ಆ್ಯಂಡ್ರೆ ರಸೆಲ್
(ಚಿತ್ರ ಕೃಪೆ: X/@windiescricket)
ಜಮೈಕಾ: ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್‌ನಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ದ ನಡೆದ ಎರಡನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಸ್ಟ್ರೇಲಿಯಾ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.
ಇದರೊಂದಿಗೆ ವಿದಾಯದ ಪಂದ್ಯದಲ್ಲಿ ವಿಂಡೀಸ್‌ನ ಆಲ್‌ರೌಂಡರ್ ದಿಟ್ಟ ಹೋರಾಟ ನೀಡಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ. ಅತ್ತ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸೀಸ್ 2-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ನಡೆಸಿದ ವಿಂಡೀಸ್ ಎಂಟು ವಿಕೆಟ್ ನಷ್ಟಕ್ಕೆ 172 ರನ್‌ಗಳ ಸವಾಲಿನ ಮೊತ್ತ ಪೇರಿಸಿತು.
ಆರಂಭಿಕ ಬ್ಯಾಟರ್ ಬ್ರಂಡನ್ ಕಿಂಗ್ ಕೇವಲ 36 ಎಸೆತಗಳಲ್ಲಿ 51 ರನ್ ಗಳಿಸಿ (3 ಬೌಂಡರಿ, 4 ಸಿಕ್ಸರ್) ಅಬ್ಬರಿಸಿದರು.
ಇನಿಂಗ್ಸ್ ಕೊನೆಯಲ್ಲಿ ಮಿಂಚಿದ ರಸೆಲ್ 15 ಎಸೆತಗಳಲ್ಲಿ 36 ರನ್ ಗಳಿಸಿದರು. ರಸೆಲ್ ಇನಿಂಗ್ಸ್‌ನಲ್ಲಿ ನಾಲ್ಕು ಸಿಕ್ಸರ್ ಹಾಗೂ ಎರಡು ಬೌಂಡರಿ ಸೇರಿತ್ತು.
ಆಸೀಸ್ ಪರ ಆ್ಯಡಂ ಜಾಂಪಾ ಮೂರು ವಿಕೆಟ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ನಥನ್ ಎಲ್ಲೀಸ್ ತಲಾ ಎರಡು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 15.2 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಜೋಶ್ ಇಂಗ್ಲಿಸ್ 33 ಎಸೆತಗಳಲ್ಲಿ 78 ರನ್ ಗಳಿಸಿ (7 ಬೌಂಡರಿ, 5 ಸಿಕ್ಸರ್) ಔಟಾಗದೆ ಉಳಿದರು.
ಅವರಿಗೆ ತಕ್ಕ ಸಾಥ್ ನೀಡದ ಕ್ಯಾಮರೂನ್ ಗ್ರೀನ್ 32 ಎಸೆತಗಳಲ್ಲಿ ಅಜೇಯ 56 ರನ್ (3 ಬೌಂಡರಿ, 4 ಸಿಕ್ಸರ್) ಗಳಿಸಿದರು.
37 ವರ್ಷದ ರಸೆಲ್‌ಗೆ ಬೌಲಿಂಗ್‌ನಲ್ಲಿ ಮಿಂಚಲು ಸಾಧ್ಯವಾಗಲಿಲ್ಲ. ಒಂದು ಓವರ್‌ನಲ್ಲಿ 16 ರನ್ ಬಿಟ್ಟುಕೊಟ್ಟು ದುಬಾರಿಯೆನಿಸಿದರು.
ಇದಕ್ಕೂ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿರುವ ರಸೆಲ್ ಅವರಿಗೆ ವಿಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಗೌರವ ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.