
ವೈಭವ್ ಸೂರ್ಯವಂಶಿ
(ಪಿಟಿಐ ಚಿತ್ರ)
ರಾಂಚಿ: ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಯುವ ಎಡಗೈ ಸ್ಫೋಟಕ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ (190), ನಾಯಕ ಸಕೀಬುಲ್ ಗನಿ (128*) ಮತ್ತು ಆಯುಷ್ ಲೋಹರೂಕ (116) ಸಿಡಿಲಬ್ಬರದ ಶತಕಗಳ ನೆರವಿನಿಂದ ಬಿಹಾರ ತಂಡವು ನಿಗದಿತ 50 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 574 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.
ಇದು 'ಲಿಸ್ಟ್ ಎ' ಕ್ರಿಕೆಟ್ ಇತಿಹಾಸದಲ್ಲೇ ತಂಡವೊಂದರಿಂದ ದಾಖಲಾದ ಗರಿಷ್ಠ ಮೊತ್ತವಾಗಿದೆ. ಆ ಮೂಲಕ ಬಿಹಾರ ನೂತನ ವಿಶ್ವ ದಾಖಲೆ ಬರೆದಿದೆ.
ಅರುಣಾಚಲ ಪ್ರದೇಶ ವಿರುದ್ಧ ರಾಂಚಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಹಲವು ದಾಖಲೆಗಳು ಸೃಷ್ಟಿಯಾಗಿವೆ. 2022ರಲ್ಲಿ ಅರುಣಾಚಲ ಪ್ರದೇಶದ ವಿರುದ್ಧವೇ ತಮಿಳುನಾಡು 506 ರನ್ ಪೇರಿಸಿರುವುದು ಈವರೆಗಿನ ದಾಖಲೆಯಾಗಿತ್ತು.
ಗನಿ 32, ಸೂರ್ಯವಂಶಿ 36 ಎಸೆತಗಳಲ್ಲಿ ಶತಕ...
ಈ ಪಂದ್ಯದಲ್ಲಿ 14ರ ಹರೆಯದ ವೈಭವ್ ಸೂರ್ಯವಂಶಿ ಕೇವಲ 36 ಎಸೆತಗಳಲ್ಲಿ ಶತಕ ಗಳಿಸಿದರು. ಈ ದಾಖಲೆಯನ್ನು ಕೆಲವೇ ಹೊತ್ತಿನಲ್ಲಿ ನಾಯಕ ಗನಿ ಮುರಿದರು. 32 ಎಸೆತಗಳಲ್ಲಿ ಗನಿ ಶತಕ ಗಳಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ಅತಿ ವೇಗದ ಶತಕ ಗಳಿಸಿದ ಭಾರತೀಯ ಬ್ಯಾಟರ್ ಎನಿಸಿದ್ದಾರೆ.
ವೈಭವ್ ಸೂರ್ಯವಂಶಿ 84 ಎಸೆತಗಳಲ್ಲಿ 190 ರನ್ ಗಳಿಸಿದರು. ಅಲ್ಲದೆ ಕೇವಲ 10 ರನ್ ಅಂತರದಲ್ಲಿ ದ್ವಿಶತಕ ವಂಚಿತರಾದರು. ವೈಭವ್ ಇನಿಂಗ್ಸ್‌ನಲ್ಲಿ 16 ಬೌಂಡರಿ ಹಾಗೂ 15 ಸಿಕ್ಸರ್ ಸೇರಿದ್ದವು.
ಮತ್ತೊಂದೆಡೆ ಗನಿ, 40 ಎಸೆತಗಳಲ್ಲಿ 10 ಬೌಂಡರಿ ಹಾಗೂ 12 ಸಿಕ್ಸರ್ ನೆರವಿನಿಂದ 128 ರನ್ ಗಳಿಸಿ ಔಟಾಗದೆ ಉಳಿದರು.
ವಿಕೆಟ್ ಕೀಪರ್ ಬ್ಯಾಟರ್ ಆಯುಷ್ ಸಹ 56 ಎಸೆತಗಳಲ್ಲಿ 116 ರನ್ ಗಳಿಸಿ (11 ಬೌಂಡರಿ, 8 ಸಿಕ್ಸರ್) ಅಬ್ಬರಿಸಿದರು.
ಅರುಣಾಚಲ ಪ್ರದೇಶದ ಮಿಬೊಮ್ ಮೊಸು ಒಂಬತ್ತು ಓವರ್‌ಗಳಲ್ಲಿ 116 ರನ್ ನೀಡಿ ದುಬಾರಿಯೆನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.