ADVERTISEMENT

ಮತ್ತೆ ಕ್ರಿಕೆಟ್ ಕಣಕ್ಕಿಳಿಯಲಿದೆ ಭಾರತ ತಂಡ

ಕೆ.ಎಲ್. ರಾಹಲ್, ಮನೀಷ್ ಪಾಂಡೆಗೆ ಸಿಗುವುದೇ ಅವಕಾಶ?

ಪಿಟಿಐ
Published 2 ಆಗಸ್ಟ್ 2019, 19:30 IST
Last Updated 2 ಆಗಸ್ಟ್ 2019, 19:30 IST
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ   –ಎಎಫ್‌ಪಿ ಚಿತ್ರ
ಕೆ.ಎಲ್. ರಾಹುಲ್ ಮತ್ತು ವಿರಾಟ್ ಕೊಹ್ಲಿ   –ಎಎಫ್‌ಪಿ ಚಿತ್ರ   

ಲಾಡೆರ್‌ಹಿಲ್, ಅಮೆರಿಕ: ಹೋದ ತಿಂಗಳು ಇಂಗ್ಲೆಂಡ್‌ನಲ್ಲಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ನಂತರ ದೀರ್ಘ ವಿಶ್ರಾಂತಿ ಪಡೆದಿದ್ದ ಭಾರತ ಕ್ರಿಕೆಟ್ ತಂಡವು ಮತ್ತೆ ಕಣಕ್ಕೆ ಮರಳುತ್ತಿದೆ.

ಫ್ಲಾರಿಡಾದಲ್ಲಿ ಶನಿವಾರ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ ಆಡಲಿದೆ. ವಿರಾಟ್ ಕೊಹ್ಲಿ ನಾಯಕತ್ವದ ಬಳಗದಲ್ಲಿ ಯುವ ಆಟಗಾರರ ದಂಡು ಇದೆ. ಅವರೆಲ್ಲರಿಗೂ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸುವ ಸುವರ್ಣ ಅವಕಾಶ ಇದಾಗಿದೆ. ಮುಂದಿನ ವರ್ಷ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಟೂರ್ನಿಗೆ ತಂಡ ಕಟ್ಟುವ ಕಾರ್ಯ ಇಲ್ಲಿಂದಲೇ ಆರಂಭವಾಗಲಿದೆ. ಅದಕ್ಕಾಗಿ ಆಯ್ಕೆ ಸಮಿತಿಯ ಗಮನ ಸೆಳೆಯುವ ಆಟವಾಡುವತ್ತ ಯುವಪಡೆಯು ಚಿತ್ತ ನೆಟ್ಟಿದೆ.

ದೇಶದ ಗಡಿ ಕಾಯುವ ಕಾರ್ಯಕ್ಕಾಗಿ ತೆರಳಿರುವ ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಮಹೇಂದ್ರಸಿಂಗ್ ಧೋನಿ ಈ ಪ್ರವಾಸದಲ್ಲಿ ಆಡುತ್ತಿಲ್ಲ. ಆದ್ದರಿಂದ ಅವರ ಬದಲಿಗೆ ಟ್ವೆಂಟಿ–20 ಮತ್ತು ಏಕದಿನ ಕ್ರಿಕೆಟ್ ಸರಣಿಗಳಲ್ಲಿ ವಿಕೆಟ್‌ಕೀಪರ್ ಹೊಣೆಯನ್ನು ಯುವ ಆಟಗಾರ ರಿಷಭ್ ಪಂತ್ ನಿಭಾಯಿಸಲಿದ್ದಾರೆ. ಇನಿಂಗ್ಸ್‌ ಆರಂಭಿಸಲು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರಿಗೆ ಅವಕಾಶ ಸಿಗಬಹುದು.

