ADVERTISEMENT

ನಾಯಕತ್ವದ ಹೊರೆ ಕಳಚಿಕೊಂಡಿರುವ ಕೊಹ್ಲಿ ಎದುರಾಳಿಗಳಿಗೆ ಅಪಾಯಕಾರಿ: ಮ್ಯಾಕ್ಸ್‌ವೆಲ್

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 18:44 IST
Last Updated 17 ಮಾರ್ಚ್ 2022, 18:44 IST
ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌‌ವೆಲ್: ಪಿಟಿಐ ಚಿತ್ರ
ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮ್ಯಾಕ್ಸ್‌‌ವೆಲ್: ಪಿಟಿಐ ಚಿತ್ರ   

ಬೆಂಗಳೂರು: ನಾಯಕತ್ವದ ಜವಾಬ್ದಾರಿಯನ್ನು ಕಳಚಿಕೊಂಡಿರುವ ವಿರಾಟ್ ಕೊಹ್ಲಿ ಈಗ ನಿರಾಳವಾಗಿದ್ದಾರೆ. ಒತ್ತಡರಹಿತ ವಿರಾಟ್ ಎದುರಾಳಿ ತಂಡಗಳ ಪಾಲಿಗೆ ಕಠಿಣ ಸವಾಲಾಗಬಲ್ಲರು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಈಚೆಗೆ ಟಿ20 ಮತ್ತು ಟೆಸ್ಟ್ ತಂಡಗಳ ನಾಯಕತ್ವ ಬಿಟ್ಟುಕೊಟ್ಟಿದ್ದರು. ಅಲ್ಲದೇ ಆರ್‌ಸಿಬಿ ನಾಯಕತ್ವವನ್ನೂ ಬಿಟ್ಟಿದ್ದರು. ಏಕದಿನ ಕ್ರಿಕೆಟ್ ತಂಡದ ನಾಯಕತ್ವದಿಂದ ಅವರನ್ನು ಬಿಸಿಸಿಐ ಕೈಬಿಟ್ಟಿತ್ತು. ಈಚೆಗಷ್ಟೇ ಆರ್‌ಸಿಬಿಗೆ ದಕ್ಷಿಣ ಆಫ್ರಿಕಾದ ಆಟಗಾರ ಫಫ್ ಡುಪ್ಲೆಸಿಯನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ.

‘ವಿರಾಟ್ ಕೆಲವು ದಿನಗಳಿಂದ ತಮ್ಮ ನೈಜ ಶೈಲಿಯ ಆಟವಾಡುತ್ತಿಲ್ಲ ಎಂಬುದನ್ನು ಗಮನಿಸಿದ್ದೇವೆ. ಆಗ ಅವರ ಮೇಲೆ ನಾಯಕತ್ವದ ಒತ್ತಡದಿಂದ ಆ ರೀತಿಯಾಗಿರಬಹುದು. ಈಗ ಹೊರೆಯನ್ನು ಇಳಿಸಿಕೊಂಡಿದ್ದಾರೆ. ಆದ್ದರಿಂದ ಎದುರಾಳಿ ಆಟಗಾರರಿಗೆ ಇದು ಆತಂಕದ ವಿಷಯ’ ಎಂದು ಆಸ್ಟ್ರೇಲಿಯಾದ ಆಟಗಾರ ಮ್ಯಾಕ್ಸ್‌ವೆಲ್ ಆರ್‌ಸಿಬಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದಾರೆ.

