ADVERTISEMENT

IND vs WI | 400ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಸೊನ್ನೆ ಸುತ್ತಿದ ಕೊಹ್ಲಿ

ರೋಹಿತ್‌–ರಾಹುಲ್‌ ಭರ್ಜರಿ ಬ್ಯಾಟಿಂಗ್‌: ಬೃಹತ್‌ ಮೊತ್ತದತ್ತ ಭಾರತ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 11:05 IST
Last Updated 18 ಡಿಸೆಂಬರ್ 2019, 11:05 IST
   

ವಿಶಾಖಪಟ್ಟಣ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ವೆಸ್ಟ್‌ ಇಂಡೀಸ್‌ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೇಶದ ಪರ 400 ಪಂದ್ಯಗಳನ್ನಾಡಿದ8ನೇ ಆಟಗಾರ ಎಂಬ ಶ್ರೇಯಕ್ಕೆ ಭಾಜನರಾದರು.

ಆದರೆ, ಮಹತ್ವದ ಪಂದ್ಯದಲ್ಲಿ ಖಾತೆ ತೆರೆಯದೆ ನಿರಾಸೆ ಅನುಭವಿಸಿದರು. ಪ್ರವಾಸಿ ತಂಡದ ನಾಯಕ ಕೀರನ್‌ ಪೊಲಾರ್ಡ್ ಎಸೆತದ ವೇಗ ಅಂದಾಜಿಸುವಲ್ಲಿ ಎಡವಿ ರೋಸ್ಟನ್‌ ಚೇಸ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು.

ಇದುವರೆಗೆ 84 ಟೆಸ್ಟ್‌, 75 ಟಿ20 ಪಂದ್ಯಗಳನ್ನು ಆಡಿರುವ ಕೊಹ್ಲಿ, ಇದೀಗಇಲ್ಲಿನ ವೈ.ಎಸ್‌.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ 240ನೇ ಏಕದಿನ ಆಡುತ್ತಿದ್ದಾರೆ. ಕಳೆದ ವರ್ಷ ವೆಸ್ಟ್‌ ಇಂಡೀಸ್ ವಿರುದ್ಧವೇ ಇದೇ ಮೈದಾನದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೊಹ್ಲಿ ಔಟಾಗದೇ 157 ರನ್‌ ಗಳಿಸಿದ್ದರು. ಆ ಪಂದ್ಯದ ಮೂಲಕಏಕದಿನ ಕ್ರಿಕೆಟ್‌ನಲ್ಲಿ 10,000 ರನ್‌ ಗಳಿಸಿದ ಸಾಧನೆಯನ್ನೂ ಮಾಡಿದ್ದರು.

ADVERTISEMENT

ರೋಹಿತ್‌ ಶರ್ಮಾ ಹಾಗೂ ಕೆ.ಎಲ್‌. ರಾಹುಲ್‌ ನೀಡಿದ ದ್ವಿಶತಕದ ಜೊತೆಯಾಟದಿಂದ ಸವಾಲಿನ ಮೊತ್ತ ಪೇರಿಸುವತ್ತ ಸಾಗಿರುವ ಭಾರತ, ಇದೀಗ 40 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 260 ರನ್‌ ಕಲೆ ಹಾಕಿದೆ. 129 ಎಸೆತಗಳಲ್ಲಿ15 ಬೌಂಡರಿ ಹಾಗೂ4 ಸಿಕ್ಸರ್‌ ಸಹಿತ140 ರನ್‌ ಗಳಿಸಿರುವ ರೋಹಿತ್‌ ಶ್ರೇಯಸ್‌ ಅಯ್ಯರ್‌ (7) ಜೊತೆ ಕ್ರಿಸ್‌ನಲ್ಲಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ದಾಖಲೆ ಇರುವುದು ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿ. ಅವರು 463 ಏಕದಿನ, 200 ಟೆಸ್ಟ್‌ ಹಾಗೂ 1 ಟಿ20 ಪಂದ್ಯ ಆಡಿದ್ದಾರೆ. ಶ್ರೀಲಂಕಾದ ಮಹೇಲ ಜಯವರ್ದನೆ (652), ಕುಮಾರ ಸಂಗಕ್ಕಾರ (594), ಸನತ್‌ ಜಯಸೂರ್ಯ (586) ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಭಾರತ ಪರ ಸಚಿನ್‌, ಎಂಎಸ್‌ ಧೋನಿ (538), ರಾಹುಲ್‌ ದ್ರಾವಿಡ್‌ (509), ಮೊಹಮ್ಮದ್‌ ಅಜರುದ್ದೀನ್‌ (433), ಸೌರವ್‌ ಗಂಗೂಲಿ (424), ಅನಿಲ್‌ ಕುಂಬ್ಳೆ (403) ಹಾಗೂ ಯುವರಾಜ್‌ ಸಿಂಗ್‌ (402) ನಾಲ್ಕುನೂರಕ್ಕಿಂತ ಹೆಚ್ಚು ಪಂದ್ಯ ಆಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.