ವೆಸ್ಟ್ ಇಂಡೀಸ್
(ಚಿತ್ರ ಕೃಪೆ: X/@windiescricket)
ಟ್ರಿನಿಡಾಡ್: ಪ್ರವಾಸಿ ಪಾಕಿಸ್ತಾನ ವಿರುದ್ಧ ನಡೆದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ 202 ರನ್‌ಗಳ ಅಂತರದ ಭರ್ಜರಿ ಗೆಲುವು ದಾಖಲಿಸಿತು.
ಅಲ್ಲದೆ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಆ ಮೂಲಕ 34 ವರ್ಷಗಳ ಬಳಿಕ ಪಾಕಿಸ್ತಾನ ವಿರುದ್ಧ ಏಕದಿನ ಸರಣಿ ಗೆಲುವು ದಾಖಲಿಸಿದೆ.
1991ರಲ್ಲಿ ಪಾಕಿಸ್ತಾನ ವಿರುದ್ಧ ವಿಂಡೀಸ್ ಕೊನೆಯದಾಗಿ ಸರಣಿ ಗೆಲುವು ದಾಖಲಿಸಿತ್ತು. ಇದೀಗ ಚಾರಿತ್ರಿಕ ಸರಣಿ ಗೆಲುವು ಗಳಿಸಿದೆ.
ಬ್ರಿಯನ್ ಲಾರಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್, ನಾಯಕ ಶಾಯ್ ಹೋಪ್ ಅಮೋಘ ಶತಕದ (120) ನೆರವಿನಿಂದ ಆರು ವಿಕೆಟ್ ನಷ್ಟಕ್ಕೆ 294 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಹೋಪ್ 94 ಎಸೆತಗಳಲ್ಲಿ 10 ಬೌಂಡರಿ ಹಾಗೂ ಐದು ಸಿಕ್ಸರ್‌ಗಳ ನೆರವಿನಿಂದ 120 ರನ್ ಗಳಿಸಿ ಔಟಾಗದೆ ಉಳಿದರು. ಜಸ್ಟಿನ್ ಗ್ರೀವ್ಸ್ 24 ಎಸೆತಗಳಲ್ಲಿ ಅಜೇಯ 43 ರನ್ ಗಳಿಸಿ (4 ಬೌಂಡರಿ, 2 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು.
ಬಳಿಕ ವಿಂಡೀಸ್ ವೇಗಿ ಜೇಡನ್ ಸೀಲ್ಸ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 29.2 ಓವರ್‌ಗಳಲ್ಲಿ ಕೇವಲ 92 ರನ್‌ಗಳಿಗೆ ಆಲೌಟ್ ಆಯಿತು. ಜೇಡನ್ ಕೇವಲ 18 ರನ್ ತೆತ್ತು ಆರು ವಿಕೆಟ್ ಕಿತ್ತು ಮಿಂಚಿದರು.
ಪಾಕಿಸ್ತಾನದ ಆರಂಭಿಕ ಬ್ಯಾಟರ್‌ಗಳು ಸೇರಿದಂತೆ ಐದು ಪಂದ್ಯ ಬ್ಯಾಟರ್‌ಗಳು ಶೂನ್ಯಕ್ಕೆ ಔಟ್ ಆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.