ವಿರಾಟ್ ಕೊಹ್ಲಿ
(ಪಿಟಿಐ ಚಿತ್ರ)
ಬೆಂಗಳೂರು: ಕೆಲವು ವರ್ಷಗಳ ಹಿಂದೆ ಟೀಮ್ ಇಂಡಿಯಾ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕತ್ವ ತೊರೆದಿರುವ ಕುರಿತು ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದ್ದಾರೆ.
2021ರ ವಿಶ್ವಕಪ್ ಬಳಿಕ ಟಿ20 ನಾಯಕತ್ವವನ್ನು ಕೊಹ್ಲಿ ತ್ಯಜಿಸಿದ್ದರು. ಬಳಿಕ ಆರ್‌ಸಿಬಿ ಕಪ್ತಾನಗಿರಿಯನ್ನು ತೊರೆದಿದ್ದರು. ಅದಾದ ಒಂದು ವರ್ಷದ ಬಳಿಕ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಿದ್ದರು.
ವೃತ್ತಿಜೀವನದ ಒಂದು ಹಂತದಲ್ಲಿ ತುಂಬಾ ಹೊರೆ ಅನಿಸಿದ್ದರಿಂದ ಒತ್ತಡವನ್ನು ನಿಭಾಯಿಸುವುದು ತಮ್ಮ ಪಾಲಿಗೆ ತುಂಬಾ ಕಷ್ಟಕರವೆನಿಸಿತ್ತು ಎಂದು ಆರ್‌ಸಿಬಿಯ 'ಬೋಲ್ಡ್ ಡೈರೀಸ್' ಪಾಡ್‌ಕಾಸ್ಟ್‌ನಲ್ಲಿ ತಿಳಿಸಿದ್ದಾರೆ.
'ನಾನು 7-8 ವರ್ಷಗಳ ಕಾಲ ಭಾರತ ತಂಡವನ್ನು ಮುನ್ನಡೆಸಿದ್ದೇನೆ. ಒಂಬತ್ತು ವರ್ಷಗಳ ಕಾಲ ಆರ್‌ಸಿಬಿ ತಂಡದ ನಾಯಕನಾಗಿದ್ದೆ. ಆದರೆ ವೃತ್ತಿ ಜೀವನದ ಒಂದು ಹಂತದಲ್ಲಿ ಸಾಕಷ್ಟು ವಿಚಾರಗಳು ನಡೆಯುತ್ತಿದ್ದವು. ಎಲ್ಲವನ್ನು ನಿಭಾಯಿಸುವುದು ಕಷ್ಟಕರವಾಯಿತು' ಎಂದು ಅವರು ಹೇಳಿದ್ದಾರೆ.
'ನಾನು ಆಡಿದ ಪ್ರತಿ ಪಂದ್ಯದಲ್ಲೂ ನಾಯಕ ಹಾಗೂ ಬ್ಯಾಟರ್ ದೃಷ್ಟಿಕೋನದಿಂದಲೂ ನನ್ನ ಮೇಲೆ ಅತೀವ ನಿರೀಕ್ಷೆಗಳಿದ್ದವು. ನನ್ನ ಕಡೆ ಹೆಚ್ಚಿನ ಗಮನ ಕೇಂದ್ರಿತವಾಗಿತ್ತು. ನಾಯಕತ್ವ ಇಲ್ಲದಿದ್ದರೆ ಅದು ಬ್ಯಾಟಿಂಗ್ ಮೇಲೆ ಆಗಿರುತ್ತಿತ್ತು. 24 ಗಂಟೆಯೂ ನನ್ನತ್ತ ಗಮನ ಸೆಳೆದಿತ್ತು. ಇದರಿಂದಾಗಿ ತುಂಬಾ ಕಠಿಣವೆನಿಸಿತ್ತು' ಎಂದು ಅವರು ವಿವರಿಸಿದ್ದಾರೆ.
'2022ರಲ್ಲಿ ನಾನು ಕ್ರಿಕೆಟ್‌ನಿಂದ ಒಂದು ತಿಂಗಳ ಬಿಡುವು ತೆಗೆದುಕೊಂಡೆ. ಈ ಹಂತದಲ್ಲಿ ಬ್ಯಾಟ್ ಅನ್ನು ಮುಟ್ಟಿಯೂ ನೋಡಿಲ್ಲ. ಆ ಸಂದರ್ಭದಲ್ಲಿ ಖುಷಿಯಾಗಿರಲು ಸಾಧ್ಯವಾಗುತ್ತಿರಲಿಲ್ಲ. ಅದಕ್ಕಾಗಿಯೇ ನಾಯಕತ್ವ ತೊರೆಯಲು ನಿರ್ಧರಿಸಿದೆ. ಸಂತೋಷವಾಗಿರಲು ಬಯಸಿದ್ದೆ' ಎಂದು ಹೇಳಿದ್ದಾರೆ.
'ನನ್ನ ಆಟವನ್ನು ಯಾರೂ ನಿರ್ಣಯಿಸಬಾರದು. ಮೈದಾನಕ್ಕೆ ಬಂದು ನನ್ನ ಸಹಜ ಆಟವನ್ನು ಆಡಿ ಹೋಗಲು ಬಯಸಿದ್ದೆ' ಎಂದು ಹೇಳಿದ್ದಾರೆ.
ತಮ್ಮ ವೃತ್ತಿ ಜೀವನದ ಆರಂಭಿಕ ಕಾಲದಲ್ಲಿ ಅಂದಿನ ಕೋಚ್ ಗ್ಯಾರಿ ಕರ್ಸ್ಟನ್ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿರುವ ಬೆಂಬಲ ಹಾಗೂ ತಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಕೊಹ್ಲಿ ಸ್ಮರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.