ADVERTISEMENT

ಆ್ಯಷಸ್ ಸರಣಿ ನಡುವೆ ದಿಢೀರ್ ನಿವೃತ್ತಿ: ಆಸೀಸ್ ಆರಂಭಿಕನಿಂದ ಅಚ್ಚರಿಯ ನಿರ್ಧಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2026, 6:55 IST
Last Updated 2 ಜನವರಿ 2026, 6:55 IST
<div class="paragraphs"><p>ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಖವಾಜ</p></div>

ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮ್ಮಿನ್ಸ್, ಸ್ಟೀವ್ ಸ್ಮಿತ್ ಮತ್ತು ಖವಾಜ

   

ಚಿತ್ರ ಕೃಪೆ: @19_11_nightmare

ಆಸ್ಟ್ರೇಲಿಯಾದ ಟೆಸ್ಟ್ ತಂಡದ ಆರಂಭಿಕ ಬ್ಯಾಟರ್ ಉಸ್ಮಾನ್ ಖ್ವಾಜಾ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿರುವ ಆ್ಯಷಸ್ ಟೆಸ್ಟ್ ಸರಣಿಯ ಐದು ಹಾಗೂ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಅವರು ನಿವೃತ್ತಿ ತೆಗೆದುಕೊಳ್ಳಲಿದ್ದಾರೆ.

ADVERTISEMENT

ಉಸ್ಮಾನ್ ಖ್ವಾಜಾ ಅವರು ತಮ್ಮ ನಿವೃತ್ತಿ ನಿರ್ಧಾರವನ್ನು ಶುಕ್ರವಾರ ಘೋಷಿಸಿದ್ದಾರೆ. 15 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಆಸ್ಟ್ರೇಲಿಯಾ ತಂಡಕ್ಕಾಗಿ ಅನೇಕ ಪಂದ್ಯಗಳಲ್ಲಿ ಗಮನಾರ್ಹ ಪ್ರದರ್ಶನ ನೀಡಿ ಪಂದ್ಯವನ್ನು ಗೆಲ್ಲಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ‌

ಖ್ವಾಜಾ ಅವರು ಆಸ್ಟ್ರೇಲಿಯಾ ತಂಡದ ಪರ ಇದುವರೆಗೆ 87 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಅದರಲ್ಲಿ 43.39 ರ ಸರಾಸರಿಯಲ್ಲಿ 6,206 ರನ್ ಗಳಿಸಿದ್ದಾರೆ. ಇದರಲ್ಲಿ 16 ಶತಕಗಳು ಮತ್ತು 28 ಅರ್ಧಶತಕಗ ಸೇರಿವೆ. 232 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಖ್ವಾಜಾ ತಮ್ಮ ಮೊದಲ ಅಂತರರಾಷ್ಟ್ರೀಯ ಟೆಸ್ಟ್ ಪಂದ್ಯವನ್ನು ಸಿಡ್ನಿ ಮೈದಾನದಲ್ಲಿ ಆರಂಭಿಸಿದ್ದರು. ಕೊನೆಯ ಪಂದ್ಯವನ್ನೂ ಕೂಡ ಇದೇ ಮೈದಾನದಲ್ಲಿ ಆಡಲಿದ್ದಾರೆ. ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಚಾರವನ್ನು ತಿಳಿಸಿದರು. ಈ ಸಂದರ್ಭದಲ್ಲಿ ಖ್ವಾಜಾ ಅವರ ಪೋಷಕರು, ಪತ್ನಿ ರಾಚೆಲ್ ಮತ್ತು ಇಬ್ಬರೂ ಮಕ್ಕಳು ಹಾಜರಿದ್ದರು.

2011ರಲ್ಲಿ ಸಿಡ್ನಿ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಆಡುವ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ ಪದಾರ್ಪಣೆ ಮಾಡಿದ್ದರು.

ನಿವೃತ್ತಿ ನಿರ್ಧಾರದ ಕುರಿತು ಮಾತನಾಡಿದ ಖ್ವಾಜಾ ‘ನನಗೆ ನನ್ನ ವೃತ್ತಿ ಜೀವನದ ಕುರಿತು ತೃಪ್ತಿ ಇದೆ. ನಾನು ಆಸ್ಟ್ರೇಲಿಯಾ ತಂಡದ ಪರ ಇಷ್ಟೊಂದು ಪಂದ್ಯಗಳನ್ನು ಆಡಿರುವ ಅದೃಷ್ಟಶಾಲಿ ಆಟಗಾರ’. ಈ ಪಯಣದಲ್ಲಿ ನಾನು ಅನೇಕರಿಗೆ ಸ್ಫೂರ್ತಿಯಾಗಿದ್ದೇನೆ ಎಂದು ಭಾವಿಸುತ್ತೇನೆ’ ಎಂದಿದ್ದಾರೆ.

‘ನಾನು ಮೂಲತಃ ಪಾಕಿಸ್ತಾನ ಮೂಲದ ಮುಸ್ಲಿಂ, ಆಸ್ಟ್ರೇಲಿಯಾ ಪರ ಆಡಲು ಸಾಧ್ಯವಾಗುವುದಿಲ್ಲ ಎಂದು ಅನೇಕರು ನನಗೆ ಹೇಳಿದ್ದರು. ಈಗ ನನ್ನನ್ನು ನೋಡಿ ಇನ್ನೂ ಅನೇಕ ಮುಸ್ಲಿಂ ಯುವಕರು ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವ ಕನಸು ಕಾಣಬಹುದು’ ಎಂದು ಭಾವುಕರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.