ADVERTISEMENT

Womens WC: ದಕ್ಷಿಣ ಆಫ್ರಿಕಾ 69 ರನ್‌ಗೆ ಆಲೌಟ್; ಇಂಗ್ಲೆಂಡ್‌ಗೆ 10 ವಿಕೆಟ್ ಜಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಅಕ್ಟೋಬರ್ 2025, 14:22 IST
Last Updated 3 ಅಕ್ಟೋಬರ್ 2025, 14:22 IST
<div class="paragraphs"><p>ದಕ್ಷಿಣ ಆಫ್ರಿಕಾ ಎದುರು&nbsp;ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಗ್ಲೆಂಡ್‌ ವನಿತೆಯರು</p></div>

ದಕ್ಷಿಣ ಆಫ್ರಿಕಾ ಎದುರು ವಿಕೆಟ್ ಪಡೆದ ಸಂಭ್ರಮದಲ್ಲಿ ಇಂಗ್ಲೆಂಡ್‌ ವನಿತೆಯರು

   

ಕೃಪೆ: ಪಿಟಿಐ

ಗುವಾಹಟಿ: ಮಹಿಳೆಯರ ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ದಕ್ಷಿಣ ಆಫ್ರಿಕಾ ಎದುರು 10 ವಿಕೆಟ್‌ ಅಂತರದ ಜಯ ಸಾಧಿಸಿದೆ.

ADVERTISEMENT

ಗುವಾಹಟಿಯ ಬರ್ಸಪರ ಕ್ರಿಕೆಟ್‌ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ವನಿತೆಯರ ಪಡೆ, ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಇಂಗ್ಲೆಂಡ್‌ನ ಕರಾರುವಾಕ್‌ ದಾಳಿ ಎದುರು ನಲುಗಿ 20.4 ಓವರ್‌ಗಳಲ್ಲಿ 69 ರನ್‌ ಗಳಿಸಿದ್ದಾಗಲೇ ಸರ್ವಪತನ ಕಂಡಿತು.

ವಿಕೆಟ್‌ ಕೀಪರ್‌ – ಬ್ಯಾಟರ್‌ ಸಿನಾಲೊ ಜಫ್ಟಾ 22 ರನ್‌ ಗಳಿಸಿದ್ದೇ ತಂಡದ ವೈಯಕ್ತಿಕ ಗರಿಷ್ಠ ಮೊತ್ತವೆನಿಸಿತು. ಉಳಿದಂತೆ ಯಾರೊಬ್ಬರೂ ಎರಡಂಕಿ ತಲುಪಲಿಲ್ಲ. ಆದರೆ, ಯಾರೂ ಸೊನ್ನೆ ಸುತ್ತಲಿಲ್ಲ ಎಂಬುದು ವಿಶೇಷ.

ಇಂಗ್ಲೆಂಡ್ ಪರ ಲಿನ್ಸೆ ಸ್ಮಿತ್‌ ಮೂರು ವಿಕೆಟ್‌ ಪಡೆದರೆ, ನತಾಲಿ ಸ್ಕೀವರ್‌ಬ್ರಂಟ್‌, ಸೋಫಿ ಎಕ್ಲೆ‌ಸ್ಟೋನ್‌ ಹಾಗೂ ಚಾರ್ಲಿ ಡೀನ್‌ ತಲಾ ಎರಡು ವಿಕೆಟ್‌ ಕಿತ್ತರು. ಇನ್ನೊಂದು ವಿಕೆಟ್‌ ಲೌರೆನ್‌ ಬೆಲ್‌ ಪಾಲಾಯಿತು.

14.1 ಓವರ್‌ಗಳಲ್ಲೇ ಜಯ; ದಾಖಲೆ
ಸುಲಭ ಗುರಿ ಬೆನ್ನತ್ತಿದ ಇಂಗ್ಲೆಂಡ್‌ 14.1 ಓವರ್‌ಗಳಲ್ಲೇ 73 ರನ್‌ ಗಳಿಸಿ ಇನ್ನೂ 215 ಎಸೆತಗಳು ಬಾಕಿ ಇರುವಂತೆಯೇ ಜಯದ ನಗೆ ಬೀರಿತು. ಇನಿಂಗ್ಸ್‌ ಆರಂಭಿಸಿದ ಟಾಮಿ ಬ್ಯೂಮೌಂಟ್‌ 35 ಎಸೆತಗಳಲ್ಲಿ 21 ರನ್ ಗಳಿಸಿದರೆ, ಆ್ಯಮಿ ಜೋನ್ಸ್‌ 50 ಎಸೆತಗಳಲ್ಲಿ 40 ರನ್‌ ಗಳಿಸಿ ಔಟಾಗದೆ ಉಳಿದರು.

