ವೀರೇಂದ್ರ ಸೆಹ್ವಾಗ್
ಕೃಪೆ: ಪಿಟಿಐ
ಟಿ20 ಕ್ರಿಕೆಟ್‌ನ ಅಬ್ಬರ ಶುರುವಾಗುವ ಮುನ್ನವೇ, ವಿಶ್ವ ಕ್ರಿಕೆಟ್‌ಗೆ ಬೀಸಾಟದ ಝಲಕ್ ತೋರಿಸಿದ್ದ ಬ್ಯಾಟರ್ ವೀರೇಂದ್ರ ಸೆಹ್ವಾಗ್.
'ಚೆಂಡು ಇರುವುದೇ ದಂಡಿಸಲಿಕ್ಕೆ' ಎಂಬಂತೆ ನಿರ್ದಯವಾಗಿ ಬ್ಯಾಟಿಂಗ್ ಮಾಡುತ್ತಿದ್ದ ಈ ಆಟಗಾರ, ಸಾಕಷ್ಟು ಬೌಲರ್‌ಗಳ ನಿದ್ದೆಗೆಡಿಸಿದ್ದವರು. ಬಿರುಸಿನ ಬ್ಯಾಟಿಂಗ್ ಕಾರಣಕ್ಕೆ 'ಡ್ಯಾಶಿಂಗ್ ಓಪನರ್' ಎಂದೇ ಖ್ಯಾತವಾಗಿದ್ದ ಸೆಹ್ವಾಗ್, 2013ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು.
ಇತ್ತೀಚೆಗೆ 'Life Savers Show with Neha Bedi' ಯುಟ್ಯೂಬ್ ಸಂದರ್ಶನದಲ್ಲಿ ಪಾಲ್ಗೊಂಡಿದ್ದ ಅವರು, ಆಗಿನ ಕೋಚ್ ಗ್ರೇಗ್ ಚಾಪೆಲ್ ಅವರೊಂದಿಗೆ ನಡೆದ ಜಟಾಪಟಿಯ ಬಗ್ಗೆ ಮಾತನಾಡಿದ್ದಾರೆ. ರನ್ ಗಳಿಸಲು ವಿಫಲವಾಗುತ್ತಿದ್ದ ಸಂದರ್ಭದಲ್ಲಿ ಅವರು ನೀಡಿದ್ದ ಎಚ್ಚರಿಕೆಯನ್ನು ನೆನಪು ಮಾಡಿಕೊಂಡಿದ್ದಾರೆ.
'ಹೌದು, ಗ್ರೇಗ್ ಚಾಪೆಲ್ ಅವರ ಮಾತುಗಳು ನೋವುಂಟು ಮಾಡಿದ್ದವು. ರನ್ ಗಳಿಸಲು ಕಷ್ಟಪಡುತ್ತಿದ್ದಾಗ ಅವರು, ನನ್ನ ಫುಟ್‌ವರ್ಕ್ (ಪಾದ ಚಲನೆ) ಬಗ್ಗೆ ಮಾತನಾಡಿದ್ದರು. 'ನಿಮ್ಮ ಪಾದಗಳು ಚಲಿಸದಿದ್ದರೆ, ರನ್ ಗಳಿಸಲಾರಿರಿ' ಎಂದಿದ್ದರು. ಆಗ ನಾನು, 'ಗ್ರೇಗ್, ನಾನು (ಟೆಸ್ಟ್ ಕ್ರಿಕೆಟ್‌ನಲ್ಲಿ) 50ಕ್ಕಿಂತ ಹೆಚ್ಚಿನ ಸರಾಸರಿಯಲ್ಲಿ 6,000ಕ್ಕೂ ಅಧಿಕ ರನ್ ಗಳಿಸಿದ್ದೇನೆ' ಎಂದು ಉತ್ತರಿಸಿದ್ದೆ. ಆದರೆ, ಅದಕ್ಕೆ ಅವರು 'ಅದೆಲ್ಲ ಮುಖ್ಯವಾಗುವುದಿಲ್ಲ' ಎಂದಿದ್ದರು. ಬಳಿಕ ನಮ್ಮಿಬ್ಬರ ನಡುವೆ ಕೆಟ್ಟ ವಾಗ್ವಾದ ನಡೆದಿತ್ತು' ಎಂದು ಬಹಿರಂಗಪಡಿಸಿದ್ದಾರೆ.