ADVERTISEMENT

ಆದರೆ, ಕಳೆದ ಎರಡು ವರ್ಷಗಳಲ್ಲಿ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಶಿಖರ್‌ ಗಿಂತ ಹೆಚ್ಚು ಸ್ಟ್ರೈಕ್‌ರೇಟ್ ಮತ್ತು ರನ್ ಗಳಿಕೆ ಮಾಡಿರುವ ಕೆ.ಎಲ್. ರಾಹುಲ್ ಅವರಿಗೂ ಅವಕಾಶ ಸಿಕ್ಕರೆ ಅಚ್ಚರಿಪಡಬೇಕಿಲ್ಲ. ಒಂದೊಮ್ಮೆ ರಾಹುಲ್ ಇನಿಂಗ್ಸ್‌ ಆರಂಭಿಸದಿದ್ದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ರಿಷಭ್ ಐದು ಅಥವಾ ಆರನೇ ಕ್ರಮಾಂಕದಲ್ಲಿ ಆಡಬಹುದು. ಮಧ್ಯಮ ಕ್ರಮಾಂಕದಲ್ಲಿ ಕನ್ನಡಿಗ ಮನೀಷ್ ಪಾಂಡೆಗೆ ಅವಕಾಶ ಸಿಗುವುದೇ ಎಂಬುದು ಖಚಿತವಿಲ್ಲ. ಏಕೆಂದರೆ ಆಲ್‌ರೌಂಡರ್ ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ ಅವರೂ ಸ್ಪರ್ಧೆಯಲ್ಲಿದ್ದಾರೆ.

ಮೂವರು ಮಧ್ಯಮವೇಗಿಗಳು ಮತ್ತು ಇಬ್ಬರು ಸ್ಪಿನ್ನರ್‌ಗಳ ಸಂಯೋಜನೆಯೊಂದಿಗೆ ತಂಡವು ಕಣಕ್ಕಿಳಿದರೆ, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್ ಆಡುವುದು ಖಚಿತ. ಮೂರನೇ ಸ್ಥಾನಕ್ಕೆ ದೀಪಕ್ ಚಾಹರ್ ಅಥವಾ ನವದೀಪ್ ಅವರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾಗಬಹುದು. ಸ್ಪಿನ್‌ ವಿಭಾಗದಲ್ಲಿ ಜಡೇಜ, ಕೃಣಾಲ್ ಮತ್ತು ವಾಷಿಂಗ್ಟನ್ ಸುಂದರ್ ಕಣಕ್ಕಿಳಿಯಬಹುದು.

ಆದರೆ ಟ್ವೆಂಟಿ–20 ಮಾದರಿಯ ಹಾಲಿ ವಿಶ್ವ ಚಾಂಪಿಯನ್ ವಿಂಡೀಸ್ ತಂಡವು ಭಾರತದ ಬೌಲರ್‌ಗಳಿಗೆ ಚಳ್ಳೆಹಣ್ಣು ತಿನ್ನಿಸಲು ಸನ್ನದ್ಧವಾಗಿದೆ. ನಾಯಕ ಕಾರ್ಲೋಸ್ ಬ್ರಾಥ್‌ವೇಟ್, ಆ್ಯಂಡ್ರೆ ರಸೆಲ್, ಶಿಮ್ರೊನ್ ಹೆಟ್ಮೆಯರ್ ಮತ್ತು ನಿಕೊಲಸ್ ಪೂರನ್ ಅವರು ಸ್ಫೋಟಕ ಬ್ಯಾಟಿಂಗ್ ಮಾಡುವಂತಹ ಸಮರ್ಥರು. ಬೌಲಿಂಗ್‌ನಲ್ಲಿ ‘ಸೆಲ್ಯೂಟ್‌’ ಖ್ಯಾತಿಯ ಶೆಲ್ಡನ್ ಕಾಟ್ರೆಲ್ ಮತ್ತು ಓಷೆನ್ ಥಾಮಸ್ ಅವರನ್ನು ಎದುರಿಸುವುದು ವಿಂಡೀಸ್ ಬ್ಯಾಟಿಂಗ್ ಪಡೆಗೆ ಕಷ್ಟವಾಗಬಹುದು. ವಿಶ್ವಕಪ್ ಟೂರ್ನಿಯಲ್ಲಿ ಐದು ಶತಕ ಹೊಡೆದು ಮಿಂಚಿರುವ ರೋಹಿತ್ ಶರ್ಮಾ, ಎಡಗೈ ಬ್ಯಾಟ್ಸ್‌ಮನ್ ಶಿಖರ್ ಮತ್ತು ವಿರಾಟ್ ಅವರನ್ನು ಕಟ್ಟಿಹಾಕುವತ್ತಲೇ ವಿಂಡೀಸ್ ಬೌಲರ್‌ಗಳು ವಿಶೇಷ ಯೋಜನೆ ರೂಪಿಸುವುದು ಖಚಿತ.

