ವಿಹಾನ್ ಮಲ್ಹೋತ್ರಾ
(ಬಿಸಿಸಿಐ ಚಿತ್ರ)
ಬುಲಾವಯೊ: 19 ವರ್ಷದೊಳಗಿವರ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಮಂಗಳವಾರ) ಜಿಂಬಾಬ್ವೆ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ತಂಡದ ಆಟಗಾರ ವಿಹಾನ್ ಮಲ್ಹೋತ್ರಾ ಭರ್ಜರಿ ಶತಕದ ಸಾಧನೆ ಮಾಡಿದ್ದಾರೆ.
ವಿಹಾನ್ ಅಮೋಘ ಶತಕ ಮತ್ತು ವೈಭವ್ ಸೂರ್ಯವಂಶಿ (52) ಹಾಗೂ ಅಭಿಜ್ಞಾನ್ ಕುಂಡು (61) ಅರ್ಧಶತಕಗಳ ನೆರವಿನಿಂದ ಭಾರತ ತಂಡವು ನಿಗದಿತ 50 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 352 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ವೈಭವ್ ಹಾಗೂ ಆ್ಯರನ್ ಜಾರ್ಜ್ (23) ಮೊದಲ ವಿಕೆಟ್‌ಗೆ 44 ರನ್‌ಗಳ ಜೊತೆಯಾಟ ಕಟ್ಟಿದರು. ನಾಯಕ ಆಯುಷ್ ಮ್ಹಾತ್ರೆ (21) ಬೇಗನೇ ನಿರ್ಗಮಿಸಿದರು.
ಮತ್ತೊಂದೆಡೆ ಎಂದಿನ ಶೈಲಿಯಲ್ಲಿ ಬೀಸಾಟವಾಡಿದ ಸೂರ್ಯವಂಶಿ 30 ಎಸೆತಗಳಲ್ಲೇ ತಲಾ ನಾಲ್ಕು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 52 ರನ್ ಗಳಿಸಿದರು.
ಬಳಿಕ ಐದನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ವಿಹಾನ್ ತಂಡವನ್ನು ಬೃಹತ್ ಮೊತ್ತದತ್ತ ಮುನ್ನಡೆಸಿದರು. ಅವರಿಗೆ ವಿಕೆಟ್ ಕೀಪರ್ ಬ್ಯಾಟರ್ ಅಭಿಜ್ಞಾನ್ ಕುಂಡು ಅವರಿಂದ ಉತ್ತಮ ಬೆಂಬಲ ದೊರಕಿತು.
ಕಲಾತ್ಮಕ ಇನಿಂಗ್ಸ್ ಕಟ್ಟಿದ ವಿಹಾನ್ ಆಕರ್ಷಕ ಶತಕ ಗಳಿಸಿದರು. ಅಲ್ಲದೆ 107 ಎಸೆತಗಳಲ್ಲಿ 109 ರನ್ ಗಳಿಸಿ (7 ಬೌಂಡರಿ) ಔಟಾಗದೆ ಉಳಿದರು.
ಅಭಿಜ್ಞಾನ್ 61 ರನ್ ಗಳಿಸಿ ಔಟ್ ಆದರು. ಕೊನೆಯಲ್ಲಿ ಖಿಲಾನ್ ಪಟೇಲ್ (30 ರನ್, 12 ಎಸೆತ) ಹಾಗೂ ಆರ್‌ಎಸ್ ಅಂಬ್ರಿಷ್ (21) ಉಪಯುಕ್ತ ಕಾಣಿಕೆ ನೀಡಿದರು.
ಐಪಿಎಲ್ ಮಿನಿ ಹರಾಜಿನಲ್ಲಿ ₹30 ಲಕ್ಷ ಮೂಲಬೆಲೆಗೆ 19 ವರ್ಷದ ವಿಹಾನ್ ಮಲ್ಹೋತ್ರಾ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಖರೀದಿಸಿತು. ಇದೀಗ ಭಾರತದ ಪರ ಅಮೋಘ ಶತಕದ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.