
ಮುಂಬೈ: ಶಿಮ್ರಾನ್ ಹೆಟ್ಮೆಯರ್ ಮತ್ತು ರೋವ್ಮನ್ ಪಾವೆಲ್ ಅವರ ಸಿಡಿಲಬ್ಬರದ ಇನಿಂಗ್ಸ್ ಬಳಿಕ ಎಡಗೈ ಸ್ಪಿನ್ನರ್ ಗುಡಕೇಶ್ ಮೋತಿ ಕೈಚಳಕ ತೋರಿದರು. ಅವರ ಅಮೋಘ ಪ್ರದರ್ಶನದ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಸೋಮವಾರ ಟಿ20 ವಿಶ್ವಕಪ್ ಸೂಪರ್ 8ರ ಹಂತದ ಪಂದ್ಯದಲ್ಲಿ 107 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ನಿರಾಯಾಸವಾಗಿ ಮಣಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವಿಂಡೀಸ್ ತಂಡವು ಹೆಟ್ಮೆಯರ್ (85;34ಎ, 4x7, 6x7) ಮತ್ತು ಪಾವೆಲ್ (59;35ಎ, 4x4, 6x4) ಅವರ ಬ್ಯಾಟಿಂಗ್ ಬಲದಿಂದ 6 ವಿಕೆಟ್‌ಗೆ 254 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದು ವಿಶ್ವಕಪ್ ಇತಿಹಾಸದಲ್ಲೇ ಎರಡನೇ ಅತ್ಯಧಿಕ ಮೊತ್ತ ಎನಿಸಿತು.
ಈ ಕಠಿಣ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ 17.4 ಓವರ್‌ಗಳಲ್ಲಿ 147 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಸ್ಪಿನ್ನರ್‌ಗಳಾದ ಗುಡಕೇಶ್ (28ಕ್ಕೆ 4) ಮತ್ತು ಅಕೇಲ್ ಹುಸೇನ್ (28ಕ್ಕೆ 3) ಅವರು ಎದುರಾಳಿ ತಂಡವನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಗೆಲುವಿನೊಂದಿಗೆ ಒಂದನೇ ಗುಂಪಿನಲ್ಲಿ ವಿಂಡೀಸ್ ತಂಡವು ಅಗ್ರಸ್ಥಾನಕ್ಕೇರಿತು.
ಜಿಂಬಾಬ್ವೆಯ ಇನಿಂಗ್ಸ್ ಆರಂಭಕ್ಕೆ ಮುನ್ನವೇ ವಿಂಡೀಸ್ ಗೆಲುವು ಬಹುತೇಕ ಖಚಿತವಾಗಿತ್ತು. ಸಿಕಂದರ್ ರಝಾ ಪಡೆಯು ಯಾವುದೇ ಹಂತದಲ್ಲಿ ದಿಟ್ಟ ಹೋರಾಟ ತೋರಲಿಲ್ಲ. 20 ರನ್‌ಗಳಿಗೆ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ಡಿಯೋನ್ ಮೈಯರ್ಸ್ (28) ಮತ್ತು ನಾಯಕ ಸಿಕಂದರ್ ರಝಾ (27) ಕೊಂಚ ಚೇತರಿಕೆ ನೀಡಿದರು. ನಂತರದಲ್ಲಿ ಬ್ರಾಡ್ ಇವಾನ್ಸ್ (43;21ಎ) ಹೋರಾಟ ನಡೆಸಿದರು. ಅವರು ರಿಚಾರ್ಡ್ ಎನ್‌ಗವಾರ (ಔಟಾಗದೇ 7) ಜೊತೆ 10ನೇ ವಿಕೆಟ್‌ಗೆ 45 ರನ್ ಸೇರಿಸಿದ್ದು, ಇನಿಂಗ್ಸ್‌ನ ಅತಿ ದೊಡ್ಡ ಜೊತೆಯಾಟ ಎಸಿಸಿತು.
ಇದಕ್ಕೂ ಮುನ್ನ ಹೆಟ್ಮೆಯರ್ ಅವರು ಜಿಂಬಾಬ್ವೆ ದಾಳಿಯನ್ನು ಹಿಗ್ಗಾಮುಗ್ಗಾ ದಂಡಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಅವರು ಕೇವಲ 19 ಎಸೆತಗಳಲ್ಲೇ ಅರ್ಧಶತಕ ತಲುಪಿದರು. ಜಿಂಬಾಬ್ವೆಯ ತಶಿಂಗ ಮುಸೆಕಿವ ಅವರಿಗೆ ಈ ಪಂದ್ಯ ದುಃಸ್ವಪ್ನವಾಯಿತು. ಹೆಟ್ಮೆಯರ್ ಅವರು 9 ರನ್ ಮತ್ತು 70 ರನ್ ಗಳಿಸಿದ್ದಾಗ ಅವರು ಸುಲಭ ಕ್ಯಾಚ್ ಕೈಬಿಟ್ಟರು. ಇದರಿಂದ ಜಿಂಬಾಬ್ವೆ ತಂಡ ಕೈಸುಟ್ಟುಕೊಳ್ಳುವಂತಾಯಿತು. ಪವರ್ ಪ್ಲೇ ಅವಧಿಯಲ್ಲಿ ವೆಸ್ಟ್ ಇಂಡೀಸ್ ಮೊತ್ತ 2 ವಿಕೆಟ್‌ಗೆ 55 ಗಳಿಸಿತ್ತು. ಆದರೆ ನಂತರ ಅಬ್ಬರಿಸಿತು.
