ಎಂ.ಚಿನ್ನಸ್ವಾಮಿ ಕ್ರೀಡಾಂಗಣ ಹಾಗೂ ಆರ್‌ಸಿಬಿ ವಿಜಯೋತ್ಸವದ ವೇಳೆ ಆಟಗಾರರಿದ್ದ ವಾಹನದ ಬಳಿ ಜಮಾಯಿಸಿದ್ದ ಅಭಿಮಾನಿಗಳು
ಪ್ರಜಾವಾಣಿ ಚಿತ್ರಗಳು
ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣವು ನಿರೀಕ್ಷೆಯಂತೆ ಮುಂಬರುವ ಮಹಿಳಾ ಏಕದಿನ ವಿಶ್ವಕಪ್ ಪಂದ್ಯಗಳ ಆತಿಥ್ಯದ ಹಕ್ಕನ್ನು ಕಳೆದುಕೊಂಡಿದೆ. ಆಡಳಿತಾತ್ಮಕ ಮತ್ತು ಭದ್ರತಾ ವ್ಯವಸ್ಥೆ ಏರ್ಪಾಡಿಗೆ ಅಧಿಕಾರಿಗಳು ವಿಫಲರಾದ ಕಾರಣ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈ ಪಂದ್ಯಗಳನ್ನು ನವಿ ಮುಂಬೈನ ಡಿ.ವೈ. ಪಾಟೀಲ ಕ್ರೀಡಾಂಗಣಕ್ಕೆ ಸ್ಥಳಾಂತರಿಸಲು ಶುಕ್ರವಾರ ತೀರ್ಮಾನಿಸಿತು.
ಚಿನ್ನಸಾಮಿ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 30ರ ಉದ್ಘಾಟನಾ ಪಂದ್ಯ, ಎರಡು ಲೀಗ್ ಪಂದ್ಯ, ಸೆಮಿಫೈನಲ್ ಮತ್ತು ಸಂಭವನೀಯ ಫೈನಲ್ ಸೇರಿ ಐದು ಪಂದ್ಯಗಳು ನಿಗದಿಯಾಗಿದ್ದವು. ಪಾಕಿಸ್ತಾನ ಫೈನಲ್ ತಲುಪಿದ್ದಲ್ಲಿ ಮಾತ್ರ ಅಂತಿಮ ಪಂದ್ಯ ಕೊಲಂಬೊದಲ್ಲಿ ನಡೆಯಲಿದೆ.
ಐಪಿಎಲ್ ಚಾಂಪಿಯನ್ ಆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ (ಜೂನ್ 4ರಂದು) ನಡೆದ ವೇಳೆ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಸಾವಿಗೀಡಾಗಿದ್ದರು. ನಂತರ ಇಲ್ಲಿ ಪಂದ್ಯ ನಡೆಯುವ ಸಾಧ್ಯತೆ ಬಹುತೇಕ ದೂರವಾಗಿತ್ತು.
ವ್ಯಾಪಕ ಆಕ್ರೋಶ, ಟೀಕೆಗಳಿಂದ ಮುಜುಗರಕ್ಕೆ ಒಳಗಾದ ರಾಜ್ಯ ಸರ್ಕಾರ ನ್ಯಾ. ಜಾನ್ ಮೈಕೆಲ್ ಡಿಕುನ್ಹಾ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ರಚಿಸಿತ್ತು. ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ವಿವರವಾದ ತನಿಖೆ ನಡೆಸಿದ ಆಯೋಗವು, ದೊಡ್ಡ ಸಂಖ್ಯೆಯಲ್ಲಿ ಜನಸಮೂಹ ಸೇರಿದರೆ ಅದನ್ನು ನಿಭಾಯಿಸಲು ಕ್ರೀಡಾಂಗಣ ಸಶಕ್ತವಾಗಿಲ್ಲ ಎಂದು ತಿಳಿಸಿತ್ತು. ಸುರಕ್ಷತೆಯ ದೃಷ್ಟಿಯಿಂದ ಇದರ ಈಗಿನ ವಿನ್ಯಾಸವೂ ಸೂಕ್ತವಾಗಿಲ್ಲ ಎಂದೂ ಅಭಿಪ್ರಾಯಪಟ್ಟಿತ್ತು.
ದೆಹಲಿ ವರದಿ: ಕಾಲ್ತುಳಿತ ದುರಂತದ ನಂತರ ಈ ಕ್ರೀಡಾಂಗಣದಲ್ಲಿ ಯಾವುದೇ ಪಂದ್ಯಗಳು ನಡೆದಿಲ್ಲ. ವಿಶ್ವಕಪ್ ಪಂದ್ಯಗಳನ್ನು ನಡೆಸಲು ಅಗತ್ಯ ಅನುಮತಿಗಳನ್ನು ಪಡೆಯುವಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಸೂಚಿಸಿತ್ತು.
ಐಸಿಸಿ ಮಾರ್ಗದರ್ಶಿ ಸೂತ್ರಗಳ ಪ್ರಕಾರ ಆತಿಥೇಯ ಸಂಸ್ಥೆಯು, ಟೂರ್ನಿಯ ಆರಂಭಕ್ಕೆ 30 ದಿನಗಳ ಮೊದಲು ಕ್ರೀಡಾಂಗಣವನ್ನು ಐಸಿಸಿಗೆ ಹಸ್ತಾಂತರಿಸಬೇಕು. ಆ ಅವಧಿಯಲ್ಲಿ ಯಾವುದೇ ಪಂದ್ಯಗಳನ್ನೂ ನಡೆಸುವಂತಿಲ್ಲ.
ಈ ಮೊದಲು ತಿರುವನಂತರಪುರದ ಕಾರ್ಯ ವಟ್ಟಂನಲ್ಲಿರುವ ಗ್ರೀನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಬೆಂಗಳೂರಿನ ಪಂದ್ಯಗಳನ್ನು ಸ್ಥಳಾಂತರಿಸಲು ಉದ್ದೇಶಿಸಲಾಗಿತ್ತು. ಆದರೆ ನವಿ ಮುಂಬೈ ಕ್ರೀಡಾಂಗಣವನ್ನು ಅಂತಿಮಗೊಳಿಸಲಾಯಿತು.
12 ವರ್ಷಗಳ ಬಳಿಕ ಐಸಿಸಿ ಮಹಿಳಾ ವಿಶ್ವಕಪ್ ಆತಿಥ್ಯ ಭಾರತಕ್ಕೆ ಮರಳಿದೆ.
ನವಿ ಮುಂಬೈ ಮಹಿಳಾ ಕ್ರಿಕೆಟ್‌ನ ಕೇಂದ್ರವಾಗಿ ಬೆಳೆಯುತ್ತಿದೆ ಎಂದು ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದರು. ‘ಇತ್ತೀಚಿನ ವರ್ಷಗಳಲ್ಲಿ ನವಿ ಮುಂಬೈ ಮಹಿಳಾ ಕ್ರಿಕೆಟ್‌ನ ತವರು ಆಗಿ ಬೆಳೆದಿದೆ. ಅಂತರರಾಷ್ಟ್ರೀಯ ಪಂದ್ಯಗಲ ವೇಳೆ ಮತ್ತು ಡಬ್ಲ್ಯುಪಿಎಲ್ ಪಂದ್ಯಗಳ ವೇಳೆ ದೊರೆತ ಬೆಂಬಲ ನಿರೀಕ್ಷೆಗೂ ಮಿಗಿಲಾದುದು. ಇಲ್ಲಿನ ವಾತಾವರಣ ಆಟಗಾರ್ತಿಯರಲ್ಲಿ ಹುಮ್ಮಸ್ಸು ಮೂಡಿಸಿತು’ ಎಂದು ಅವರು ಹೇಳಿದರು.
‘ಇಂಥಹದ್ದೇ ಬೆಂಬಲ, 12 ವರ್ಷಗಳ ನಂತರ ಭಾರತದಲ್ಲಿ ನಡೆಯಲಿರುವ ಐಸಿಸಿ ಮಹಿಳಾ ವಿಶ್ವಕಪ್ ವೇಳೆಯೂ ದೊರೆಯಲಿದೆ ಎಂಬ ಭರವಸೆಯಿದೆ’ ಎಂದು ಶಾ ಹೇಳಿದರು.
ಡಿ.ವೈ ಪಾಟೀಲ ಕ್ರೀಡಾಂಗಣದಲ್ಲಿ ವಿಶ್ವಕಪ್‌ನ ಮೂರು ಲೀಗ್ ಪಂದ್ಯ, ಸೆಮಿಫೈನಲ್ ಮತ್ತು ಸಂಭವನೀಯ ಫೈನಲ್ ಪಂದ್ಯ ನಡೆಯಲಿವೆ.
‘ಅಭೂತಪೂರ್ವ ಬೆಳವಣಿಗೆಯಿಂದಾಗಿ ನಮಗೆ ವೇಳಾಪಟ್ಟಿ ಮತ್ತು ತಾಣದಲ್ಲಿ ಹೊಂದಾಣಿಕೆ ಮಾಡಬೇಕಾಯಿತು’ ಶಾ ತಿಳಿಸಿದರು.
