ವಿರಾಟ್ ಕೊಹ್ಲಿ
ಪಿಟಿಐ ಚಿತ್ರ
ಭಾರತ ಕ್ರಿಕೆಟ್ ತಂಡದ 'ರನ್ ಯಂತ್ರ' ಖ್ಯಾತಿಯ ವಿರಾಟ್ ಕೊಹ್ಲಿ ಅವರು ಟೆಸ್ಟ್ ಮಾದರಿಗೆ ವಿದಾಯ ಹೇಳಲು ಬಯಸಿದ್ದಾರೆ. ತಮ್ಮ ನಿರ್ಧಾರವನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ತಿಳಿಸಿದ್ದಾರೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಭಾರತ ತಂಡವು ಮುಂದಿನ ತಿಂಗಳು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿಯು ಜೂನ್ 20ರಿಂದ ಆರಂಭವಾಗಲಿದೆ. ಈ ಸರಣಿಯಲ್ಲಿ ಆಡುವ ಭಾರತ ತಂಡವನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ನಾಯಕರಾಗಿದ್ದ ರೋಹಿತ್ ಶರ್ಮಾ ಅವರು ಇತ್ತೀಚೆಗಷ್ಟೇ ಈ ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ಹೀಗಾಗಿ, ಹೊಸ ನಾಯಕನ ಆಯ್ಕೆ ಬಗ್ಗೆಯೂ ಚಿಂತನೆಗಳು ನಡೆಯುತ್ತಿವೆ. ಈ ಹೊತ್ತಿನಲ್ಲೇ ವಿರಾಟ್ ವಿದಾಯದ ಕುರಿತು ಸುದ್ದಿಯಾಗಿದೆ.
ಈ ವರದಿಗಳ ಬೆನ್ನಲ್ಲೇ, ಅಭಿಮಾನಿಗಳು ಸೇರಿದಂತೆ ಹಲವರು ಖ್ಯಾತನಾಮರು ಕೊಹ್ಲಿ ತಮ್ಮ ನಿರ್ಧಾರ ಬದಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ಬಿಸಿಸಿಐ ಕೂಡ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎನ್ನಲಾಗಿದೆ.
ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ವೆಸ್ಟ್ ಇಂಡೀಸ್‌ನ ದಿಗ್ಗಜ ಕ್ರಿಕೆಟಿಗ ಬ್ರಯನ್ ಲಾರಾ ಅವರು ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯ ಅಗತ್ಯವಿದೆ ಎಂದು ಅಭಿಪ್ರಾಯಟ್ಟಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಟೆಸ್ಟ್ ಕ್ರಿಕೆಟ್‌ಗೆ ವಿರಾಟ್ ಅಗತ್ಯವಿದೆ! ಅವರ ಮನವೊಲಿಸಲಾಗುವುದು. ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳುವುದಿಲ್ಲ. ಕೊಹ್ಲಿ ತಮ್ಮ ಟೆಸ್ಟ್ ವೃತ್ತಿ ಜೀವನದ ಬಾಕಿ ಅವಧಿಯಲ್ಲಿ 60ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ ರನ್ ಗಳಿಸಲಿದ್ದಾರೆ' ಎಂದು ಬರೆದುಕೊಂಡಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, 'ವಿರಾಟ್ ಕೊಹ್ಲಿ ದಯವಿಟ್ಟು ವಿದಾಯ ಹೇಳದಿರಿ. ಭಾರತ ತಂಡಕ್ಕೆ ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ ನಿಮ್ಮ ಅಗತ್ಯವಿದೆ. ನೀವು ಟೀಂ ಇಂಡಿಯಾ ಪರ ಹೋರಾಟ ನಡೆಸದಿದ್ದರೆ, ಟೆಸ್ಟ್ ಕ್ರಿಕೆಟ್ ಮೊದಲಿನಂತೆ ಉಳಿಯುವುದಿಲ್ಲ. ದಯವಿಟ್ಟು ನಿರ್ಧಾರ ಮರುಪರಿಶೀಲಿಸಿ' ಎಂದು ಮನವಿ ಮಾಡಿದ್ದಾರೆ. ಐಪಿಎಲ್ ಟೂರ್ನಿಗಳ ಹಲವು ಸಂದರ್ಭಗಳಲ್ಲಿ ಕೊಹ್ಲಿ ಅವರನ್ನು ಬಹಿರಂಗವಾಗಿಯೇ ಟೀಕಿಸಿ, ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಾಯುಡು ಈ ರೀತಿ ಟ್ವಿಟ್ ಮಾಡಿರುವುದು ಅಚ್ಚರಿ ಮೂಡಿಸಿದೆ.
ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರು, ಕ್ರಿಕೆಟ್ ಜಗತ್ತಿಗೇ ಚಲನಶೀಲತೆ ತುಂಬಿದ್ದ ಕೊಹ್ಲಿಯ ಉದ್ದೇಶ ಉತ್ತಮವಾಗಿದೆ. ಆದರೆ, ಸಮಯ ಸರಿಯಿಲ್ಲ. ಅವರ ಅನುಭವ ಭಾರತ ತಂಡಕ್ಕೆ ಅನಿವಾರ್ಯವಾಗಿದೆ ಎಂದು ಯುಟ್ಯೂಬ್ ವಿಡಿಯೊದಲ್ಲಿ ಹೇಳಿದ್ದಾರೆ.
ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್, ಇದು ವದಂತಿ ಇರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
'ಈ ವದಂತಿ ನಿಜವಾಗಿರದು ಎಂದುಕೊಂಡಿದ್ದೇನೆ. ವಿರಾಟ್ ಅವರು ಟೆಸ್ಟ್‌ನಲ್ಲಿ ಸಾಕಷ್ಟು ರನ್ ಗಳಿಸುವುದು ಬಾಕಿ ಇದೆ. ಅವರನ್ನು ಒಳಗೊಂಡ ಯಾವುದೇ ತಂಡ ಅತ್ಯುತ್ತಮವಾಗಿರುತ್ತದೆ' ಎಂದು RevSportz ವೆಬ್‌ಸೈಟ್‌ಗೆ ತಿಳಿಸಿದ್ದಾರೆ.
'ಭಾರತ ಕ್ರಿಕೆಟ್‌ಗೆ ವಿರಾಟ್ ಕೊಹ್ಲಿಯ ಅಗತ್ಯವಿದೆ. ಅದರಲ್ಲೂ ಕೆಂಪು ಚೆಂಡಿನ ಮಾದರಿಯಲ್ಲಿ ತನ್ನೊಂದಿಗೆ ಇರುವ ಯುವ ಪಡೆಯನ್ನು ಸಜ್ಜಗೊಳಿಸುವ ನಿಟ್ಟಿನಲ್ಲಿ ಅವರು ಬೇಕು. ಮುಂದಿನ ತಿಂಗಳು ಇಂಗ್ಲೆಂಡ್ ಸರಣಿಯಲ್ಲಿ ಅವರ ಎದುರುನೋಡುತ್ತಿದ್ದೇನೆ' ಎಂದು ಮಾಜಿ ಆಟಗಾರ ಎಸ್.ಬದರಿನಾಥ್ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.