ರೋಹಿತ್ ಶರ್ಮಾ
(ಚಿತ್ರ ಕೃಪೆ: X/@StarSportsIndia)
ಬೆಂಗಳೂರು: ಐಸಿಸಿ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಗೆಲುವಿನ ಬೆನ್ನಲ್ಲೇ ನಡೆದ ಸುದ್ದಿಗೋಷ್ಠಿಯಲ್ಲಿ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಘೋಷಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದರು.
ಈಗ 2027ರ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಆಡುತ್ತಾರೆಯೇ ಎಂಬುದರ ಕುರಿತಾಗಿಯೂ ತಮ್ಮ ಅನಿಸಿಕೆಗಳನ್ನು ಹಿಟ್‌ಮ್ಯಾನ್ ಹಂಚಿಕೊಂಡಿದ್ದಾರೆ.
ಈ ಸಂಬಂಧ 37 ವರ್ಷದ ರೋಹಿತ್ ಶರ್ಮಾ ಅವರ ವಿಡಿಯೊವನ್ನು 'ಸ್ಟಾರ್ ಸ್ಪೋರ್ಟ್ಸ್ ಇಂಡಿಯಾ' ಹಂಚಿಕೊಂಡಿದೆ.
'ನಾನು ಭವಿಷ್ಯದ ಕುರಿತು ಚಿಂತಿತನಾಗಿಲ್ಲ. ನನ್ನ ಮುಂದಿನ ಸವಾಲಿನ ಕುರಿತು ಮಾತ್ರ ಗಮನ ಹರಿಸುತ್ತೇನೆ. ಈಗಲೇ ತುಂಬಾ ದೀರ್ಘದವರೆಗೆ ಯೋಚನೆ ಮಾಡುವುದು ಉಚಿತವಲ್ಲ' ಎಂದು ಹೇಳಿದ್ದಾರೆ.
ಮಾತು ಮುಂದುವರಿಸಿದ ಅವರು, 'ಪ್ರಸ್ತುತ ನಾನು ಎಷ್ಟು ಉತ್ತಮವಾಗಿ ಆಡುತ್ತೇನೆ ಎಂಬುದರ ಮೇಲೆ ಅವಲಂಬಿಸಿದೆ. ನಾನು ಯಾವ ಮನಸ್ಥಿತಿಯಲ್ಲಿ ಇದ್ದೇನೆ ಎಂಬುದು ಮುಖ್ಯವೆನಿಸುತ್ತದೆ. ಏನು ಬೇಕಾದರೂ ಸಂಭವಿಸಬಹುದು' ಎಂದು ಹೇಳಿದ್ದಾರೆ.
'ಹೌದು, ನಾನು 2027ರ ವಿಶ್ವಕಪ್ ಆಡುತ್ತೇನೆ ಅಥವಾ ಆಡುತ್ತಿಲ್ಲ ಎಂಬುದರ ಕುರಿತು ಈಗಲೇ ನಿರ್ದಿಷ್ಟ ರೇಖೆ ಎಳೆಯಲು ಇಚ್ಛಿಸುವುದಿಲ್ಲ. ಈ ಹಂತದಲ್ಲಿ ಈ ಬಗ್ಗೆ ಚರ್ಚಿಸುವುದಲ್ಲಿ ಯಾವುದೇ ಅರ್ಥವಿಲ್ಲ. ನಿಜ ಹೇಳಬೇಕೆಂದರೆ ನನ್ನ ವೃತ್ತಿ ಜೀವನದಲ್ಲಿ ಯಾವತ್ತೂ ನಿಕಟ ಭವಿಷ್ಯದ ಸರಣಿಯತ್ತ ಮಾತ್ರ ಗಮನ ಹರಿಸಿದ್ದೇನೆ. ಹಾಗಾಗಿ ಭವಿಷ್ಯದ ಕುರಿತು ತಲೆಕೆಡಿಸಿಕೊಂಡಿಲ್ಲ' ಎಂದು ಹೇಳಿದ್ದಾರೆ.
'ನಾನು ನನ್ನ ಕ್ರಿಕೆಟ್ ಆನಂದಿಸುತ್ತಿದ್ದೇನೆ. ನನ್ನ ಬ್ಯಾಟಿಂಗ್ ನನಗೆ ಖುಷಿಯನ್ನು ನೀಡುತ್ತಿದೆ. ಸಹ ಆಟಗಾರರೊಂದಿಗೆ ಬೆರೆತುಕೊಳ್ಳುವುದನ್ನು ಇಷ್ಟಪಡುತ್ತೇನೆ. ಅವರು ಸಹ ನನ್ನ ಜೊತೆಗಿರುವುದನ್ನು ಇಷ್ಟುಪಡುತ್ತಾರೆ ಎಂದು ಭಾವಿಸುತ್ತೇನೆ. ಹಾಗಾಗಿ ಯಾಕಾಗಬಾರದು? ನನಗೆ ಕ್ರಿಕೆಟ್ ಆನಂದಿಸಲು ಸಾಧ್ಯವಾಗುವವರೆಗೂ ಮುಂದುವರಿಯಲಿದ್ದೇನೆ. ಅದುವೇ ಮುಖ್ಯವೆನಿಸುತ್ತದೆ' ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.