ADVERTISEMENT

ಬ್ಯಾಟ್ ಹಿಡಿಕೆ ಕತ್ತರಿಸಿದ ಕೊಹ್ಲಿ: ಕಾಲೆಳೆದ ಪಾಂಡ್ಯ!

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2020, 18:03 IST
Last Updated 11 ಸೆಪ್ಟೆಂಬರ್ 2020, 18:03 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ದುಬೈ: ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ಇದೀಗ ತಮ್ಮ ಸಂಗ್ರಹದಲ್ಲಿರುವ ಬ್ಯಾಟ್‌ಗಳನ್ನು ಅಂತಿಮ ರೂಪ ಕೊಡುತ್ತಿದ್ದಾರೆ. ಸ್ವತಃ ಗರಗಸ ಹಿಡಿದು ಬ್ಯಾಟ್‌ಗಳ ಹಿಡಿಕೆಗಳನ್ನು ಅಗತ್ಯಕ್ಕೆ ತಕ್ಕಷ್ಟು ಕೊರೆದು ಸಿದ್ಧಮಾಡಿಕೊಳ್ಳುತ್ತಿರುವ ಚಿತ್ರವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ್ದಾರೆ.

‘ಇದು ಬಹಳ ಸಣ್ಣ ವಿಷಯವಾದರೂ ಮಹತ್ವದ್ದು. ಬ್ಯಾಟ್‌ನಲ್ಲಿ ಕೆಲವೇ ಕೆಲವು ಸೆಂಟಿಮೀಟರ್‌ನಷ್ಟು ವ್ಯತ್ಯಾಸವಾದರೂ ಹಿಡಿತ ಅಸಮತೋಲನಗೊಳ್ಳುತ್ತದೆ. ನನ್ನ ಬ್ಯಾಟುಗಳನ್ನು ಚೆನ್ನಾಗಿ ನಿರ್ವಹಿಸುವುದನ್ನು ಪ್ರೀತಿಸುತ್ತೇನೆ’ ಎಂದು ವಿಶ್ವದ ಅಗ್ರಶ್ರೇಯಾಂಕದ ಬ್ಯಾಟ್ಸ್‌ಮನ್ ವಿರಾಟ್ ಬರೆದಿದ್ದಾರೆ.

ADVERTISEMENT

ಅವರ ಚಿತ್ರಗಳಿಗೆ ಹಲವು ಆಟಗಾರರು ಮತ್ತು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಇಂಡಿಯನ್ಸ್‌ ತಂಡದ ಅಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ‘ನನ್ನ ಕೆಲವು ಬ್ಯಾಟ್‌ಗಳನ್ನೂ ನಿಮಗೆ ಕಳಿಸುತ್ತಿದ್ದೇನೆ. ರೆಡಿ ಮಾಡಿಕೊಡಿ’ಎಂದು ಚಟಾಕಿ ಹಾರಿಸಿದ್ದಾರೆ.

ವಿರಾಟ್ ತಮ್ಮ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರೊಂದಿಗೆ ದುಬೈನಲ್ಲಿದ್ದಾರೆ.

17ರಂದು ಯುಎಇಗೆ ಕಮಿನ್ಸ್‌

ಅಬುಧಾಬಿ(ಪಿಟಿಐ): ಇಂಗ್ಲೆಂಡ್ ತಂಡದ ಏಯಾನ್ ಮಾರ್ಗನ್ ಮತ್ತು ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ ಅವರು ಐಪಿಎಲ್‌ನ ಆರಂಭದಿಂದಲೇ ಆಡಲಿದ್ದಾರೆ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ವೆಂಕಿ ಮೈಸೂರ್ ಹೇಳಿದ್ದಾರೆ.

‘ಸೆಪ್ಟೆಂಬರ್ 17ರಂದು ಅವರು ಯುಎಇಗೆ ಬರುವರು. 23ರಂದು ನಮ್ಮ ತಂಡವು ಮೊದಲ ಪಂದ್ಯ ಆಡಲಿದೆ. ಆ ವೇಳೆಗೆ ಅವರಿಬ್ಬರೂ ಆರು ದಿನಗಳ ಕಡ್ಡಾಯ ಕ್ವಾರಂಟೈನ್ ಮುಗಿಸಿರುತ್ತಾರೆ. ನಂತರ ಅವರು ಪಂದ್ಯದಲ್ಲಿ ಆಡಬಹುದು’ ಎಂದು ವೆಂಕಿ ತಿಳಿಸಿದ್ದಾರೆ.

ಇಂಗ್ಲೆಂಡ್–ಆಸ್ಟ್ರೇಲಿಯಾ ನಡುವಣದ ಏಕದಿನ ಕ್ರಿಕೆಟ್ ಸರಣಿಯ ಕೊನೆಯ ಪಂದ್ಯವು ಇದೇ 16ರಂದು ಮುಗಿಯುತ್ತದೆ. ಅದೇ ದಿನ ಇಂಗ್ಲೆಂಡ್‌ ತಂಡದ ನಾಯಕ ಮಾರ್ಗನ್, ಟಾಮ್ ಬೆಂಟನ್ ಮತ್ತು ಆಸ್ಟ್ರೇಲಿಯಾದ ಕಮಿನ್ಸ್‌ ಅಬುಧಾಬಿಗೆ ಬರಲಿದ್ದಾರೆ.

ಆದರೆ, ಅಬುಧಾಬಿಯಲ್ಲಿ ವಿದೇಶದಿಂದ ಬರುವವರಿಗೆ 14 ದಿನಗಳ ಕ್ವಾರಂಟೈನ್ ನಿಯಮವಿದೆ. ಅದರಲ್ಲಿ ರಿಯಾಯಿತಿ ನೀಡುವಂತೆ ತಂಡದ ಆಧಿಕಾರಿಗಳು ಸ್ಥಳೀಯ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.