ADVERTISEMENT

ಎಲ್ಲ ಮಾದರಿ ಕ್ರಿಕೆಟ್‌ನಲ್ಲಿ 100 ಪಂದ್ಯ ಆಡಿದ ಮೊದಲ ಭಾರತೀಯನಾಗಲಿದ್ದಾರೆ ಕೊಹ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 6:42 IST
Last Updated 27 ಆಗಸ್ಟ್ 2022, 6:42 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   

ಅಬುದಾಭಿ: ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾನುವಾರ ಸೆಣಸಲಿವೆ. ಈ ಪಂದ್ಯ ಟೀಮ್ ಇಂಡಿಯಾ ಮಾಜಿ ನಾಯಕ, ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಮಹತ್ವದ್ದಾಗಲಿದೆ.

ಭಾನುವಾರದ ಪಂದ್ಯವು ಟಿ20 ಮಾದರಿಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ನೂರನೇ ಪಂದ್ಯವಾಗಿರಲಿದೆ. ಇದರೊಂದಿಗೆ, ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಪರ ನೂರು ಪಂದ್ಯಗಳನ್ನು ಆಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಲಿದ್ದಾರೆ.

2008ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಕೊಹ್ಲಿ ಭಾರತ ತಂಡದ ಪರ ಈವರೆಗೆ 99 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. 50.12ರ ಸರಾಸರಿಯೊಂದಿಗೆ 3,308 ರನ್ ಕಲೆಹಾಕಿದ್ದಾರೆ. ಟಿ20 ಮಾದರಿಯಲ್ಲಿ 94 ರನ್ ಕೊಹ್ಲಿ ಅವರ ಗರಿಷ್ಠ ರನ್ ಗಳಿಕೆಯಾಗಿದೆ. 30 ಅರ್ಧಶತಕಗಳನ್ನು ಬಾರಿಸಿದ್ದಾರೆ.

2017ರಿಂದ 2021ರ ಅವಧಿಯಲ್ಲಿ 50 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಇವುಗಳ ಪೈಕಿ ಟೀಮ್‌ ಇಂಡಿಯಾ 30 ಪಂದ್ಯಗಳನ್ನು ಗೆದ್ದು 16ರಲ್ಲಿ ಸೋಲನುಭವಿಸಿದೆ. ಎರಡು ಪಂದ್ಯಗಳು ಟೈ ಆಗಿದ್ದರೆ, ಇನ್ನೆರಡರಲ್ಲಿ ಫಲಿತಾಂಶ ಲಭ್ಯವಾಗಿಲ್ಲ. ನಾಯಕನಾಗಿ ಅವರ ಸರಾಸರಿ 64.58 ಆಗಿದೆ.

ಈ ಹಿಂದೆ ಟಿ20 ವಿಶ್ವಕಪ್‌ನಲ್ಲಿ ಭಾರತ–ಪಾಕಿಸ್ತಾನ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲಾಗಿತ್ತು. ಕೊಹ್ಲಿ 49 ಎಸೆತ ಎದುರಿಸಿ 57 ರನ್ ಗಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.