ADVERTISEMENT

ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ನನ್ನಲ್ಲಿ ಪರಿಣಾಮ ಬೀರಿತು: ವಿರಾಟ್ ಕೊಹ್ಲಿ

ಪಿಟಿಐ
Published 19 ಅಕ್ಟೋಬರ್ 2025, 10:22 IST
Last Updated 19 ಅಕ್ಟೋಬರ್ 2025, 10:22 IST
<div class="paragraphs"><p>ವಿರಾಟ್ ಕೊಹ್ಲಿ</p></div>

ವಿರಾಟ್ ಕೊಹ್ಲಿ

   

(ಚಿತ್ರ ಕೃಪೆ: X/@StarSportsIndia)

ಪರ್ತ್: ಆಸ್ಟ್ರೇಲಿಯಾದ ಆಕ್ರಮಣಶೀಲ ಕ್ರಿಕೆಟ್ ಶೈಲಿಯು ಓರ್ವ ಕ್ರಿಕೆಟಿಗ ಹಾಗೂ ವ್ಯಕ್ತಿತ್ವದ ಮೇಲೆ ಹೇಗೆ ಪರಿಣಾಮ ಬೀರಿತು ಎಂಬುದನ್ನು ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿವರಿಸಿದ್ದಾರೆ.

ADVERTISEMENT

ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ವಿರಾಟ್, ಮೊದಲ ಏಕದಿನ ಪಂದ್ಯಕ್ಕೂ ಮುನ್ನ ವೀಕ್ಷಕ ವಿವರಣೆಗಾರ ರವಿ ಶಾಸ್ತ್ರಿ ಅವರೊಂದಿಗೆ ಈ ಕುರಿತು ಮನ ಬಿಚ್ಚಿದ್ದಾರೆ.

ಆಸ್ಟ್ರೇಲಿಯಾ ಕ್ರಿಕೆಟಿಗರ ವರ್ತನೆ, ದಿಟ್ಟ ಹಾಗೂ ಆಕ್ರಮಣಕಾರಿ ಶೈಲಿಯ ಕ್ರಿಕೆಟ್ ತಮ್ಮ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿತು ಎಂದು ವಿರಾಟ್ ತಿಳಿಸಿದ್ದಾರೆ.

'2011ರಲ್ಲಿ ಮೊದಲ ಸಲ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ ಪ್ರೇಕ್ಷಕರಿಂದಲೂ ಕಹಿ ಅನುಭವ ಎದುರಾಗಿತ್ತು. ಆದರೆ ಅದು ಕ್ರಮೇಣ ಗೌರವವಾಗಿ ಪರಿವರ್ತನೆಗೊಂಡಿತು' ಎಂದಿದ್ದಾರೆ.

'ನಾನು ಚಿಕ್ಕವನಿದ್ದಾಗ ಬೆಳಿಗ್ಗೆ ಬೇಗನೇ ಎದ್ದು ಆಸ್ಟ್ರೇಲಿಯಾದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳನ್ನು ನೋಡುತ್ತಿದ್ದೆ. ಎದುರಾಳಿ ತಂಡದ ಆಟಗಾರರನ್ನು ಆಸೀಸ್ ತಂಡದವರು ಬೆಂಬಿಡದೇ ಕಾಡುತ್ತಿದ್ದರು. ಚೆಂಡು ಪುಟಿದೇಳುತ್ತಿತ್ತು. ಅಂತಹ ಪರಿಸ್ಥಿತಿಯಲ್ಲಿ ಕಠಿಣ ಎದುರಾಳಿ ವಿರುದ್ಧ ಆಡಲು ಸಾಧ್ಯವಾದರೆ ಓರ್ವ ಕ್ರಿಕೆಟಿಗನಾಗಿ ಹೆಮ್ಮೆಯ ವಿಷಯ ಎಂದು ಭಾವಿಸಿದ್ದೆ' ಎಂದಿದ್ದಾರೆ.

'ಇತ್ತಂಡಗಳ ದಿಗ್ಗಜರು ನನಗೆ ಪ್ರೇರಣೆಯಾಗಿದ್ದರು. ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವೀರೇಂದ್ರ ಸೆಹ್ವಾಗ್ ಬಗ್ಗೆ ಅಪಾರ ಗೌರವವಿತ್ತು' ಎಂದು ಅವರು ತಿಳಿಸಿದ್ದಾರೆ.

