ADVERTISEMENT

ಐಪಿಎಲ್‌ನ ಕೊನೆಯ ಪಂದ್ಯ ಆಡುವ ವರೆಗೂ ಆರ್‌ಸಿಬಿಯಲ್ಲೇ ಇರುತ್ತೇನೆ: ವಿರಾಟ್ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಅಕ್ಟೋಬರ್ 2021, 5:07 IST
Last Updated 12 ಅಕ್ಟೋಬರ್ 2021, 5:07 IST
ವಿರಾಟ್ ಕೊಹ್ಲಿ – ಪಿಟಿಐ ಚಿತ್ರ
ವಿರಾಟ್ ಕೊಹ್ಲಿ – ಪಿಟಿಐ ಚಿತ್ರ   

ಶಾರ್ಜಾ: ಐಪಿಎಲ್‌ ಟೂರ್ನಿಯಯಲ್ಲಿ ನನ್ನ ಕೊನೆಯ ಪಂದ್ಯ ಆಡುವ ವರೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲೇ ಇರುತ್ತೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಪ್ರಸಕ್ತ ಅವಧಿಯ ಐಪಿಎಲ್‌ ಟೂರ್ನಿಯ ಬಳಿಕ ತಂಡದ ನಾಯಕತ್ವ ತ್ಯಜಿಸುವುದಾಗಿ ಅವರು ಈ ಹಿಂದೆಯೇ ಘೋಷಿಸಿದ್ದರು. ಸೋಮವಾರದ ಪಂದ್ಯದಲ್ಲಿ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಾಲ್ಕು ವಿಕೆಟ್ ಅಂತರದಲ್ಲಿ ಸೋಲನುಭವಿಸಿದ್ದು, ಟೂರ್ನಿಯಿಂದ ಹೊರ ಬಿದ್ದಿದೆ.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ, ಪ್ರತಿ ವರ್ಷವೂ ಐಪಿಎಲ್‌ನಲ್ಲಿ ಸಂಪೂರ್ಣ ತೊಡಗಿಸಿಕೊಂಡು ತಂಡವನ್ನು ಮುನ್ನಡೆಸಿದ್ದೇನೆ ಎಂದು ಹೇಳಿದ್ದಾರೆ.

ADVERTISEMENT

‘ಯುವಕರು ಬಂದು ನಂಬಿಕೆ ಮತ್ತು ಉತ್ತಮ ಆಟ ಆಡುವಂಥ ವಾತಾವರಣವನ್ನು ನಿರ್ಮಿಸಲು ನನ್ನಿಂದ ಸಾಧ್ಯವಾದಷ್ಟೂ ಮಟ್ಟಿಗೆ ಪ್ರಯತ್ನಿಸಿದ್ದೇನೆ. ಭಾರತ ತಂಡದಲ್ಲೂ ಇದೇ ಕೆಲಸ ಮಾಡಿದ್ದೇನೆ. ನನ್ನ ಕೈಲಾದಷ್ಟು ಉತ್ತಮವಾದುದನ್ನೇ ಮಾಡಿದ್ದೇನೆ. ಇದಕ್ಕೆ ಬಂದ ಪ್ರತಿಕ್ರಿಯೆ ಹೇಗಿದೆ ಎಂಬುದು ನನಗೆ ತಿಳಿದಿಲ್ಲ. ಪ್ರತಿ ವರ್ಷವೂ ಆರ್‌ಸಿಬಿಯನ್ನು ಮುನ್ನಡೆಸುವಾಗ ಶೇ 120ರಷ್ಟು ತೊಡಗಿಸಿಕೊಂಡಿದ್ದೇನೆ. ಇನ್ನು ಮುಂದೆ ಆಟಗಾರನಾಗಿಯೂ ಇದನ್ನೇ ಮುಂದುವರಿಸಲಿದ್ದೇನೆ’ ಎಂದು ಕೊಹ್ಲಿ ಹೇಳಿದ್ದಾರೆ.

‘ಖಂಡಿತವಾಗಿಯೂ ಬೇರೆ ಯಾವುದೇ ತಂಡದ ಪರ ಆಟವಾಡಲು ಬಯಸಿಲ್ಲ. ನನಗೆ ಲೌಕಿಕ ದೃಷ್ಟಿಕೋನಕ್ಕಿಂತಲೂ ನಿಷ್ಠೆಯೇ ಮುಖ್ಯ. ಈ ಫ್ರಾಂಚೈಸಿ ನನ್ನ ಮೇಲೆ ನಂಬಿಕೆ ಇಟ್ಟಿದೆ. ನಾನು ಈಗಾಗಲೇ ಹೇಳಿದಂತೆ, ಐಪಿಎಲ್‌ನಲ್ಲಿ ಆಡುವ ಕೊನೆಯ ದಿನದವರೆಗೂ ಈ ಫ್ರಾಂಚೈಸಿಗೇ ನನ್ನ ಬದ್ಧತೆ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.