
ವಿರಾಟ್ ಕೊಹ್ಲಿ
ಕೃಪೆ: ಪಿಟಿಐ
ಇಂದೋರ್: ಇಲ್ಲಿನ ಹೋಳ್ಕರ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರನೇ ಹಾಗೂ ಸರಣಿ ನಿರ್ಧರಿಸುವ ಪಂದ್ಯದಲ್ಲಿ ಟೀಂ ಇಂಡಿಯಾದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 54ನೇ ಶತಕ ಸಿಡಿಸಿ ಮಿಂಚಿದ್ದಾರೆ.
338 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡದ ಪರ ಬ್ಯಾಟರ್‌ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಿಕೊಂಡರು. ತಂಡ ಸಂಕಷ್ಟದಲ್ಲಿದ್ದಾಗ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ 7ನೇ ಶತಕ ಸಿಡಿಸಿದರು. ಆ ಮೂಲಕ ಕಿವೀಸ್ ವಿರುದ್ಧ ಅತೀ ಹೆಚ್ಚು ಶತಕ ಸಿಡಿಸಿದ ಬ್ಯಾಟರ್ ಎಂಬ ದಾಖಲೆ ಮಾಡಿದರು.
ನ್ಯೂಜಿಲೆಂಡ್ ವಿರುದ್ಧ ಅತೀ ಹೆಚ್ಚು ಶತಕ
ವಿರಾಟ್ ಕೊಹ್ಲಿ– 7 ಶತಕ (36 ಇನಿಂಗ್ಸ್)
ರಿಕಿ ಪಾಂಟಿಂಗ್– 6 ಶತಕ (50 ಇನಿಂಗ್ಸ್)
ವೀರೇಂದ್ರ ಸೆಹ್ವಾಗ್– 6 ಶತಕ (23 ಇನಿಂಗ್ಸ್)
ಸಚಿನ್ ತೆಂಡೂಲ್ಕರ್ – 5 ಶತಕ (41 ಇನಿಂಗ್ಸ್)
ಸನತ್ ಜಯಸೂರ್ಯ– 5 ಶತಕ (45 ಇನಿಂಗ್ಸ್)
ಈ ಶತಕದ ಮೂಲಕ ವಿರಾಟ್ ಕೊಹ್ಲಿಯವರು ಟೆಸ್ಟ್, ಏಕದಿನ ಹಾಗೂ ಟಿ20 ಅಂತತರರಾಷ್ಟ್ರೀಯ ಕ್ರಿಕೆಟ್‌ನಿಂದ ತಮ್ಮ 85ನೇ ಶತಕ ಸಿಡಿಸಿದ ದಾಖಲೆ ಮಾಡಿದರು. ಏಕದಿನ ಕ್ರಿಕೆಟ್‌ನಲ್ಲಿ 54ನೇ ಶತಕ, ಭಾರತದಲ್ಲಿ ಇದು ಅವರ 41ನೇ ಶತಕವಾಗಿದೆ.
ಪಾಟಿಂಗ್ ಅತ್ಯಧಿಕ ರನ್ ದಾಖಲೆ ಮುರಿದ ಕೊಹ್ಲಿ
ವಿರಾಟ್ ಕೊಹ್ಲಿ ಇಂದಿನ ಪಂದ್ಯದಲ್ಲಿ ಶತಕ ಸಿಡಿಸುವ ಮೂಲಕ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಮೂರನೇ ಕ್ರಮಾಂಕದಲ್ಲಿ 12,655 ರನ್ ಕಲೆಹಾಕಿದ್ದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆ ಮುರಿದಿದ್ದಾರೆ.
ಇದರ ಜೊತೆಗೆ ಇಂದಿನ ಶತಕದ ಮೂಲಕ ವಿರಾಟ್ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ರನ್ ಚೇಸ್ ಮಾಡುವಾಗ ಸಿಡಿಸಿದ 29 ಶತಕ ಇದಾಗಿದೆ.
ಅಂತಿಮವಾಗಿ ವಿರಾಟ್ ಕೊಹ್ಲಿ ಅವರು 108 ಎಸೆತಗಳಲ್ಲಿ 10 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 124 ರನ್ ಗಳಿಸಿ ಕ್ರಿಸ್ತಿಯನ್ ಕ್ಲಾರ್ಕ್ ಅವರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.