ADVERTISEMENT

ರಣಜಿ ಫೈನಲ್‌ ನಿರೀಕ್ಷಿತ ಡ್ರಾ: ಸೌರಾಷ್ಟ್ರಕ್ಕೆ ಚೊಚ್ಚಲ ಟ್ರೋಫಿ

ಕೊನೆಯ ದಿನ ಮಿಂಚಿದ ಉನದ್ಕತ್‌

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 19:45 IST
Last Updated 13 ಮಾರ್ಚ್ 2020, 19:45 IST
ಟ್ರೋಫಿಯೊಂದಿಗೆ ಸಂಭ್ರಮಿಸಿದ ಸೌರಾಷ್ಟ್ರ ತಂಡದ ಆಟಗಾರರು–ಪಿಟಿಐ ಚಿತ್ರ
ಟ್ರೋಫಿಯೊಂದಿಗೆ ಸಂಭ್ರಮಿಸಿದ ಸೌರಾಷ್ಟ್ರ ತಂಡದ ಆಟಗಾರರು–ಪಿಟಿಐ ಚಿತ್ರ   
""

ರಾಜಕೋಟ್‌: ಅಗತ್ಯ ಸಂದರ್ಭದಲ್ಲೇ ಅಮೋಘ ಬೌಲಿಂಗ್‌ ದಾಳಿ ನಡೆಸಿದ ನಾಯಕ ಜಯದೇವ ಉನದ್ಕತ್‌, ಸೌರಾಷ್ಟ್ರ ತಂಡ ಮೊದಲ ಬಾರಿ ರಣಜಿ ಟ್ರೋಫಿ ಗೆಲ್ಲಲು ನೆರವಾದರು. ಬಂಗಾಳ ವಿರುದ್ಧ ಫೈನಲ್‌ ಪಂದ್ಯದ ಅಂತಿಮ ದಿನವಾದ ಶುಕ್ರವಾರ ಆತಿಥೇಯರು ನಿರೀಕ್ಷೆಗಿಂತ ಬೇಗ, ನಿರ್ಣಾಯಕ 44 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆದರು.

ಐದು ದಿನಗಳ ಪಂದ್ಯ ‘ಡ್ರಾ’ ಆಗುವುದು ನಿರೀಕ್ಷಿತವೇ ಆಗಿತ್ತು. ಸೌರಾಷ್ಟ್ರದ 425 ರನ್‌ಗಳಿಗೆ ಉತ್ತರವಾಗಿ ಗುರುವಾರ 6 ವಿಕೆಟ್‌ಗೆ 354 ರನ್‌ ಗಳಿಸಿ ಹೋರಾಟ ತೋರಿದ್ದ ಪ್ರವಾಸಿ ತಂಡ, ಅಂತಿಮ ದಿನ ಕೇವಲ 27 ರನ್‌ ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ಕುಸಿಯಿತು. ಕೊನೆಯ ದಿನ ಸೌರಾಷ್ಟ್ರ ಸಂಭ್ರಮ ತುಂಬಿಕೊಳ್ಳಲು ಪ್ರೇಕ್ಷಕರಿರಲಿಲ್ಲ. ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಸಲಾಯಿತು.

ಒಂದು ದಶಕದ ಅವಧಿಯಲ್ಲಿ ಮೂರು ಬಾರಿ ರನ್ನರ್‌ ಅಪ್‌ ಆಗಿದ್ದ ಸೌರಾಷ್ಟ್ರ ಕೊನೆಗೂ ಮೊದಲ ಸಲ ಟ್ರೋಫಿಗೆ ಮುತ್ತಿಕ್ಕಿತು. 2012–13ರಲ್ಲಿ ಮತ್ತು 2015–16ರ ಫೈನಲ್‌ನಲ್ಲಿ ಎರಡೂ ಬಾರಿ ಮುಂಬೈ ಎದುರು ಸೋಲನುಭವಿಸಿತ್ತು. 2018–19ರ ಅಂತಿಮ ಪಂದ್ಯದಲ್ಲಿ ವಿದರ್ಭ ತಂಡದ ಎದುರು ಪರಾಭವಗೊಂಡಿತ್ತು. ಬಂಗಾಳ 1989–90ರಲ್ಲಿ ಕೊನೆಯ ಬಾರಿ ಚಾಂಪಿಯನ್‌ ಆಗಿತ್ತು.

