
ಹ್ಯಾರಿ ಬ್ರೂಕ್
ಕೊಲಂಬೊ: ಆತ್ಮವಿಶ್ವಾಸದಲ್ಲಿರುವ ಇಂಗ್ಲೆಂಡ್ ತಂಡದವರು, ಟಿ20 ವಿಶ್ವಕಪ್ ಸೂಪರ್ ಎಂಟರ ಘಟ್ಟದ ಪಂದ್ಯದಲ್ಲಿ ಶುಕ್ರವಾರ ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದ್ದಾರೆ. ಅಮೋಘ ಲಯದಲ್ಲಿರುವ ಹ್ಯಾರಿ ಬ್ರೂಕ್ ಅವರನ್ನು ಒಳಗೊಂಡಂತೆ ಇಂಗ್ಲೆಂಡ್ ಬ್ಯಾಟರ್‌ಗಳ ಪಡೆಗೆ, ಮಿಚೆಲ್ ಸ್ಯಾಂಟ್ನರ್ ಅವರನ್ನು ಒಳಗೊಂಡ ನ್ಯೂಜಿಲೆಂಡ್‌ನ ಸ್ಪಿನ್ ವಿಭಾಗದಿಂದ ಪರೀಕ್ಷೆ ಎದುರಾಗಲಿದೆ.
ಸೂಪರ್ ಎಂಟರ ಹಂತದಲ್ಲಿ ಸತತ ಎರಡು ಪಂದ್ಯಗಳನ್ನು ಗೆದ್ದಿರುವ ಇಂಗ್ಲೆಂಡ್ ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದೆ. ಲಂಕಾ ವಿರುದ್ಧ ದೊಡ್ಡ ಗೆಲುವಿನಿಂದ ಸೆಮಿಫೈನಲ್‌ನತ್ತ ದಾಪುಗಾಲಿಟ್ಟಿರುವ ನ್ಯೂಜಿಲೆಂಡ್ ಪಾಲಿಗೆ ಈ ಪಂದ್ಯ ಮಹತ್ವದ್ದು.
ಇಂಗ್ಲೆಂಡ್ ಎದುರು ಸೋತ ನಂತರ ಪಾಕಿಸ್ತಾನದ ನಿವ್ವಳ ರನ್‌ದರ –0.461ಕ್ಕೆ ಕುಸಿದಿದೆ. ಅದು ನಾಲ್ಕರ ಘಟ್ಟಕ್ಕೇರುವ ಹಾದಿ ದುರ್ಗಮವಾಗಿದೆ. ನ್ಯೂಜಿಲೆಂಡ್ ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಸೋತರೆ, ಜೊತೆಗೆ ಕೊನೆಯ ಪಂದ್ಯದಲ್ಲಿ ತಾನು ಲಂಕಾ ವಿರುದ್ಧ ಭಾರಿ ಗೆಲುವು ಸಾಧಿಸಿದರೆ ಮಾತ್ರ ಪಾಕ್ ರನ್‌ರೇಟ್ ಸುಧಾರಿಸಿ ಅವಕಾಶ ತೆರೆದುಕೊಳ್ಳಲಿದೆ.
ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲ ತಂಡ ತಾನೆಂಬುದನ್ನು ನ್ಯೂಜಿಲೆಂಡ್, ಲಂಕಾ ವಿರುದ್ಧ ಅದರ ನೆಲದಲ್ಲೇ ನಿರೂಪಿಸಿದೆ. ಬ್ರೂಕ್, ವಿಲ್ ಜಾಕ್ಸ್ ಅವರು ಪಾಕ್ ಸ್ಪಿನ್ನರ್‌ಗಳಾದ ಸೈಮ್ ಅಯೂಬ್, ಮೊಹಮ್ಮದ್ ನವಾಝ್, ಶದಾಬ್ ಖಾನ್ ಅವರನ್ನು ವಿಶ್ವಾಸದಿಂದ ಆಡಿದ್ದರು. ಸ್ಪಿನ್‌ಗೆ ನೆರವಾಗುವ ಪ್ರೇಮದಾಸ ಕ್ರೀಡಾಂಗಣದಲ್ಲಿ ಸ್ಯಾಂಟ್ನರ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಕೋಲ್ ಮೆಕ್‌ಕೊಂಚಿ ಅವರು ಎಷ್ಟರ ಮಟ್ಟಿಗೆ ಯಶಸ್ಸು ಪಡೆಯುತ್ತಾರೆ ಎಂಬುದು ನ್ಯೂಜಿಲೆಂಡ್ ಪಾಲಿಗೆ ನಿರ್ಣಾಯಕ.
ನಾಯಕ ಬ್ರೂಕ್ ಒಳ್ಳೆಯ ಲಯದಲ್ಲಿದ್ದಾರೆ. ಪಾಕಿಸ್ತಾನ ವಿರುದ್ಧ ಅವರ ಶತಕದ ಆಟ ಇಂಗ್ಲೆಂಡ್ ತಂಡದ ಗೆಲುವಿಗೆ ಕಾರಣವಾಗಿತ್ತು. ಆದರೆ ಜೋಸ್ ಬಟ್ಲರ್ ಅವರಿಂದ ಈ ಟೂರ್ನಿಯಲ್ಲಿ ಒಳ್ಳೆಯ ಇನಿಂಗ್ಸ್ ಬಂದಿಲ್ಲ. ಇಂಗ್ಲೆಂಡ್ ಸ್ಪಿನ್ ದಾಳಿಯೂ ಉತ್ತಮವಾಗಿದ್ದು ಆಫ್ ಸ್ಪಿನ್ನರ್ ಜಾಕ್ಸ್ ಮತ್ತು ಎಡಗೈ ಸ್ಪಿನ್ನರ್ ಲಿಯಾಂ ಡಾಸನ್ ಪರಿಣಾಮಕಾರಿ ಆಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.