ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಉನದ್ಕತ್, ಚೇತನ್ ದಾಳಿಗೆ ಕುಸಿದ ಬಂಗಾಳ

ರಣಜಿ ಟ್ರೋಫಿ ಕ್ರಿಕೆಟ್ ಫೈನಲ್: ಶಹಬಾಜ್, ಅಭಿಷೇಕ್ ಅರ್ಧಶತಕ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2023, 13:51 IST
Last Updated 16 ಫೆಬ್ರುವರಿ 2023, 13:51 IST
ಸೌರಾಷ್ಟ್ರ ತಂಡದ ಬೌಲರ್ ಚೇತನ್ ಸಕಾರಿಯಾ  –ಪಿಟಿಐ ಚಿತ್ರ
ಸೌರಾಷ್ಟ್ರ ತಂಡದ ಬೌಲರ್ ಚೇತನ್ ಸಕಾರಿಯಾ  –ಪಿಟಿಐ ಚಿತ್ರ   

ಕೋಲ್ಕತ್ತ: ಸೌರಾಷ್ಟ್ರದ ಎಡಗೈ ಮಧ್ಯಮವೇಗದ ಜೋಡಿ ಜೈದೇವ್ ಉನದ್ಕತ್ ಹಾಗೂ ಚೇತನ್ ಸಕಾರಿಯಾ ದಾಳಿಯ ಮುಂದೆ ಬಂಗಾಳ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಿತು.

ಈಡನ್ ಗಾರ್ಡನ್‌ನಲ್ಲಿ ಗುರುವಾರ ಆರಂಭವಾದ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಸೌರಾಷ್ಟ್ರವು ಆತಿಥೇಯ ತಂಡವನ್ನು 174 ರನ್‌ಗಳಿಗೆ ಕಟ್ಟಿಹಾಕಿತು. ಉನದ್ಕತ್ (44ಕ್ಕೆ3) ಹಾಗೂ ಚೇತನ್ (33ಕ್ಕೆ3) ಬಂಗಾಳದ ಪ್ರಮುಖ ಬ್ಯಾಟರ್‌ಗಳ ವಿಕೆಟ್‌ ಗಳಿಸಿದರು.

ಎರಡನೇ ಇನಿಂಗ್ಸ್ ಆರಂಭಿಸಿದ ಸೌರಾಷ್ಟ್ರ ತಂಡವು 17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 81 ರನ್ ಗಳಿಸಿತು. ಹರ್ವಿಕ್ ದೇಸಾಯಿ (ಬ್ಯಾಟಿಂಗ್ 38) ಹಾಗೂ ‘ರಾತ್ರಿ ಕಾವಲುಗಾರ’ ಚೇತನ್ ಸಕಾರಿಯಾ (ಬ್ಯಾಟಿಂಗ್ 2) ಕ್ರೀಸ್‌ನಲ್ಲಿದ್ದಾರೆ.

ADVERTISEMENT

ಶಹಬಾಜ್, ಅಭಿಷೇಕ್ ಅರ್ಧಶತಕ: ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆ ಹರಿಸಿದ್ದ ಅಭಿಮನ್ಯು ಈಶ್ವರನ್ ಸೇರಿದಂತೆ ಆರು ಬ್ಯಾಟರ್‌ಗಳು 65 ರನ್‌ಗಳಿಗೇ ಪೆವಿಲಿಯನ್‌ಗೆ ಮರಳಿದರು.

ಈ ಹಂತದಲ್ಲಿ ಜೊತೆಯಾದ ಶಹಬಾಜ್ ಅಹಮದ್ (69; 112ಎ, 4X11) ಹಾಗೂ ಅಭಿಷೇಕ್ (50; 98ಎ, 4X8) ಏಳನೇ ವಿಕೆಟ್ ಜೊತೆಯಾಟದಲ್ಲಿ 102 ರನ್‌ ಸೇರಿಸಿದರು. ಆದರೂ ತಂಡದ ಮೊತ್ತವು ಇನ್ನೂರರ ಗಡಿ ದಾಟಲು ಉನದ್ಕತ್ ಬಳಗ ಬಿಡಲಿಲ್ಲ.

ಚಿರಾಗ್ ಜಾನಿ ಹಾಗೂ ಧರ್ಮೇಂದ್ರಸಿಂಹ ಜಡೇಜ ಅವರು ತಲಾ ಎರಡು ವಿಕೆಟ್ ಗಳಿಸಿದರು.

ಸೌರಾಷ್ಟ್ರ ತಂಡವು ಹೋದ ವಾರ ಬೆಂಗಳೂರಿನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವನ್ನು ಸೋಲಿಸಿತ್ತು. ಆ ಸಂದರ್ಭದಲ್ಲಿ ಜೈದೇವ್ ಅವರು ಭಾರತ ಟೆಸ್ಟ್ ತಂಡದಲ್ಲಿ ಆಡಲು ತೆರಳಿದ್ದರು. ಇಂದೋರ್‌ನಲ್ಲಿ ನಡೆದಿದ್ದ ಇನ್ನೊಂದು ಸೆಮಿಫೈನಲ್‌ನಲ್ಲಿ ಬಂಗಾಳವು ಮಧ್ಯಪ್ರದೇಶ ಎದುರು ಜಯಿಸಿತ್ತು.

ಸಂಕ್ಷಿಪ್ತ ಸ್ಕೋರು

ಬಂಗಾಳ: ಮೊದಲ ಇನಿಂಗ್ಸ್: 54.1 ಓವರ್‌ಗಳಲ್ಲಿ 174 (ಶಹಬಾಜ್ ಅಹಮದ್ 69, ಅಭಿಷೇಕ್ ಪೊರೆಲ್ 50, ಜೈದೇವ್ ಉನದ್ಕತ್ 44ಕ್ಕೆ3, ಚೇತನ್ ಸಕಾರಿಯಾ 33ಕ್ಕೆ3, ಚಿರಾಗ್ ಜಾನಿ 33ಕ್ಕೆ2, ಧರ್ಮೇಂದ್ರಸಿಂಹ ಜಡೇಜ 19ಕ್ಕೆ2) ಸೌರಾಷ್ಟ್ರ:17 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 81 (ಹರ್ವಿಕ್ ದೇಸಾಯಿ ಬ್ಯಾಟಿಂಗ್ 38, ವಿಶ್ವರಾಜ್ ಜಡೇಜ 25, ಮುಕೇಶ್ ಕುಮಾರ್ 23ಕ್ಕೆ1, ಆಕಾಶದೀಪ್ 28ಕ್ಕೆ1)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.