ಸ್ಯಾಮ್ ಕೋನ್‌ಸ್ಟಾಸ್‌ಗೆ ಡಿಕ್ಕಿಯಾದ ವಿರಾಟ್ ಕೊಹ್ಲಿ
ಚಿತ್ರಕೃಪೆ: X
ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವಾಡುತ್ತಿರುವ ಸ್ಯಾಮ್ ಕೋನ್‌ಸ್ಟಾಸ್ ಅವರು ಪಂದ್ಯದ ವೇಳೆ ಡಿಕ್ಕಿಯಾದದ್ದು ಭಾರಿ ಸುದ್ದಿಯಾಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ಕೊಹ್ಲಿ ವರ್ತನೆಯನ್ನು ಹಿರಿಯ ಕ್ರಿಕೆಟಿಗರು ಟೀಕಿಸಿದ್ದಾರೆ. ಚೊಚ್ಚಲ ಪಂದ್ಯವಾಡುತ್ತಿರುವ ಕೋನ್‌ಸ್ಟಾಸ್ ಅವರೊಂದಿಗೆ ಕೊಹ್ಲಿ ಆ ರೀತಿ ನಡೆದುಕೊಳ್ಳಬಾರದಿತ್ತು ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಏತನ್ಮಧ್ಯೆ ದಿನದಾಟದ ಬಳಿಕ ಮಾತನಾಡಿರುವ ಆಸ್ಟ್ರೇಲಿಯಾ ಆಟಗಾರ, ಕೊಹ್ಲಿ ತಮಗೆ ಭುಜ ತಾಗಿಸಿದ್ದು ಆಕಸ್ಮಿಕ ಎಂದು ಸ್ಪಷ್ಟಪಡಿಸಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯವು ಮೆಲ್ಬರ್ನ್‌ನಲ್ಲಿ ಇಂದು ಆರಂಭವಾಗಿದೆ. ಟಾಸ್ ಗೆದ್ದಿರುವ ಆತಿಥೇಯರು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಈ ಪಂದ್ಯದಲ್ಲಿ ಕೋನ್‌ಸ್ಟಾಸ್ ಹಾಗೂ ಅನುಭವಿ ಉಸ್ಮಾನ್ ಖ್ವಾಜಾ ಇನಿಂಗ್ಸ್ ಆರಂಭಿಸಿದರು.
ಇನಿಂಗ್ಸ್‌ನ 10ನೇ ಓವರ್ ವೇಳೆ ಪಿಚ್‌ನಲ್ಲಿ ಎದುರುಬದುರಾಗಿ ನಡೆದು ಹೋಗುತ್ತಿದ್ದಾಗ ಕೊಹ್ಲಿ ಮತ್ತು ಕೋನ್‌ಸ್ಟಾಸ್ ಅವರು ಭುಜಕ್ಕೆ ಭುಜ ತಾಗಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಖ್ವಾಜಾ ಹಾಗೂ ಫೀಲ್ಡ್‌ನಲ್ಲಿದ್ದ ಅಂಪೈರ್‌ಗಳು ಕೂಡಲೇ ಮಧ್ಯಪ್ರವೇಶಿಸಿ, ಪರಿಸ್ಥಿತಿ ತಿಳಿಗೊಳಿಸಿದರು.
ದಿನದಾಟದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿರುವ ಕೋನ್‌ಸ್ಟಾಸ್, ಕೊಹ್ಲಿ ಅವರು ತಮಗೆ ಗುದ್ದಿದ್ದು ಉದ್ದೇಶಪೂರ್ವಕವಾಗಿರಲಿಲ್ಲ ಎಂದಿದ್ದಾರೆ.
'ವಿರಾಟ್ ಕೊಹ್ಲಿ ನನಗೆ ಗುದ್ದಿದ್ದು ಆಕಸ್ಮಿಕ. ಇದು ಕ್ರಿಕೆಟ್. ಒತ್ತಡದಲ್ಲಿದ್ದಾಗ ಇಂಥವೆಲ್ಲ ಆಗುತ್ತವೆ' ಎಂದು 19 ವರ್ಷ ಈ ಆಟಗಾರ 'ಚಾನೆಲ್ 7'ಗೆ ಹೇಳಿದ್ದಾರೆ.
