ADVERTISEMENT

ವಿರಾಟ್, ರೋಹಿತ್ ಅನುಪಸ್ಥಿತಿಯಿಂದ ಇಂಗ್ಲೆಂಡ್‌ಗೆ ದೊಡ್ಡ ಲಾಭ: ಮೋಯಿನ್ ಅಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಮೇ 2025, 9:36 IST
Last Updated 14 ಮೇ 2025, 9:36 IST
<div class="paragraphs"><p>ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ</p></div>

ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ

   

ಲಂಡನ್‌: ಸ್ಟಾರ್‌ ಬ್ಯಾಟರ್‌ಗಳಾದ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರ ಅನುಪಸ್ಥಿತಿಯು ಭಾರತ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಇಂಗ್ಲೆಂಡ್‌ ತಂಡಕ್ಕೆ ಭಾರೀ ಉತ್ತೇಜನ ನೀಡಲಿದೆ ಎಂದು ಆಂಗ್ಲ ಪಡೆಯ ಆಲ್‌ರೌಂಡರ್‌ ಮೋಯಿನ್‌ ಅಲಿ ಹೇಳಿದ್ದಾರೆ.

ಟೀಂ ಇಂಡಿಯಾ ಮುಂದಿನ ತಿಂಗಳು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದು, ಐದು ಪಂದ್ಯಗಳ ಸರಣಿಯು ಜೂನ್‌ 20ರಂದು ಆರಂಭವಾಗಲಿದೆ. ಇದರೊಂದಿಗೆ, ಇತ್ತಂಡಗಳು 2025–2027ರ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಅಭಿಯಾನ ಆರಂಭಿಸಲಿವೆ.

ADVERTISEMENT

ಈ ಸರಣಿಗೂ ಮುನ್ನ ಕೊಹ್ಲಿ, ರೋಹಿತ್‌ ವಿದಾಯ ಹೇಳಿರುವ ಕುರಿತು ಮಾತನಾಡಿರುವ ಇಂಗ್ಲೆಂಡ್‌ ಆಟಗಾರ ಅಲಿ, 'ಖಂಡಿತವಾಗಿಯೂ, ಇದು ಇಂಗ್ಲೆಂಡ್ ತಂಡಕ್ಕೆ ದೊಡ್ಡ ಉತ್ತೇಜನ ನೀಡಿದೆ. ಇವರಿಬ್ಬರೂ, ಇಂಗ್ಲೆಂಡ್‌ಗೆ ಹಲವು ಸಲ ಪ್ರವಾಸ ಕೈಗೊಂಡಿದ್ದ ಅನುಭವ ಹೊಂದಿದ್ದರು. ಕಳೆದ ಬಾರಿ ಇಂಗ್ಲೆಂಡ್‌ನಲ್ಲಿ ರೋಹಿತ್‌ ಉತ್ತಮವಾಗಿ ಆಡಿದ್ದರು. ಟೆಸ್ಟ್‌ ಮಾದರಿಯಲ್ಲಿ ಅವರಿಬ್ಬರೂ ಭಾರತ ತಂಡವನ್ನು ಮುನ್ನಡೆಸಿದ್ದರು. ಹಾಗಾಗಿ, ಖಂಡಿತವಾಗಿಯೂ ಆ ತಂಡಕ್ಕಿದು ಭಾರಿ ಹೊಡೆತ' ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಗ್ಲೆಂಡ್‌ ಪರ 68 ಟೆಸ್ಟ್‌ ಪಂದ್ಯಗಳನ್ನು ಕಣಕ್ಕಿಳಿದು, 3,094 ರನ್‌ ಹಾಗೂ 204 ವಿಕೆಟ್‌ ಗಳಿಸಿರುವ ಅಲಿ, ದೀರ್ಘ ಮಾದರಿಯಲ್ಲಿ ಅನುಭವದ ಕೊರತೆ ಇದ್ದರೂ ಶುಭಮನ್‌ ಗಿಲ್‌ ಅವರು ಭಾರತ ತಂಡದ ನಾಯಕತ್ವಕ್ಕೆ ಉತ್ತಮ ಆಯ್ಕೆಯಾಗಬಲ್ಲರು ಎಂದು ಅಭಿಪ್ರಾಯಪಟ್ಟಿದ್ದಾರೆ.

ರೋಹಿತ್‌ ವಿದಾಯದ ಬಳಿಕ ತೆರವಾಗಿರುವ ಟೀಂ ಇಂಡಿಯಾ ನಾಯಕ ಸ್ಥಾನಕ್ಕೆ, ಯುವ ಬ್ಯಾಟರ್‌ ಶುಭಮನ್‌ ಗಿಲ್‌, ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಕನ್ನಡಿಗ ಕೆ.ಎಲ್‌. ರಾಹುಲ್‌, ವಿಕೆಟ್‌ ಕೀಪರ್ ಬ್ಯಾಟರ್ ರಿಷಭ್‌ ಪಂತ್‌ ಅವರ ಹೆಸರುಗಳೂ ಚಾಲ್ತಿಯಲ್ಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.