ವಿರಾಟ್ ಕೊಹ್ಲಿ
ಕೃಪೆ: ಸ್ಟಾರ್‌ಸ್ಪೋರ್ಟ್ಸ್
ಪಂದ್ಯದ ವೇಳೆ ತಮ್ಮ ಆಕ್ರಮಣಕಾರಿ ಆಟಕ್ಕೆ ಹೆಸರಾದ ಭಾರತ ಕ್ರಿಕೆಟ್ ತಂಡದ 'ಸೂಪರ್‌ಸ್ಟಾರ್' ವಿರಾಟ್ ಕೊಹ್ಲಿ, ಮೈದಾನದ ಆಚೆ ಸ್ನೇಹಜೀವಿ. ಮೃದು ಸ್ವಭಾವದವರು ಎಂಬುದಾಗಿ ಅವರನ್ನು ಹತ್ತಿರದಿಂದ ಬಲ್ಲವರು ಹೇಳಿರುವುದು ಈ ಹಿಂದೆ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅದಕ್ಕೆ ತಾಜಾ ಉದಾಹರಣೆ ಎಂಬಂತೆ ಇದೀಗ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
ಟಿ20 ಮತ್ತು ಟೆಸ್ಟ್ ಮಾದರಿಗೆ ಈಗಾಗಲೇ ವಿದಾಯ ಹೇಳಿರುವ 'ಕಿಂಗ್', ಏಕದಿನ ಮಾದರಿಗೆ ಏಳು ತಿಂಗಳ ಬಳಿಕ ಮರಳಿದ್ದಾರೆ. ಇದೇ ವರ್ಷ ಫೆಬ್ರುವರಿ ಹಾಗೂ ಮಾರ್ಚ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಕೊಹ್ಲಿ, ಆ ಬಳಿಕ ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ.
ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಾಳೆಯಿಂದ (ಅಕ್ಟೋಬರ್ 19ರಂದು) ಆರಂಭವಾಗಲಿದೆ. ಪರ್ತ್‌ನಲ್ಲಿ ಮೊದಲ ಪಂದ್ಯ ನಡೆಯಲಿದೆ.
ಪಂದ್ಯದ ಮುನ್ನಾದಿನ ಅಭ್ಯಾಸದ ವೇಳೆ ಸಹ ಆಟಗಾರರೊಂದಿಗೆ ಸೇರಿ ತಮಾಷೆಯಲ್ಲಿ ತೊಡಗಿರುವ ಕೊಹ್ಲಿ, ವಿವಿಧ ಭಾವ, ಭಂಗಿಗಳನ್ನು ಪ್ರದರ್ಶಿಸಿದ್ದಾರೆ. ಜೊತೆಗಿದ್ದವರನ್ನು ಅಣಕಿಸುತ್ತಾ ಎಲ್ಲರಲ್ಲೂ ನಗೆಯುಕ್ಕಿಸಿದ್ದಾರೆ.
ಯುವ ಆಟಗಾರರಾದ ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅಕ್ಷರ್ ಪಟೇಲ್, ಧ್ರುವ ಜುರೇಲ್ ಹಾಗೂ ನೂತನ ನಾಯಕ ಶುಭಮನ್ ಗಿಲ್ ಅವರನ್ನು ಕಿಚಾಯಿಸಿದ್ದಾರೆ.
ಕ್ಯಾಮೆರಾದಲ್ಲಿ ಸೆರೆಯಾಗಿರುವ ಈ ಸುಂದರ ಕ್ಷಣಗಳನ್ನು ಸ್ಟಾರ್ ಸ್ಪೋರ್ಟ್ಸ್ ಹಂಚಿಕೊಂಡಿದೆ. 'ಕೊಹ್ಲಿ ವೈಬ್ ಲಯ ಕಳೆದುಕೊಳ್ಳುವುದೇ ಇಲ್ಲ' ಎಂದು ಬರೆದುಕೊಂಡಿದೆ.
ಸ್ಟಾರ್ ಎಂಬ ಅಹಂ ಬಿಟ್ಟು ಕಿರಿಯ ಆಟಗಾರರೊಂದಿಗೆ ಕೊಹ್ಲಿ ಅನ್ಯೋನ್ಯವಾಗಿ ಬೆರೆತಿರುವುದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಸರಣಿಯ ವೇಳಾಪಟ್ಟಿ
ಮೊದಲ ಪಂದ್ಯ: ಅಕ್ಟೋಬರ್ 19
ಎರಡನೇ ಪಂದ್ಯ: ಅಕ್ಟೋಬರ್ 23
ಮೂರನೇ ಪಂದ್ಯ: ಅಕ್ಟೋಬರ್ 25
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.