ರಿಚಾರ್ಡ್ ಬೌಲಿಂಗ್‌ನಲ್ಲಿ (ಇನಿಂಗ್ಸ್‌ನ ಮೂರನೇ ಓವರ್) ಬ್ರಾಂಡೆನ್ ಕಿಂಗ್ (9) ಅವರ ಕ್ಯಾಚನ್ನು ಡೀಪ್ ಬ್ಯಾಕ್‌ವರ್ಡ್‌ಸ್ಕ್ವೇರ್‌ನಲ್ಲಿ ಹಿಡಿದಿದ್ದ ಮುಸೆಕಿವ, ಬ್ಲೆಸಿಂಗ್ ಮುಝರಾಬಾನಿ ಮಾಡಿದ ಮರು ಓವರಿನಲ್ಲೇ ಚೆಂಡು ಕೈಗೆ ಬಂದರೂ ಹಿಡಿತಕ್ಕೆ ಪಡೆಯಲಾಗಲಿಲ್ಲ. ಇದು ಪಂದ್ಯಕ್ಕೆ ತಿರುವು ನೀಡಿತು. ಗ್ರೇಮ್ ಕ್ರೀಮರ್ ಮಾಡಿದ ಏಳನೇ ಓವರಿನಲ್ಲಿ ಎರಡು ಭರ್ಜರಿ ಸಿಕ್ಸರ್‌ಗಳನ್ನು ಹೊಡೆದ ಹೆಟ್ಮೆಯರ್ ಅವರು ನಂತರ ಒಂದೇ ಸಮನೇ ಆಕ್ರಮಣಕ್ಕಿಳಿದು ಚೆಂಡನ್ನು ಕ್ರೀಡಾಂಗಣದ ಮೂಲೆಮೂಲೆಗಟ್ಟಿದರು. ರಝಾ (3–0–52–0) ಅವರ ಒಂದೇ ಓವರಿನಲ್ಲಿ ಅವರು 20 ರನ್ ಬಾಚಿದರು.
ಹೆಟ್ಮೆಯರ್ ಅವರಿಗೆ ರೋವ್ಮನ್ ಪಾವೆಲ್ ಸಮರ್ಥ ಬೆಂಬಲ ನೀಡಿದರು. ಇವರಿಬ್ಬರು ಮೂರನೇ ವಿಕೆಟ್‌ಗೆ ಕೇವಲ 52 ಎಸೆತಗಳಲ್ಲಿ 122 ರನ್ ಜೊತೆಯಾಟವಾಡಿದರು. ಕೊನೆಯಲ್ಲಿ ಶೆರ್ಫೇನ್ ರುದರ್‌ಫೋರ್ಡ್ (ಅಜೇಯ 31; 13ಎ), ರೊಮಾರಿಯೊ ಶೆಫರ್ಡ್ (21;10ಎ), ಜೇಸನ್ ಹೋಲ್ಡರ್ (13;4 ಎ) ಅವರು ತಂಡ 250 ಗಡಿದಾಟಲು ನೆರವಾದರು.
ವೆಸ್ಟ್ ಇಂಡೀಸ್ ಇನಿಂಗ್ಸ್‌ನಲ್ಲಿ 19 ಸಿಕ್ಸರ್‌ಗಳಿದ್ದವು. ಶ್ರೀಲಂಕಾ ಮೊದಲ ಆವೃತ್ತಿಯಲ್ಲಿ (2007) ಐರ್ಲೆಂಡ್ ವಿರುದ್ಧ ಗಳಿಸಿದ 260 ರನ್‌ಗಳು ವಿಶ್ವಕಪ್‌ನಲ್ಲಿ ತಂಡವೊಂದರ ಗರಿಷ್ಠ ಮೊತ್ತವಾಗಿತ್ತು. ಆ ದಾಖಲೆ ಸ್ವಲ್ಪದರಲ್ಲೇ ಅಬಾಧಿತವಾಗಿ ಉಳಿಯಿತು.
ಸ್ಕೋರುಗಳು: ವೆಸ್ಟ್ ಇಂಡೀಸ್: 20 ಓವರುಗಳಲ್ಲಿ 6 ವಿಕೆಟ್‌ಗೆ 254 (ಶಿಮ್ರಾನ್ ಹೆಟ್ಮೆಯರ್ 85, ರೋವ್ಮನ್ ಪಾವೆಲ್ 59, ಶೆರ್ಫೇನ್ ರುದರ್‌ಫೋರ್ಡ್ ಔಟಾಗದೇ 31; ರಿಚರ್ಡ್ ಎನ್‌ಗವಾರ 47ಕ್ಕೆ2, ಬ್ಲೆಸಿಂಗ್ ಮುಝರಾಬಾನಿ 42ಕ್ಕೆ2). ಜಿಂಬಾಬ್ವೆ: 17.4 ಓವರ್‌ಗಳಲ್ಲಿ 147 (ಡಿಯೋನ್ ಮೈಯರ್ಸ್ 28, ಮತ್ತು ನಾಯಕ ಸಿಕಂದರ್ ರಝಾ 27, ಬ್ರಾಡ್ ಇವಾನ್ಸ್ 43; ಅಕೇಲ್ ಹುಸೇನ್ 28ಕ್ಕೆ 3, ಮ್ಯಾಥ್ಯೂ ಫೋರ್ಡ್ 27ಕ್ಕೆ 2, ಗುಡಕೇಶ್ ಮೋತಿ 28ಕ್ಕೆ 4). ಪಂದ್ಯದ ಆಟಗಾರ: ಶಿಮ್ರಾನ್ ಹೆಟ್ಮೆಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.