ವಿರಾಟ್ ಕೊಹ್ಲಿ, ಗೌತಮ್ ಗಂಭೀರ್
ಪಿಟಿಐ ಚಿತ್ರಗಳು
ಭಾರತ ಕ್ರಿಕೆಟ್ ತಂಡದ ರನ್ ಮಷನ್ ಖ್ಯಾತಿಯ ವಿರಾಟ್ ಕೊಹ್ಲಿ, ಇಂದು (ಸೋಮವಾರ) ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಕೊಹ್ಲಿ ತಮ್ಮ ನಿವೃತ್ತಿ ಬಯಸುತ್ತಿರುವುದಾಗಿ ಬಿಸಿಸಿಐಗೆ ತಿಳಿಸಿದ್ದಾರೆ. ನಿರ್ಧಾರ ಮರುಪರಿಶೀಲಿಸುವಂತೆ ಸಲಹೆ ನೀಡಲಾಗಿದೆ ಎಂಬುದಾಗಿ ಎರಡು ದಿನಗಳ ಹಿಂದೆ ಸುದ್ದಿಯಾಗಿತ್ತು.
ಇದರ ಬೆನ್ನಲ್ಲೇ, ವಿದಾಯ ತೀರ್ಮಾನವನ್ನು ಕೈಬಿಡಬೇಕು ಎಂದು ಅವರ ಅಭಿಮಾನಿಗಳು ಮನವಿ ಮಾಡಿದ್ದರು. ಭಾರತ ತಂಡಕ್ಕೆ, ಟೆಸ್ಟ್ ಕ್ರಿಕೆಟ್‌ಗೆ ನಿಮ್ಮ (ವಿರಾಟ್ ಕೊಹ್ಲಿ) ಅಗತ್ಯವಿದೆ ಎಂದು ಹಿರಿಯ ಕ್ರಿಕೆಟಿಗರು ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಮಾಡಿದ್ದರು.
ಆದರೆ, ಅವೆಲ್ಲವನ್ನೂ ಮೀರಿ ಇಂದು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿದಾಯದ ನಿರ್ಧಾರ ಪ್ರಕಟಿಸಿದ್ದಾರೆ ಕೊಹ್ಲಿ.
ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ 269ನೇ ಆಟಗಾರನಾಗಿರುವ ಅವರು, 'ಈ ಪ್ರಯಾಣ ಇಷ್ಟು ದೂರ ಬರಲಿದೆ ಎಂದುಕೊಂಡಿರಲಿಲ್ಲ. ಟೆಸ್ಟ್ ಕ್ರಿಕೆಟ್ ನನ್ನನ್ನು ರೂಪಿಸಿದೆ. ಸಾಕಷ್ಟು ಪಾಠಗಳನ್ನು ಕಲಿಸಿದೆ. ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದನ್ನು ನೀಡಿದೆ. ಇದೀಗ ಟೆಸ್ಟ್ ಕ್ರಿಕೆಟ್‌ನಿಂದ ದೂರ ಸರಿಯುತ್ತಿದ್ದೇನೆ. ಅದು ಸುಲಭವಲ್ಲ. ಆದರೂ, ನಿರ್ಧಾರ ಸರಿ ಇದೆ ಎನಿಸುತ್ತಿದೆ. ನನ್ನಲ್ಲಿನ ಎಲ್ಲವನ್ನೂ ಈ ಆಟಕ್ಕೆ ನೀಡಿದ್ದೇನೆ ಮತ್ತು ಅದು ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದನ್ನು ನನಗೆ ಕೊಟ್ಟಿದೆ. ಟೆಸ್ಟ್ ಕ್ರಿಕೆಟ್, ನನ್ನೊಂದಿಗೆ ಆಡಿದವರು ಮತ್ತು ಈ ಪ್ರಯಾಣದುದ್ದಕ್ಕೂ ನನ್ನನ್ನು ನೋಡುವಂತೆ ಮಾಡಿದ ಪ್ರತಿ ವ್ಯಕ್ತಿಗೂ ಕೃತಜ್ಞತೆ ಸಲ್ಲಿಸುತ್ತಾ.. ಭಾರದ ಹೃದಯದಿಂದಲೇ ದೂರ ಸರಿಯುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.
ಹಾಗೆಯೇ, ಹೃದಯದ ಎಮೋಜಿಯೊಂದಿಗೆ '#269 ವಿದಾಯ' ಎಂದು ಉಲ್ಲೇಖಿಸಿದ್ದಾರೆ.
ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, 'ಸಿಂಹದಂತಹ ಉತ್ಸಾಹವನ್ನು ಹೊಂದಿದ್ದ ಮನುಷ್ಯ! ಚೀಕು.. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.
'ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದು ಯುಗಾಂತ್ಯವಾಗಿದೆ. ಆದರೆ, ಅವರ ಪರಂಪರೆ ಸದಾ ಮುಂದುವರಿಯಲಿದೆ. ಟೀಂ ಇಂಡಿಯಾಗೆ ಅವರು ನೀಡಿದ ಕೊಡುಗೆ ಸದಾ ಸ್ಮರಣೀಯ' ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ಟೆಸ್ಟ್‌ನಲ್ಲಿ ಕೊಹ್ಲಿ ಸಾಧನೆ
2011ರಲ್ಲಿ (ವೆಸ್ಟ್ ಇಂಡೀಸ್ ವಿರುದ್ಧ) ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದ ಅವರು ಈವರೆಗೆ 123 ಪಂದ್ಯಗಳ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಬೀಸಿದ್ದಾರೆ. 46.85ರ ಸರಾಸರಿಯಲ್ಲಿ 9,230 ರನ್ ಗಳಿಸಿರುವ ಅವರ ಬ್ಯಾಟ್‌ನಿಂದ 7 ದ್ವಿಶತಕ, 30 ಶತಕ, 31 ಅರ್ಧಶತಕಗಳು ಬಂದಿವೆ.
2014ರಿಂದ 2022ರವರೆಗೆ ಟೀಂ ಇಂಡಿಯಾದ ನಾಯಕತ್ವವನ್ನೂ ವಹಿಸಿಕೊಂಡಿದ್ದ ಕೊಹ್ಲಿ, ಈ ಮಾದರಿಯಲ್ಲಿ ಭಾರತದ ಅತ್ಯುತ್ತಮ ನಾಯಕ ಎನಿಸಿದ್ದಾರೆ. ಅವರ ನಾಯಕತ್ವದಲ್ಲಿ ಆಡಿದ 68 ಪಂದ್ಯಗಳಲ್ಲಿ ಭಾರತ 40ರಲ್ಲಿ ಜಯ ಸಾಧಿಸಿತ್ತು. 17ರಲ್ಲಿ ಸೋಲು ಕಂಡರೆ, ಉಳಿದ 11 ಡ್ರಾ ಆಗಿದ್ದವು.
ಕೊಹ್ಲಿ ಈಗಾಗಲೇ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.