ಎಸೆತಗಳ ಆಧಾರದಲ್ಲಿ ಇಂಗ್ಲೆಂಡ್‌ಗೆ ದೊರೆತ 4ನೇ ದೊಡ್ಡ ಅಂತರದ ಜಯ ಇದಾಗಿದೆ.

2013ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವೇ 243 ಎಸೆತಗಳ ಅಂತರದ ಗೆಲುವು ದಾಖಲಿಸಿದ್ದ ಆಂಗ್ಲರ ಪಡೆ, 2008ರಲ್ಲಿ ವಿಂಡಿಸ್‌ ವಿರುದ್ಧ 241 ಎಸೆತ ಹಾಗೂ 1982ರಲ್ಲಿ ಭಾರತದ ವಿರುದ್ಧ 231 ಎಸೆತಗಳು ಇರುವಂತೆಯೇ ಜಯ ಸಾಧಿಸಿತ್ತು.

ದಕ್ಷಿಣ ಆಫ್ರಿಕಾ ವಿರುದ್ಧದ ಕಳೆದ 8 ಏಕದಿನ ಪಂದ್ಯಗಳ ಪೈಕಿ 7ರಲ್ಲಿ ಗೆದ್ದಿರುವ ಇಂಗ್ಲೆಂಡ್‌, ವಿಶ್ವಕಪ್‌ ಟೂರ್ನಿಗಳಲ್ಲಿ ಮುಖಾಮುಖಿಯಾದಾಗ 7 – 2 ಅಂತರದ ಮೇಲುಗೈ ಸಾಧಿಸಿದೆ.

ಇಂಗ್ಲೆಂಡ್ ಪಡೆ, ಏಕದಿನ ಮಾದರಿಯಲ್ಲಿ 10 ವಿಕೆಟ್‌ ಅಂತರದ ಜಯ ಗಳಿಸಿದ್ದು ಮೂರನೇ ಸಲ. ಈ ಹಿಂದೆ, 1982ರಲ್ಲಿ ಭಾರತದ ವಿರುದ್ಧ ಮತ್ತು 1988ರಲ್ಲಿ ಐರ್ಲೆಂಡ್‌ ಎದುರು ಇಂತಹ ಸಾಧನೆ ಮಾಡಿತ್ತು.

ಆಫ್ರಿಕಾಗೆ ಎರಡನೇ '10 ವಿಕೆಟ್' ಸೋಲು
ದಕ್ಷಿಣ ಆಫ್ರಿಕಾ ತಂಡಕ್ಕೆ ಏಕದಿನ ವಿಶ್ವಕಪ್‌ನಲ್ಲಿ 10 ವಿಕೆಟ್‌ ಅಂತರದ ಸೋಲು ಎದುರಾಗಿರುವುದು ಇದು ಎರಡನೇ ಸಲ. 1997ರಲ್ಲಿ 164 ರನ್ ಗುರಿಯನ್ನು ಆಸ್ಟ್ರೇಲಿಯಾ ವಿಕೆಟ್‌ ನಷ್ಟವಿಲ್ಲದೆ ಮುಟ್ಟಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಮಹಿಳೆಯರ ಕನಿಷ್ಠ ಮೊತ್ತ

  • ನ್ಯೂಜಿಲೆಂಡ್‌ ಎದುರು 51ಕ್ಕೆ ಆಲೌಟ್‌ 2009ರ ವಿಶ್ವಕಪ್‌

  • ಪಾಕಿಸ್ತಾನ ವಿರುದ್ಧ 63ಕ್ಕೆ ಆಲೌಟ್‌: 2019

  • ಇಂಗ್ಲೆಂಡ್‌ ವಿರುದ್ಧ 69ಕ್ಕೆ ಆಲೌಟ್‌: 2025ರ ವಿಶ್ವಕಪ್‌

  • ಬಾಂಗ್ಲಾದೇಶ ವಿರುದ್ಧ 75ಕ್ಕೆ ಆಲೌಟ್‌: 2012

  • ಇಂಗ್ಲೆಂಡ್‌ ವಿರುದ್ಧ 77ಕ್ಕೆ ಆಲೌಟ್‌: 2013 ವಿಶ್ವಕಪ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.