ಗೇಲ್ ದಾಖಲೆ ಮುರಿಯುವತ್ತ ರೋಹಿತ್
ಅಂತರರಾಷ್ಟ್ರೀಯ ಟ್ವೆಂಟಿ –20 ಕ್ರಿಕೆಟ್ ನ ಸ್ಪೋಟಕ ಬ್ಯಾಟ್ಸ್‌ಮನ್ ಕ್ರಿಸ್‌ ಗೇಲ್ ಅವರ ದಾಖಲೆಯನ್ನು ಮುರಿಯುವತ್ತ ಭಾರತದ ರೋಹಿತ್ ಶರ್ಮಾ ಹೆಜ್ಜೆ ಇಟ್ಟಿದ್ದಾರೆ.

ಈ ಟೂರ್ನಿಯಲ್ಲಿ ಅವರು ನಾಲ್ಕು ಸಿಕ್ಸರ್‌ಗಳನ್ನು ಸಿಡಿಸಿದರೆ ಗೇಲ್ ದಾಖಲೆಯನ್ನು ಮೀರಿ ನಿಲ್ಲುವರು. ಜಮೈಕಾದ ಗೇಲ್ 58 ಇನಿಂಗ್ಸ್‌ಗಳಲ್ಲಿ 105 ಸಿಕ್ಸರ್ ಬಾರಿಸಿದ್ದಾರೆ. ರೋಹಿತ್ ಸದ್ಯ 94 ಪಂದ್ಯಗಳಿಂದ 102 ಸಿಕ್ಸರ್‌ ಗಳಿಸಿದ್ದಾರೆ. ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ 76 ಪಂದ್ಯಗಳಿಂದ 103 ಸಿಕ್ಸರ್‌ ಗಳಿಸಿದ್ದಾರೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ಶ್ರೇಯಸ್ ಅಯ್ಯರ್, ಮನೀಷ್ ಪಾಂಡೆ, ರಿಷಭ್ ಪಂತ್, ಕೃಣಾಲ್ ಪಾಂಡ್ಯ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ರಾಹುಲ್ ಚಾಹರ್, ಭುವನೇಶ್ವರ್ ಕುಮಾರ್, ಖಲೀಲ್ ಅಹಮದ್, ದೀಪಕ್ ಚಾಹರ್, ನವದೀಪ್ ಸೈನಿ

ವೆಸ್ಟ್ ಇಂಡೀಸ್: ಕಾರ್ಲೋಸ್ ಬ್ರಾಥ್‌ವೇಟ್ (ನಾಯಕ), ಜಾನ್ ಕ್ಯಾಂಪ್‌ಬೆಲ್, ಎವಿನ್ ಲೂಯಿಸ್, ಶಿಮ್ರೊನ್ ಹೆಟ್ಮೆಯರ್, ನಿಕೊಲಸ್ ಪೂರನ್, ಕೀರನ್ ಪೊಲಾರ್ಡ್, ರೋಮನ್ ಪೊವೆಲ್, ಕೀಮೊ ಪಾಲ್, ಸುನಿಲ್ ನಾರಾಯಣ್, ಶೆಲ್ಡನ್ ಕಾಟ್ರೆಲ್, ಓಷೇನ್ ಥಾಮಸ್, ಅಂತೋನಿ ಬ್ರಾಂಬಲೆ, ಆ್ಯಂಡ್ರೆ ರಸೆಲ್, ಕ್ಯಾರಿ ಪಿಯರ್.

ಪಂದ್ಯ ಆರಂಭ: ರಾತ್ರಿ 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.