ADVERTISEMENT

ಡಬ್ಲ್ಯುಐಪಿಎಲ್‌ ತಂಡ ಹರಾಜು: ₹4 ಸಾವಿರ ಕೋಟಿ ಗಳಿಕೆ ನಿರೀಕ್ಷೆ

ಪಿಟಿಐ
Published 23 ಜನವರಿ 2023, 17:43 IST
Last Updated 23 ಜನವರಿ 2023, 17:43 IST
   

ನವದೆಹಲಿ: ಚೊಚ್ಚಲ ಮಹಿಳಾ ಐಪಿಎಲ್‌ (ಡಬ್ಲ್ಯುಐಪಿಎಲ್‌) ಟಿ20 ಟೂರ್ನಿಯಲ್ಲಿ ಪಾಲ್ಗೊಳ್ಳುವ ಐದು ತಂಡಗಳ ಹರಾಜು ಪ್ರಕ್ರಿಯೆ ಬುಧವಾರ ನಡೆಯಲಿದ್ದು, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಜಾಕ್‌ಪಾಟ್‌ ನಿರೀಕ್ಷೆಯಲ್ಲಿದೆ.

‘ಐದು ತಂಡಗಳ ಹರಾಜಿನಲ್ಲಿ ಬಿಸಿಸಿಐ ಸುಮಾರು ₹ 4 ಸಾವಿರ ಕೋಟಿ ಗಳಿಸಬಹುದೆಂದು ಅಂದಾಜಿಸಲಾಗಿದೆ. ತಂಡಗಳನ್ನು ಕೊಳ್ಳಲು ಕೆಲವು ಕಂಪನಿಗಳ ನಡುವೆ ತುರುಸಿನ ಪೈಪೋಟಿ ನಡೆಯುವ ಸಾಧ್ಯತೆಯಿದೆ’ ಎಂದು ಮಾರುಕಟ್ಟೆ ತಜ್ಞರೊಬ್ಬರು ಹೇಳಿದ್ದಾರೆ.

‘ಎಲ್ಲ ತಂಡಗಳೂ ₹ 500 ಕೋಟಿಗಿಂತ ಹೆಚ್ಚಿನ ಬೆಲೆಗೆ ಮಾರಾಟವಾಗಬಹುದು. ಕೆಲವು ತಂಡಗಳ ಮೌಲ್ಯ ₹ 800 ಕೋಟಿಯಷ್ಟಾದರೂ ಅಚ್ಚರಿ ಪಡಬೇಕಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘30 ಕ್ಕೂ ಅಧಿಕ ಕಂಪನಿಗಳು ಹರಾಜಿನಲ್ಲಿ ಪಾಲ್ಗೊಳ್ಳಲು ₹ 5 ಲಕ್ಷ ನೀಡಿ ಅರ್ಜಿ ಪಡೆದುಕೊಂಡಿವೆ. ಐಪಿಎಲ್‌ ಟೂರ್ನಿಯ ಎಲ್ಲ 10 ತಂಡಗಳ ಒಡೆತನ ಹೊಂದಿರುವ ಕಂಪನಿಗಳು ಮಹಿಳಾ ಟೂರ್ನಿಯ ತಂಡಗಳನ್ನು ಖರೀದಿಸಲು ಸ್ಪರ್ಧೆಯಲ್ಲಿವೆ’ ಎಂದು ಮೂಲಗಳು ಹೇಳಿವೆ.

ಪ್ರಮುಖ ಕಾರ್ಪೊರೇಟ್‌ ಸಂಸ್ಥೆಗಳಾದ ಅದಾನಿ ಸಮೂಹ, ಟೊರೆಂಟ್ ಸಮೂಹ, ಹಲ್ದಿರಾಮ್ಸ್‌, ಕ್ಯಾಪ್ರಿ ಗೋಬಲ್, ಕೊಟಕ್‌ ಮತ್ತು ಆದಿತ್ಯ ಬಿರ್ಲಾ ಸಮೂಹ ಕಂಪನಿಗಳು ತಂಡಗಳನ್ನು ಖರೀದಿಸಲು ಆಸಕ್ತಿ
ತೋರಿವೆ.

ಐ‍ಪಿಎಲ್‌ ಫ್ರಾಂಚೈಸ್‌ಗಳಾದ ಮುಂಬೈ ಇಂಡಿಯನ್ಸ್‌, ರಾಜಸ್ತಾನ ರಾಯಲ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ಮತ್ತು ಕೋಲ್ಕತ್ತ ನೈಟ್‌ ರೈಡರ್ಸ್‌ನ ಮಾಲೀಕರು, ಪುರುಷರ ತಂಡದ ಜತೆ ಮಹಿಳಾ ತಂಡದ ಮಾಲೀಕತ್ವ ವಹಿಸಿಕೊಳ್ಳಲು ಪೈಪೋಟಿ ನಡೆಸಲಿದ್ದಾರೆ.

ಮಹಿಳಾ ಐಪಿಎಲ್‌ನ ಮೊದಲ ಆವೃತ್ತಿಯ ಟೂರ್ನಿ ಮಾರ್ಚ್‌ನಲ್ಲಿ ಮುಂಬೈನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಈ ಟೂರ್ನಿಯ ಮುಂದಿನ ಐದು ವರ್ಷಗಳ ಪ್ರಸಾರ ಹಕ್ಕನ್ನು ವಯಾಕಾಮ್‌ 18 ಸಂಸ್ಥೆ ₹ 951 ಕೋಟಿಗೆ ಈಚೆಗೆ ತನ್ನದಾಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.