ADVERTISEMENT

ಮಾಲ್ಡೀವ್ಸ್ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ವಾರ್ನರ್-ಸ್ಲೇಟರ್ ಜಟಾಪಟಿ?

ಪಿಟಿಐ
Published 9 ಮೇ 2021, 6:52 IST
Last Updated 9 ಮೇ 2021, 6:52 IST
ಡೇವಿಡ್ ವಾರ್ನರ್ ಹಾಗೂ ಮೈಕಲ್ ಸ್ಲೇಟರ್
ಡೇವಿಡ್ ವಾರ್ನರ್ ಹಾಗೂ ಮೈಕಲ್ ಸ್ಲೇಟರ್   

ಮಾಲೆ: ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತು ಮಾಜಿ ಕ್ರಿಕೆಟಿಗ ಹಾಗೂ ವೀಕ್ಷಕವಿವರಣೆಗಾರ ಮೈಕಲ್ ಸ್ಲೇಟರ್ ನಡುವೆ ಮಾಲ್ಡೀವ್ಸ್ ಬಾರ್‌ನಲ್ಲಿ ಕುಡಿದ ಮತ್ತಿನಲ್ಲಿ ತಡರಾತ್ರಿ ಜಟಾಪಟಿ ನಡೆದಿರುವುದಾಗಿ ವರದಿಯಾಗಿದೆ. ಆದರೆ ಈ ವರದಿಗಳನ್ನೆಲ್ಲ ವಾರ್ನರ್ ಹಾಗೂ ಸ್ಲೇಟರ್ ನಿರಾಕರಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಅನಿರ್ದಿಷ್ಟ ಅವಧಿಗೆ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿರುವ ಆಟಗಾರರು ಸ್ವಲ್ಪ ದಿನಗಳ ಕಾಲ ಮಾಲ್ಡೀವ್ಸ್‌ನಲ್ಲಿ ಕ್ವಾರಂಟೈನ್ ವಾಸದಲ್ಲಿದ್ದಾರೆ.

ಭಾರತದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿರುವುದರಿಂದ ಮೇ 15ರ ವರೆಗೆ ಪ್ರಯಾಣಕ್ಕೆ ಆಸ್ಟ್ರೇಲಿಯಾವು ನಿರ್ಬಂಧವನ್ನು ಹೇರಿತ್ತು. ಈ ಹಿನ್ನೆಲೆಯಲ್ಲಿ ಆಸೀಸ್ ಆಟಗಾರರನ್ನು ಮಾಲ್ಡೀವ್ಸ್‌ಗೆ ರವಾನಿಸಲಾಗಿದೆ.

ADVERTISEMENT

ಡೈಲಿ ಟೆಲಿಗ್ರಾಫ್ ವರದಿ ಪ್ರಕಾರ ಮಾಲ್ಡೀವ್ಸ್‌ನ ತಾಜ್ ಕೋರಲ್ ರೆಸಾರ್ಟ್‌ನಲ್ಲಿ ಕ್ವಾರಂಟೈನ್‌ನಲ್ಲಿರುವ ವಾರ್ನರ್ ಹಾಗೂ ಸ್ಲೇಟರ್ ನಡುವೆ ವಾಗ್ವಾದ ನಡೆದಿದ್ದು, ಕೈ-ಕೈ ಮಿಲಾಯಿಸುವಷ್ಟು ಬೆಳೆದಿದೆ. ಆದರೆ ನಮ್ಮಿಬ್ಬರ ಮಧ್ಯೆ ಅಂತಹ ಯಾವುದೇ ಜಗಳನಡೆದಿಲ್ಲ ಎಂದು ವಾರ್ನರ್ ಹಾಗೂ ಸ್ಲೇಟರ್ ಸ್ಪಷ್ಟನೆ ನೀಡಿದ್ದಾರೆ.

ವದಂತಿಗಳು ಸಂಪೂರ್ಣ ಅಸಂಬದ್ಧ, ನಾನು ಹಾಗೂ ಡೇವಿ ಅತ್ಯುತ್ತಮ ಸ್ನೇಹಿತರಾಗಿದ್ದು, ಪರಸ್ಪರ ಬಡಿದಾಡುವ ಸಾಧ್ಯತೆಯೇ ಇಲ್ಲ ಎಂದು ಸ್ಲೇಟರ್ ಹೇಳಿಕೆಯನ್ನು ಫಾಕ್ಸ್ ಸ್ಪೋಟ್ಸ್ ವರದಿ ಮಾಡಿದೆ.

ವಾರ್ನರ್ ಕೂಡಾ ಅಂತಹ ಯಾವುದೇ ಡ್ರಾಮಾ ನಡೆದಿಲ್ಲ ಎಂದಿದ್ದಾರೆ. ಇಂತಹ ಸುದ್ದಿಗಳನ್ನು ಎಲ್ಲಿಂದ ಪಡೆಯುತ್ತೀರಿ ಎಂಬುದು ನನಗೆ ಗೊತ್ತಿಲ್ಲ. ನೀವು ಇಲ್ಲಿರದ ಹೊರತಾಗಿ ಸಾಕ್ಷ್ಯಗಳನ್ನು ಹೊಂದದೆ ತೋಚಿದೆಲ್ಲ ಗೀಚಲು ಸಾಧ್ಯವಿಲ್ಲ. ನಮ್ಮಿಬ್ಬರ ನಡುವೆ ಅಂತದ್ದೇನು ನಡೆದಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಸಿಸಿಐ ಸಜ್ಜುಗೊಳಿಸಿದ್ದ ವಿಶೇಷ ಚಾರ್ಟರ್ ವಿಮಾನದ ಮೂಲಕ ವಾರ್ನರ್, ಸ್ಲೇಟರ್ ಸೇರಿದಂತೆ ಆಸ್ಟ್ರೇಲಿಯಾದ 39 ಆಟಗಾರರು, ತರಬೇತುದಾರರು ಹಾಗೂ ಸಿಬ್ಬಂದಿಗಳು ಮಾಲ್ಢೀವ್ಸ್‌ಗೆ ತೆರಳಿದ್ದು, ಅಲ್ಲಿ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಮೊದಲು ಸನ್‌ರೈಸರ್ಸ್ ಹೈದರಾಬಾದ್ ಕೆಟ್ಟ ಪ್ರದರ್ಶನದ ಹಿನ್ನೆಲೆಯಲ್ಲಿ ಡೇವಿಡ್ ವಾರ್ನರ್ ಅವರನ್ನು ನಾಯಕ ಸ್ಥಾನದಿಂದ ವಜಾಗೊಳಿಸಿ ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರಿಗೆ ಕಪ್ತಾನಗಿರಿ ವಹಿಸಿಕೊಡಲಾಗಿತ್ತು.

ಅತ್ತ ಭಾರತದಿಂದ ಪ್ರಯಾಣಕ್ಕೆ ಆಸ್ಟ್ರೇಲಿಯಾ ಸರ್ಕಾರ ವಿಧಿಸಿರುವ ನಿರ್ಬಂಧದ ವಿರುದ್ಧ ಕಿಡಿ ಕಾರಿದ್ದ ಸ್ಲೇಟರ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.