ADVERTISEMENT

‘ಈ ನಿರಾಳ ಸ್ಥಿತಿಯಲ್ಲಿ ಅವರು ಮುಂದಿನ ಕೆಲವು ವರ್ಷಗಳವರೆಗೆ ಕ್ರಿಕೆಟ್ ಅನ್ನು ಮನಸಾರೆ ಆಸ್ವಾದಿಸುವರು. ನನ್ನ ಮತ್ತು ಕೊಹ್ಲಿಯ ಒಡನಾಟದ ಆಧಾರದಲ್ಲಿ ಮಾತನಾಡುವುದಾದರೆ, ಈ ವರ್ಷ ಅವರು ಪರಿಪಕ್ವಗೊಂಡಿದ್ದಾರೆ. ತಮ್ಮ ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಭಾವನಾತ್ಮಕವಾಗಿ ವರ್ತಿಸುವ ರೀತಿಯಲ್ಲಿ ಪ್ರಬುದ್ಧತೆ ಇದೆ. ಆಟದ ಬಗ್ಗೆ ಚರ್ಚಿಸುವಾಗ ಬಹಳ ತಾಳ್ಮೆಯುತವಾಗಿ ಇರುತ್ತಾರೆ. ಅತ್ಯುತ್ಸಾಹ ಮತ್ತು ಆಕ್ರಮಣಶೀಲ ಕೊಹ್ಲಿಯನ್ನು ನೋಡಿದ್ದ ನನಗೆ ಅವರ ಈಗಿನ ವರ್ತನೆ ಅಚ್ಚರಿಮೂಡಿಸುತ್ತದೆ. ಇದು ಒಳ್ಳೆಯ ಬೆಳವಣಿಗೆಯೂ ಹೌದು’ ಎಂದಿದ್ದಾರೆ.

ಇದೇ 26ರಿಂದ ಐಪಿಎಲ್ 15ನೇ ಆವೃತ್ತಿಯು ಆರಂಭವಾಗಲಿದೆ. ಮುಂಬೈ ಮತ್ತು ಪುಣೆಯಲ್ಲಿ ಪಂದ್ಯಗಳು ನಡೆಯಲಿವೆ. ಈ ಸಲ ಒಟ್ಟು ಹತ್ತು ತಂಡಗಳು ಕಣಕ್ಕಿಳಿಯಲಿವೆ. ಲಖನೌ ಸೂಪರ್ ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್‌ ತಂಡಗಳು ಹೊಸದಾಗಿ ಸೇರ್ಪಡೆಯಾಗಿವೆ.

ಆರ್‌ಸಿಬಿಗೆ ಪ್ಲೇ ಬೋಲ್ಡ್‌ ಸ್ವಾಗತ
ಮುಂಬೈ ಇಂಡಿಯನ್ಸ್ ತಂಡ ಮತ್ತು ಮಾಯಾನಗರಿ ಮುಂಬೈ ಈ ಬಾರಿ ವಿಭಿನ್ನವಾದ ಪಾತ್ರ ವಹಿಸುತ್ತಿವೆ.15ನೇ ಆವೃತ್ತಿಯ ಟೂರ್ನಿ ನಡೆಸಲು ಮುಂಬೈ ನಗರಿ ವೇದಿಕೆಯಾಗಿದೆ. ಮುಂಬೈ ಇಂಡಿಯನ್ಸ್ ಸ್ಪರ್ಧಾಕಣದಲ್ಲಿ ತಾನು ಎದುರಿಸಲಿರುವ ತಂಡಗಳಿಗೆ ‘ಸ್ವಾಗತ’ ಕೋರುತ್ತಿದೆ.ನಗರದ ಆಯಕಟ್ಟಿನ ಸ್ಥಳಗಳಲ್ಲಿ ‘ವೆಲ್‌ಕಮ್ ದಿಲ್‌ ಕೋಲ್‌ ಕೆ’ ಒಕ್ಕಣೆಯಿರುವ ಬಿಲ್‌ಬೋರ್ಡ್‌ ಅಳವಡಿಸಲಾಗುತ್ತಿದೆ. ಪ್ರತಿಯೊಂದು ತಂಡಕ್ಕೂ ಪ್ರತ್ಯೇಕ ಸ್ವಾಗತ ಫಲಕಗಳನ್ನು ಅಳವಡಿಸಲಾಗುತ್ತಿದೆ.