ವಿಶ್ವಕಪ್‌ನ ಇತರ ತಾಣಗಳು– ಗುವಾಹಟಿ, ಇಂದೋರ್, ವಿಶಾಖಪಟ್ಟಣ ಮತ್ತು ಕೊಲಂಬೊ.
ಮಹಿಳೆಯರ ವಿಶ್ವಕಪ್ ಟೂರ್ನಿಯ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬೇರೆ ಊರಿಗೆ ಸ್ಥಳಾಂತರ ಆಗಿದ್ದು ಬೇಸರವಾಗಿದೆ. ಈ ಕ್ರೀಡಾಂಗಣಕ್ಕೆ ಐತಿಹಾಸಿಕ ಮಹತ್ವ ಇದೆ. ರಾಜ್ಯ ಸರ್ಕಾರ ಅನುಮತಿ ನೀಡಬೇಕಿತ್ತು. ಹಲವು ವರ್ಷಗಳಿಂದ ಇಲ್ಲಿ ಬಹಳಷ್ಟು ಐತಿಹಾಸಿಕ ಪಂದ್ಯಗಳು ನಡೆದಿವೆ. ಯಾವುದೇ ಅಹಿತಕರ ಘಟನೆಯಾಗಿರಲಿಲ್ಲ. ಇಲ್ಲಿ ಕ್ರಿಕೆಟ್ ಪಂದ್ಯಗಳು ನಡೆಯಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ವಿನಂತಿಸುತ್ತೇನೆ. ಈಚೆಗೆ ಕ್ರೀಡಾಂಗಣದ ಬಳಿ ಕಾಲ್ತುಳಿತ ಪ್ರಕರಣ ನಡೆದಿದ್ದು ದುರದೃಷ್ಟಕರ. ಇಂತಹ ಘಟನೆಗಳು ಎಲ್ಲಿ ಬೇಕಾದರೂ ಆಗಬಹುದು. ಹಾಗಂತ ಕ್ರೀಡಾಂಗಣವನ್ನೇ ಬಂದ್ ಮಾಡುವುದು ಎಷ್ಟು ಸರಿ? ಅಗತ್ಯ ಕ್ರಮಗಳನ್ನು ಕೈಗೊಂಡು ಚಟುವಟಿಕೆ ಆರಂಭಿಸಬೇಕು. ವಿಶ್ವಕಪ್ ಪಂದ್ಯಗಳು ಇಲ್ಲಿ ನಡೆದಿದ್ದರೆ, ಸ್ಥಳೀಯ ಮಹಿಳಾ ಕ್ರಿಕೆಟಿಗರಿಗೆ ಪ್ರೇರಣೆ ಮೂಡಿಸುತ್ತಿದ್ದವು. ಅಲ್ಲದೇ ಕೆಎಸ್‌ಸಿಎಗೆ ಆರ್ಥಿಕ ಲಾಭವೂ ಆಗುತ್ತಿತ್ತು.
-ವಿ. ಕಲ್ಪನಾ , ಭಾರತ ಮಹಿಳಾ ತಂಡದ ಮಾಜಿ ಆಟಗಾರ್ತಿ
ಮಹಿಳಾ ಕ್ರಿಕೆಟ್‌ಗೆ ಚಿನ್ನಸ್ವಾಮಿ ಕ್ರೀಡಾಂಗಣ ಅತ್ಯುತ್ತಮ ತಾಣ. ಈ ವರ್ಷ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳು ನಡೆದಾಗ ಬಹಳಷ್ಟು ಜನ ಸೇರಿದ್ದರು. ಆದರೆ ಇಲ್ಲಿಂದ ವಿಶ್ವಕಪ್ ಪಂದ್ಯಗಳನ್ನು ಸ್ಥಳಾಂತರಿಸಿದ್ದು ಬೇಸರದ ಸಂಗತಿ. ಕಾಲ್ತುಳಿತ ಘಟನೆಗೆ ಕಾರಣಗಳೇ ಬೇರೆ. ಪಂದ್ಯಗಳು ನಡೆದಾಗ ಇಲ್ಲಿ ಯಾವಾಗಲೂ ಕೆಟ್ಟ ಘಟನೆಗಳಾಗಿಲ್ಲ. ಸರ್ಕಾರವು ಪಂದ್ಯಗಳಿಗೆ ಅನುಮತಿ ಕೊಡಬಹುದಿತ್ತು. ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಬೆಳೆಯಲು ಈ ವಿಶ್ವಕಪ್ ಪಂದ್ಯಗಳು ಪ್ರೇರಣೆಯಾಗುತ್ತಿದ್ದವು.
ಜಾಹ್ನವಿ ದೇಸಾಯಿ, ಕರ್ನಾಟಕ ತಂಡದ ಮಾಜಿ ಆಟಗಾರ್ತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.