'ಆಸೀಸ್ ಆಟದ ಶೈಲಿಯು ಇಲ್ಲಿಗೆ ಬಂದು ಅವರದ್ದೇ ರೀತಿಯಲ್ಲಿ ಆಡಲು ನನಗೆ ಸ್ಫೂರ್ತಿಯಾಗಿತ್ತು. ಇದು ಓರ್ವ ಕ್ರಿಕೆಟಿಗನಾಗಿ ಕಠಿಣ ವ್ಯಕ್ತಿತ್ವವನ್ನು ರೂಪಿಸಲು ನೆರವಾಯಿತು. ಮಾನಸಿಕ ಮನೋಬಲವನ್ನು ಪರೀಕ್ಷಿಸಿತು' ಎಂದಿದ್ದಾರೆ.

'ಆಸ್ಟ್ರೇಲಿಯಾದಂತಹ ಪ್ರತಿಕೂಲ ಸನ್ನಿವೇಶದಲ್ಲಿ ತನ್ನ ಶ್ರೇಷ್ಠ ಪ್ರದರ್ಶನವನ್ನೇ ನೀಡದ ಹೊರತು ಅನ್ಯ ಮಾರ್ಗ ಇರಲಿಲ್ಲ. ಇದು ಮೈದಾನದ ಹೊರಗೆ ಗೌರವ ಗಿಟ್ಟಿಸಲು ಸಹಕಾರಿಯಾಯಿತು' ಎಂದು ಕೊಹ್ಲಿ ತಿಳಿಸಿದ್ದಾರೆ.

'ಆಸ್ಟ್ರೇಲಿಯಾಕ್ಕೆ ಸದಾ ಭೇಟಿ ನೀಡುವುದನ್ನು ಇಷ್ಟಪಡುತ್ತಿರುವುದಾಗಿ ಕೊಹ್ಲಿ ತಿಳಿಸಿದ್ದಾರೆ. ಇಲ್ಲಿನ ಕಠಿಣ ಪರಿಸ್ಥಿತಿಯಲ್ಲೂ ಅತ್ಯುತ್ತಮ ಕ್ರಿಕೆಟ್ ಆಡಿದರೆ ಗೌರವವನ್ನು ಗಳಿಸಲು ಸಾಧ್ಯವಾಗುತ್ತದೆ. ಇದು ಈ ದೇಶದಲ್ಲಿ ನನಗಾದ ಅನುಭವ' ಎಂದಿದ್ದಾರೆ.

ಈ ವರ್ಷ ಐಪಿಎಲ್ ಗೆಲುವಿನ ಬಳಿಕ ಕುಟುಂಬದೊಂದಿಗೆ ಅಮೂಲ್ಯ ಸಮಯ ಕಳೆದಿರುವುದಾಗಿ ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ವಿರಾಟ್ ಹೇಳಿದ್ದಾರೆ.

'ಕಳೆದ 15-20 ವರ್ಷಗಳ ವೃತ್ತಿ ಜೀವನದಲ್ಲಿ ಹೆಚ್ಚು ವಿಶ್ರಾಂತಿ ಪಡೆದಿಲ್ಲ. ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದೇನೆ. ಹಾಗಾಗಿ ಈ ಬಿಡುವಿನ ಸಮಯ ಹೆಚ್ಚು ಆನಂದದಾಯಕವಾಗಿತ್ತು' ಎಂದಿದ್ದಾರೆ.

'ಆಸ್ಟ್ರೇಲಿಯಾ ಏಕದಿನ ಸರಣಿಗೆ ಉತ್ತಮ ತಯಾರಿ ನಡೆಸಿದ್ದೇನೆ. ನಾನು ಈಗಲೂ ಫಿಟ್ ಆಗಿದ್ದೇನೆ. ಮಾನಸಿಕ ಹಾಗೂ ದೈಹಿಕವಾಗಿ ಸವಾಲು ಎದುರಿಸಲು ಸಿದ್ಧವಾಗಿದ್ದೇನೆ' ಎಂದು ತಿಳಿಸಿದ್ದಾರೆ. IND vs AUS 1st ODI: 26 ಓವರ್‌ಗಳ ಪಂದ್ಯ; ಆಸೀಸ್ ಗೆಲುವಿಗೆ 131 ರನ್ ಗುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.