ADVERTISEMENT

T20 World Cup: ಗೆಲುವಿನ ಖಾತೆ ತೆರೆದ ಯುಎಇ; ಕೆನಡಾಗೆ ನಿರಾಸೆ

ಪಿಟಿಐ
Published 13 ಫೆಬ್ರುವರಿ 2026, 15:49 IST
Last Updated 13 ಫೆಬ್ರುವರಿ 2026, 15:49 IST
ಐದು ವಿಕೆಟ್‌ ಪಡೆದ ಜುನೈದ್ ಸಿದ್ದೀಕ್ –ಎಎಫ್‌ಪಿ ಚಿತ್ರ
ಐದು ವಿಕೆಟ್‌ ಪಡೆದ ಜುನೈದ್ ಸಿದ್ದೀಕ್ –ಎಎಫ್‌ಪಿ ಚಿತ್ರ   

ನವದೆಹಲಿ (ಪಿಟಿಐ): ಅನುಭವಿ ವೇಗಿ ಜುನೈದ್ ಸಿದ್ದೀಕ್ (35ಕ್ಕೆ 5) ಅವರ ಮಿಂಚಿನ ದಾಳಿ ಬಳಿಕ ಆರಂಭ ಆಟಗಾರ ಆರ್ಯನ್ಶ್ ಶರ್ಮಾ (ಔಟಾಗದೇ 74;53ಎ) ಅವರ ಅರ್ಧಶತಕದ ಬಲದಿಂದ ಯುಎಇ ತಂಡವು ಟಿ20 ವಿಶ್ವಕಪ್‌ ಟೂರ್ನಿಯ ರೋಚಕ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಕೆನಡಾ ತಂಡವನ್ನು ಮಣಿಸಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಕೆನಡಾ ತಂಡವು ಹರ್ಷ್ ಥಾಕರ್ (50;41ಎ) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 150 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಯುಎಇ ತಂಡವು ಎರಡು ಎಸೆತಗಳು ಬಾಕಿ ಇರುವಂತೆ 5 ವಿಕೆಟ್‌ಗೆ ಗೆಲುವಿನ ರನ್‌ ಬಾರಿಸಿ ಸಂಭ್ರಮಿಸಿತು. ನ್ಯೂಜಿಲೆಂಡ್‌ ವಿರುದ್ಧ 10 ವಿಕೆಟ್‌ಗಳಿಂದ ಸೋತಿದ್ದ ಯುಎಇ ತಂಡವು ಹಾಲಿ ಟೂರ್ನಿಯಲ್ಲಿ ಗೆಲುವಿನ ಖಾತೆ ತೆರೆಯಿತು. 

ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ ಸಿದ್ದೀಕ್ ವೃತ್ತಿಜೀವನದಲ್ಲೇ ಮೊದಲ ಬಾರಿ ಐದು ವಿಕೆಟ್‌ ಗೊಂಚಲು ಪಡೆದರು. ಅವರ ದಾಳಿಗೆ ತತ್ತರಿಸಿದ ಕೆನಡಾ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ನವನೀತ್ ಧಲಿವಾಲ್ (34;28ಎ) ಮತ್ತು ಹರ್ಷ್ ಕೊಂಚ ಪ್ರತಿರೋಧ ತೋರಿದರು. ಅವರು ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 58 ರನ್‌ ಸೇರಿಸಿದರು. ನಂತರದಲ್ಲಿ ಶ್ರೇಯಸ್ ಮೊವ್ವಾ (21) ತಂಡವು ಸಾಧಾರಣ ಮೊತ್ತ ಗಳಿಸಲು ನೆರವಾದರು. 

ADVERTISEMENT

ಗುರಿಯನ್ನು ಬೆನ್ನಟ್ಟಿದ ಯುಎಇ ತಂಡದ ಆರಂಭವೂ ಉತ್ತಮವಾಗಿರಲಿಲ್ಲ. ತಂಡವು 12 ರನ್‌ ಗಳಿಸುಷ್ಟರಲ್ಲಿ ನಾಯಕ ಮೊಹಮ್ಮದ್ ವಸೀಂ (4) ಅವರು ಪೆವಿಲಿಯನ್‌ ಸೇರಿಕೊಂಡರು. 66 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಆರ್ಯನ್ಶ್ ಮತ್ತು ಸೊಹೇಬ್ ಖಾನ್ (51;29ಎ) ಅವರು ಮಹತ್ವದ ಚೇತರಿಕೆ ನೀಡಿದರು. ಅವರು ಐದನೇ ವಿಕೆಟ್‌ ಜೊತೆಯಾಟದಲ್ಲಿ ಬಿರುಸಿನ 84 (43ಎ) ರನ್‌ ಪೇರಿಸಿ, ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಜಯಕ್ಕೆ ಒಂದು ರನ್‌ ಬೇಕಿದ್ದಾಗ ಸೊಹೇಬ್ ಔಟಾದರು. ಮುಹಮ್ಮದ್ ಅರ್ಫಾನ್ (ಔಟಾಗದೇ 1) ಗೆಲುವಿನ ಔಪಚಾರ ಪೂರೈಸಿದರು.  

ಸಂಕ್ಷಿಪ್ತ ಸ್ಕೋರ್‌: ಕೆನಡಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 150 (ನವನೀತ್ ಧಲಿವಾಲ್ 34, ಹರ್ಷ್ ಥಾಕರ್ 50; ಜುನೈದ್ ಸಿದ್ದೀಕ್ 35ಕ್ಕೆ 5). ಯುಎಇ: 19.4 ಓವರ್‌ಗಳಲ್ಲಿ 5 ವಿಕೆಟ್‌ಗೆ 151 (ಆರ್ಯನ್ಶ್ ಶರ್ಮಾ ಔಟಾಗದೇ 74, ಸೊಹೇಬ್ ಖಾನ್ 51; ಸಾದ್ ಬಿನ್ ಜಾಫರ್ 14ಕ್ಕೆ 3). ಪಂದ್ಯದ ಆಟಗಾರ: ಜುನೈದ್ ಸಿದ್ದೀಕ್

ಅಜೇಯ ಅರ್ಧಶತಕ ದಾಖಲಿಸಿದ ಆರ್ಯನ್ಶ್ ಶರ್ಮಾ –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.