ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಹರ್ಷಿತ್ ರಾಣಾ ಮತ್ತು ಮೊಯಿನ್ ಅಲಿ
ಗುವಾಹಟಿ: ‘ಹಾಲಿ ಚಾಂಪಿಯನ್’ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ಈ ಬಾರಿಯ ಐಪಿಎಲ್‌ನಲ್ಲಿ ಮೊದಲ ಜಯ ಸಾಧಿಸಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಸೋತಿದ್ದ ತಂಡವು ಎರಡನೇಯ ಪಂದ್ಯದಲ್ಲಿ ಗೆಲುವಿನ ಹಾದಿ ಕಂಡುಕೊಂಡಿತು. ರಾಜಸ್ಥಾನ ರಾಯಲ್ಸ್ ತಂಡವನ್ನು ಮಣಿಸಿತು.
ಈ ಪಂದ್ಯದಲ್ಲಿ ಕಣಕ್ಕಿಳಿದ ಹನ್ನೊಂದರ ಬಳಗದಲ್ಲಿ ಸ್ಪಿನ್, ಆಲ್‌ರೌಂಡರ್ ಮೊಯಿನ್ ಅಲಿ ಅವರನ್ನು ಕೊನೆಯ ಕ್ಷಣದಲ್ಲಿ ಆಯ್ಕೆ ಮಾಡಲಾಗಿತ್ತು. ಅದು ತಂಡಕ್ಕೆ ಫಲ ನೀಡಿತು. ಇಂಗ್ಲೆಂಡ್ ಆಟಗಾರ ಅಲಿ ಅವರು ಹಾಕಿದ ಒಂದು ಸ್ಪೆಲ್ ರಾಜಸ್ಥಾನ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಲು ಕಾರಣವಾಯಿತು. ಮೊಯಿನ್ ಮತ್ತು ವರುಣ್ ಚಕ್ರವರ್ತಿ ಸ್ಪಿನ್ ಮೋಡಿಯ ಮುಂದೆ ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 9ಕ್ಕೆ151 ರನ್ ಗಳಿಸಿತ್ತು. ಈ ಗುರಿಯನ್ನು ಕೆಕೆಆರ್ ಬ್ಯಾಟರ್‌ಗಳು 17.3 ಓವರ್‌ಗಳಲ್ಲಿಯೇ ಮುಟ್ಟಿದರು. ಆರಂಭಕ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅಜೇಯ 97 ರನ್ ಗಳಿಸಿದರು. ತಂಡವು 8 ವಿಕೆಟ್‌ಗಳಿಂದ ಜಯಿಸಿತು.
ಪಂದ್ಯದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಂಡದ ನಾಯಕ ಅಜಿಂಕ್ಯ ರಹಾನೆ, ‘ಮೊಯಿನ್ ಅವರು ತಮಗೆ ಲಭಿಸಿದ ಅವಕಾಶದಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರು ತುಂಬಾ ನುರಿತ ಆಟಗಾರ. ಅವರ ಆಟದಿಂದ ನಮಗೆಲ್ಲ ಸಂತಸವಾಗಿದೆ’ ಎಂದರು.
‘ಸುನಿಲ್ ನಾರಾಯಣ್ ಅವರ ಆರೋಗ್ಯ ಸರಿಯಿಲ್ಲದಿರುವುದು ಇವತ್ತು (ಮಂಗಳವಾರ) ಬೆಳಿಗ್ಗೆಯಷ್ಟೇ ತಿಳಿಯಿತು. ಆಗ ಅಲಿ ಸ್ಥಾನ ಪಡೆದರು. ವರುಣ್ ಮತ್ತು ಸುನಿಲ್ ಬಹಳ ಪರಿಣಾಮಕಾರಿ ಸ್ಪಿನ್ ಜೋಡಿಯಾಗಿದ್ದಾರೆ. ಸುನಿಲ್ ಅವರ ಕೊರತೆ ಕಾಡದಂತೆ ಮೊಯಿನ್ ಅಲಿ ಆಡಿದರು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.