ADVERTISEMENT

ಗುರುವಾರ ಮುರಿಯದ ಏಳನೇ ವಿಕೆಟ್‌ಗೆ 91 ರನ್‌ ಸೇರಿಸುವ ಮೂಲಕ ಬಂಗಾಳ ಪ್ರತಿ ಹೋರಾಟ ತೋರಿಸುವ ಸೂಚನೆ ನೀಡಿತ್ತು. ಆದರೆ ಸೆಮಿಫೈನಲ್‌ನಲ್ಲಿ ಗುಜರಾತ್‌ ವಿರುದ್ಧ ಏಳು ವಿಕೆಟ್‌ ಪಡೆದು ತಮ್ಮ ತಂಡ ಫೈನಲ್‌ ತಲುಪಲು ನೆರವಾದ ಅನುಭವಿ ಎಡಗೈ ವೇಗಿ ಉನದ್ಕತ್‌ ಬಂಗಾಳದ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿದರು.

ನಿನ್ನೆಯ ಮೊತ್ತಕ್ಕೆ ಏಳು ರನ್ ಸೇರುತ್ತಿದ್ದಂತೆ ಅನುಷ್ಟುಪ್‌ ಮಜುಂದಾರ್‌ (63, 8 ಬೌಂಡರಿ, 151 ಎ) ಅವರನ್ನು ಎಲ್‌ಬಿಡಬ್ಲ್ಯ ಬಲೆಗೆ ಕೆಡವಿದ ಬಂಗಾಳ ನಾಯಕ, ಎರಡು ಎಸೆತಗಳ ನಂತರ ಆಕಾಶ್‌ ದೀಪ್‌ ಅವರನ್ನು ರನ್‌ಔಟ್‌ ಮಾಡಿ ತಂಡಕ್ಕೆ ಸ್ಪಷ್ಟ ಮೇಲುಗೈ ಕೊಡಿಸಿದರು.

ಕೊನೆಯ ಆಟಗಾರ ಇಶಾನ್‌ ಪೊರೆಲ್‌ ಅವರನ್ನೂ ಬಲಿಪಡೆದ ಉನದ್ಕತ್‌ ತಂಡದ ಸಂಭ್ರಮಕ್ಕೆ ಕಾರಣರಾದರು. ಬಂಗಾಳದ ಇನಿಂಗ್ಸ್‌ 381 ರನ್‌ಗಳಿಗೆ ಮುಗಿಯಿತು.

ಉನದ್ಕತ್‌ ಈ ಋತುವಿನಲ್ಲಿ ಅತ್ಯಧಿಕ 67 ವಿಕೆಟ್‌ಗಳನ್ನು ಪಡೆದು ಯಶಸ್ವಿ ಬೌಲರ್‌ ಎನಿಸಿದರು. ಅದೂ 13.23ರ ಸರಾಸರಿಯಲ್ಲಿ. ಇನ್ನೊಂದು ವಿಕೆಟ್‌ ಪಡೆದಿದ್ದರೆ ಅವರು ಸಾರ್ವಕಾಲಿಕ ದಾಖಲೆ ಸರಿಗಟ್ಟುತ್ತಿದ್ದರು.‌ ಬಂಗಾಳ ಎರಡನೇ ಇನಿಂಗ್ಸ್‌ನಲ್ಲಿ ಕುಸಿಯದಂತೆ ನೋಡಿಕೊಳ್ಳಬೇಕಾಗಿತ್ತು. 34 ಓವರುಗಳಲ್ಲಿ 4 ವಿಕೆಟ್‌ಗೆ 105 ರನ್‌ ಗಳಿಸಿದ್ದಾಗ ಪಂದ್ಯ ಕೊನೆಗೊಳಿಸಲು ಉಭಯ ನಾಯಕರಾದ ಉನದ್ಕತ್‌ ಮತ್ತು ಅಭಿಮನ್ಯು ಈಶ್ವರನ್‌ ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.