಾ ಅವರು ತಲಾ ಐದು ವಿಕೆಟ್ ಗಳಿಸಿದ್ದಾರೆ. ಇದೀಗ ಇವರ ಮುಂದೆ ಮೆಹಬೂಬ್ ಖಾನ್ ನಾಯಕತ್ವದ ಅಫ್ಗನ್ ತಂಡದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಇದೆ. ಖಾಲಿದ್ ಅಹಮದ್‌ಝೈ, ಫೈಸಲ್ ಶಿನೊಝಾದಾ ಹಾಗೂ ಉಜೈರುಲ್ಲಾ ನಿಯಾಝರ್ ಅವರು ಇದುವರೆಗೆ ಉತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಬೌಲಿಂಗ್‌ನಲ್ಲಿ ಅಬ್ದುಲ್ ಅಜೀಜ್, ಖಾತಿರ್ ಸ್ಥಾನಿಕ್‌ಝೈ ಮತ್ತು ವಹಿದುಲ್ಲಾ ಜದ್ರಾನ್ ಅವರು ಬ್ಯಾಟರ್‌ಗಳನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಪಂದ್ಯ ಆರಂಭ: ಮಧ್ಯಾಹ್ನ 1
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.