ಬೆಂಗಳೂರು ತಂಡಕ್ಕೆ ’ಪ್ಲೇ ಬೋಲ್ಡ್‌ ’, ಗುಜರಾತ್ ಟೈಟನ್ಸ್‌ಗೆ ’ಮಜಾ ಥಿ ರಾಮ್ಜೊ’, ಲಖನೌ ಸೂಪರ್ ಜೈಂಟ್ಸ್‌ಗೆ ’ಖೇಲ್ ನವಾಬಿ’, ಚೆನ್ನೈ ತಂಡಕ್ಕೆ ‘ವಿಷಲ್ ಪೋಡು’, ಕೋಲ್ಕತ್ತ ತಂಡಕ್ಕೆ ‘ಕೊರ್ಬೊ ಲೊರ್ಬೊ ಜೀತ್ಬೊ’, ಪಂಜಾಬ್‌ಗೆ ‘ಚಕ್‌ ದೇ ಪಟ್ಟೆ’, ಡೆಲ್ಲಿಗೆ ‘ಖೇಲೊ ದಿಲ್ಲಿ’, ಹೈದರಾಬಾದ್‌ಗೆ ‘ಶೈನ್ ಕರೋಂ’ ಮತ್ತು ರಾಜಸ್ಥಾನಕ್ಕೆ ’ಹಲ್ಲಾ ಬೋಲ್‌’ ಎಂಬ ಫಲಕಗಳಿವೆ.

‘ಸೃಜನಾತ್ಮಕವಾದ ಕಲೆ ಮತ್ತು ಗೌರವಪೂರ್ವಕ ಒಕ್ಕಣೆಗಳನ್ನು ಬಳಸಿರುವ ಫಲಕಗಳನ್ನು ಎಲ್ಲೆಡೆ ಹಾಕಲಾಗಿದೆ. ನಮ್ಮ ನಗರಕ್ಕೆ ಬರುವ ಪ್ರತಿಯೊಂದು ತಂಡವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಮುಂಬೈ ಇಂಡಿಯನ್ಸ್‌ ವಕ್ತಾರ ತಿಳಿಸಿದ್ದಾರೆ.

ಮುಂಬೈನ ಸ್ಥಳೀಯ ಸಾರಿಗೆ ಬಸ್‌ಗಳ ಮೇಲೂ ಐಪಿಎಲ್ ತಂಡಗಳ ಚಿತ್ರಗಳನ್ನು ರಚಿಸಿ ಪ್ರಚಾರ ಮಾಡಲಾಗುತ್ತಿದೆ.

‘ಪಾಂಟಿಂಗ್‌ ಪಾಠಕ್ಕೆ ಉತ್ಸುಕನಾಗಿದ್ದೇನೆ’
ಮುಂಬೈ:
‘ಕೋಚ್ ರಿಕಿ ಪಾಂಟಿಂಗ್ ಅವರಿಂದ ಬ್ಯಾಟಿಂಗ್ ಕೌಶಲಗಳ ಕುರಿತು ಕಲಿಯಲು ಉತ್ಸುಕನಾಗಿದ್ದೇನೆ. ಇದರಿಂದ ನನ್ನ ಆಟದಲ್ಲಿ ಬಹಳಷ್ಟು ಸುಧಾರಣೆಯಾಗಲಿದೆ’ ಎಂದು ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಬ್ಯಾಟರ್ ರೋವ್‌ಮನ್ ಪೊವೆಲ್ ಹೇಳಿದ್ದಾರೆ. ‘ನಾನು ಬಾಲ್ಯದಿಂದಲೂ ರಿಕಿ ಪಾಂಟಿಂಗ್ ಆಟವನ್ನು ನೋಡಿದ್ದೇನೆ. ಅವರ ಬ್ಯಾಟಿಂಗ್‌ಗೆ ಮಂತ್ರಮುಗ್ಧನಾಗಿದ್ದೇನೆ. ಆಸ್ಟ್ರೇಲಿಯಾ ತಂಡಕ್ಕೆ ನಾಯಕನಾಗಿ ಮುನ್ನಡೆಸಿದ ರೀತಿ ಪ್ರಭಾವಶಾಲಿ. ಇದೀಗ ಅವರು ಅಷ್ಟೇ ಯಶಸ್ವಿ ಕೋಚ್ ಆಗಿದ್ದಾರೆ’ ವೆಸ್ಟ್ ಇಂಡೀಸ್‌ನ 28 ವರ್ಷದ ಎಂದು ಪೊವೆಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.