'ನಾವಿಬ್ಬರೂ ಭಾವೋದ್ವೇಗಕ್ಕೊಳಗಾದೆವು ಎನಿಸುತ್ತದೆ. ನಾನು ಕೈಗವಸು ಸರಿಪಡಿಸಿಕೊಳ್ಳುತ್ತಿದ್ದೆ. ಆಗ ಭುಜಕ್ಕೆ ಭುಜ ತಾಗಿತು. ಆಗ ಏನಾಯಿತು ಎಂಬುದು ಸರಿಯಾಗಿ ಗೊತ್ತಿಲ್ಲ. ಕ್ರಿಕೆಟ್‌ನಲ್ಲಿ ಇಂಥ ಘಟನೆಗಳು ಸಾಮಾನ್ಯ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡದ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೂ, ಇಂಥದೇ ಹೇಳಿಕೆ ನೀಡಿದ್ದಾರೆ. 'ಆಟವಾಡುವಾಗ ಉದ್ವೇಗಕ್ಕೊಳಗಾಗುವುದು ಸಾಮಾನ್ಯ. ಆದರೆ, ಅವೆಲ್ಲ ನಾವು ಅಂದುಕೊಂಡಷ್ಟು ದೊಡ್ಡವಾಗಿರುವುದಿಲ್ಲ. ಆ ಕ್ಷಣಕ್ಕೆ ಅಲ್ಲಿ ಏನಾಯಿತು ಎಂಬುದು ತಿಳಿದಿರಲಿಲ್ಲ. ಪರಸ್ಪರರು ಏನು ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ' ಎಂದಿದ್ದಾರೆ.
ಮಿಂಚಿದ ಕೋನ್‌ಸ್ಟಾಸ್
ಆಸಿಸ್ ಪರ ಮೊದಲ ಟೆಸ್ಟ್ ಆಡಿದ ಕೋನ್‌ಸ್ಟಾಸ್, ದಿಟ್ಟ ಪ್ರದರ್ಶನ ನೀಡಿದರು. ನಿಗದಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಂತೆ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಅವರು 65 ಎಸೆತಗಳಲ್ಲಿ 60 ರನ್ ಗಳಿಸಿದರು. ಅದರಲ್ಲೂ, ಜಸ್‌ಪ್ರಿತ್ ಬೂಮ್ರಾ ಅವರಂಥ ಶ್ರೇಷ್ಠ ಬೌಲರ್‌ಗೆ ರಿವರ್ಸ್ ಸ್ಕೂಪ್ ಹೊಡೆತಗಳನ್ನು ಪ್ರಯೋಗಿಸಿ, ಬೆನ್ನುಬೆನ್ನಿಗೆ ಸಿಕ್ಸ್ ಹಾಗೂ ಬೌಂಡರಿ ಸಿಡಿಸಿದ್ದು ಅಮೋಘವಾಗಿತ್ತು.
ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 6 ವಿಕೆಟ್‌ಗಳನ್ನು ಕಳೆದುಕೊಂಡು 311 ರನ್ ಗಳಿಸಿದೆ. ಕೋನ್‌ಸ್ಟಾಸ್ ಮಾತ್ರವಲ್ಲದೆ, ಅಗ್ರ ಕ್ರಮಾಂಕದಲ್ಲಿ ಆಡಿದ ಇನ್ನೂ ಮೂವರು ಅರ್ಧಶತಕ ಸಿಡಿಸಿದರು. ಖ್ವಾಜಾ 57 ರನ್ ಗಳಿಸಿದರೆ, ಮಾರ್ನಸ್ ಲಾಬುಷೇನ್ 72 ರನ್ ಕಲೆಹಾಕಿದರು. ಸ್ವೀವ್ ಸ್ಮಿತ್ ಸಹ 68 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಬೂಮ್ರಾ 3 ವಿಕೆಟ್ ಪಡೆದರೆ, ಆಕಾಶ್ ದೀಪ್, ರವೀಂದ್ರ ಜಡೇಜ ಮತ್ತು ವಾಷಿಂಗ್ಟನ್ ಸುಂದರ್ ಒಂದೊಂದು ವಿಕೆಟ್ ಉರುಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.