ADVERTISEMENT

IPL 2021: ಅತಿ ವೇಗದ ಎಸೆತ; ಉಮ್ರಾನ್‌ ಮಲಿಕ್ ಜೆರ್ಸಿಗೆ ಸಹಿ ಮಾಡಿದ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 11:17 IST
Last Updated 7 ಅಕ್ಟೋಬರ್ 2021, 11:17 IST
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್    

ದುಬೈ: ಇಂಡಿಯನ್ ಪ್ರೀಮಿಯರ್ ಲೀಗ್ 2021ನೇ ಸಾಲಿನ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಅತಿ ವೇಗದಲ್ಲಿ ಬೌಲಿಂಗ್ ಮಾಡಿರುವ ದಾಖಲೆಗೆ ಭಾಜನರಾಗಿರುವ ಭರವಸೆಯ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್‌ ಎಲ್ಲೆಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಪಂದ್ಯದ ಬಳಿಕ ಉಮ್ರಾನ್ ಮಲಿಕ್ ಜೆರ್ಸಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಹಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಬುಧವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಉಮ್ರಾನ್ ಮಲಿಕ್, ಗಂಟೆಗೆ 153 ಕಿ.ಮೀ. ವೇಗದಲ್ಲಿ ಚೆಂಡು ಎಸೆದಿದ್ದರು. ಈ ಮೂಲಕ ನ್ಯೂಜಿಲೆಂಡ್‌ನ ಲಾಕಿ ಫರ್ಗ್ಯುಸನ್‌ ದಾಖಲೆಯನ್ನು ಮುರಿದಿದ್ದಾರೆ.

ಪಂದ್ಯದ ಬಳಿಕ ಉಮ್ರಾನ್ ಮಲಿಕ್ ಬಗ್ಗೆ ವಿರಾಟ್ ಕೊಹ್ಲಿ ಹಾಗೂ ಹೈದರಾಬಾದ್ ನಾಯಕ ಕೇನ್ ವಿಲಿಯಮ್ಸನ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ 21 ವರ್ಷದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಚೊಚ್ಚಲ ಐಪಿಎಲ್ ಪಂದ್ಯವನ್ನಾಡಿದರು. ಅಲ್ಲದೆ ತಮ್ಮ ಮೊದಲ ಪಂದ್ಯದಲ್ಲೇ ಗಂಟೆಗೆ 150 ಕಿ.ಮೀ.ಗೂ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಸನ್‌ರೈಸರ್ಸ್ ಹೈದರಾಬಾದ್ ತಂಡದ ನೆಟ್ ಬೌಲರ್ ಆಗಿ ಯುಎಇ ಪಯಣ ಬೆಳೆಸಿದ್ದ ಉಮ್ರಾನ್ ಮಲಿಕ್, ಕೋವಿಡ್‌ಗೆ ತುತ್ತಾಗಿದ್ದ ತಂಗರಸು ನಟರಾಜನ್ ಅವರ ಸ್ಥಾನವನ್ನು ತುಂಬಿದ್ದರು. ಈಗ ಐಪಿಎಲ್‌ನಲ್ಲಿ ತಮ್ಮ ಛಾಪು ಒತ್ತಿದ್ದಾರೆ.

ಐಪಿಎಲ್ 2021ರ ಅತಿ ವೇಗದ ಎಸೆತಗಳು:
1. ಉಮ್ರಾನ್ ಮಲಿಕ್: 152.95
2. ಲಾಕಿ ಫರ್ಗ್ಯುಸನ್: 152.75
3. ಲಾಕಿ ಫರ್ಗ್ಯುಸನ್: 152.74
4. ಉಮ್ರಾನ್ ಮಲಿಕ್: 151.97
5. ಉಮ್ರಾನ್ ಮಲಿಕ್: 151.77

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.