'ಆ ವೇಳೆ ಮಧ್ಯ ಪ್ರವೇಶಿಸಿದ್ದ ರಾಹುಲ್ ದ್ರಾವಿಡ್, ನಮ್ಮಿಬ್ಬರನ್ನೂ ಪ್ರತ್ಯೇಕಿಸಿದ್ದರು. ಅದಾದ ನಂತರ, ನಾನು ಬ್ಯಾಟಿಂಗ್‌ಗೆ ಹೋಗುವಾಗ 'ರನ್ ಗಳಿಸಿ, ಇಲ್ಲವೇ ತಂಡದಿಂದ ಕೈಬಿಡುತ್ತೇನೆ' ಎಂದು ಎಚ್ಚರಿಸಿದ್ದರು. ಆ ದಿನದಾಟದ ಎರಡನೇ ಅವಧಿ ಮುಗಿಯುವ ಹೊತ್ತಿಗೆ ನಾನು 184 ರನ್ ಗಳಿಸಿದ್ದೆ. ಬಳಿಕ, 'ನನ್ನ ಬಳಿಗೆ ಬರದಂತೆ ನಿಮ್ಮ ಕೋಚ್‌ಗೆ ಹೇಳಿ' ಎಂದು ದ್ರಾವಿಡ್‌ಗೆ ತಿಳಿಸಿದ್ದೆ' ಎಂದಿದ್ದಾರೆ.
ಸೆಹ್ವಾಗ್ ದಾಖಲೆ
ಸೆಹ್ವಾಗ್, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಅತ್ಯಂತ ಯಶಸ್ವಿ ಬ್ಯಾಟರ್‌ಗಳಲ್ಲಿ ಒಬ್ಬರೆನಿಸಿದ್ದಾರೆ. ಈ ಮಾದರಿಯಲ್ಲಿ ತ್ರಿಶಕತ ಬಾರಿಸಿದ ಮೊದಲ ಭಾರತೀಯ ಎನಿಸಿರುವ ಅವರು, ಅತಿಹೆಚ್ಚು (2) ಬಾರಿ ಮುನ್ನೂರು ರನ್ ಗಳಿಸಿದ ನಾಲ್ಕೇ ನಾಲ್ಕು ಬ್ಯಾಟರ್‌ಗಳಲ್ಲಿ ಒಬ್ಬರು.
ಒಟ್ಟು 104 ಟೆಸ್ಟ್ ಪಂದ್ಯಗಳ 180 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ಮಾಡಿರುವ ವೀರೂ, 49.34ರ ಸರಾಸರಿಯಲ್ಲಿ 8,586 ರನ್ ಗಳಿಸಿದ್ದಾರೆ. ಅವರ ಖಾತೆಯಲ್ಲಿ 6 ದ್ವಿಶತಕ, 23 ಶತಕ, 32 ಅರ್ಧಶತಕಗಳಿವೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಸ್ಟ್ರೈಕ್ ರೇಟ್ 82.24 ಎಂಬುದು ಅಚ್ಚರಿಯ ಸಂಗತಿ.
ಏಕದಿನ ಮಾದರಿಯಲ್ಲಿ 251 ಪಂದ್ಯಗಳಲ್ಲಿ ಆಡಿರುವ ಅವರು, 35.06ರ ಸರಾಸರಿ ಮತ್ತು 104.34 ಸ್ಟ್ರೈಕ್ ರೇಟ್‌ನಲ್ಲಿ 8,273 ರನ್ ಕಲೆಹಾಕಿದ್ದಾರೆ. ಒಂದು ದ್ವಿಶತಕ, 15 ಶತಕ ಮತ್ತು 38 ಅರ್ಧಶತಕ ಅವರ ಬ್ಯಾಟ್‌ನಿಂದ ಬಂದಿವೆ.
19 ಟಿ20 ಪಂದ್ಯಗಳನ್ನೂ ಆಡಿದ್ದು, 2 ಅರ್ಧಶತಕ ಸಹಿತ 394 ರನ್ ಬಾರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.