ADVERTISEMENT

ICC Womens WC 2025: ಬಾಂಗ್ಲಾ ಮಣಿಸಿ ಅಗ್ರಸ್ಥಾನಕ್ಕೇರಿದ ಇಂಗ್ಲೆಂಡ್

ಪಿಟಿಐ
Published 7 ಅಕ್ಟೋಬರ್ 2025, 16:24 IST
Last Updated 7 ಅಕ್ಟೋಬರ್ 2025, 16:24 IST
<div class="paragraphs"><p>ಹೀತರ್ ನೈಟ್</p></div>

ಹೀತರ್ ನೈಟ್

   

(ಚಿತ್ರ ಕೃಪೆ: ಐಸಿಸಿ)

ಗುವಾಹಟಿ: ಅನುಭವಿ ಆಟಗಾರ್ತಿ ಹೀದರ್ ನೈಟ್‌ (ಔಟಾಗದೇ 79) ಅವರ ಅಮೂಲ್ಯ ಅರ್ಧ ಶತಕದ ನೆರವಿನಿಂದ ಇಂಗ್ಲೆಂಡ್ ತಂಡವು ಮಹಿಳಾ ಏಕದಿನ ವಿಶ್ವಕಪ್ ಕ್ರಿಕೆಟ್‌ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು.

ADVERTISEMENT

ಬರಸಾಪಾರಾ ಕ್ರೀಡಾಂಗಣದಲ್ಲಿ 178 ರನ್‌ಗಳಿಗೆ ಉರುಳಿದರೂ, ಬಾಂಗ್ಲಾದೇಶದ ಬೌಲಿಂಗ್ ಪಡೆ ಇಂಗ್ಲೆಂಡ್‌ಗೆ ಗೆಲ್ಲುವ ಮೊದಲು ಬಿಸಿಮುಟ್ಟಿಸಿತು.

ಲೆಗ್‌ ಸ್ಪಿನ್ನರ್ ಫಾಹಿಮಾ ಖಾತುನ್ (10–2–16–3) ಮತ್ತು ವೇಗಿ ಮರುಫಾ ಅಖ್ತರ್ (5–0–28–2) ಅವರ ಬೌಲಿಂಗ್‌ ಎದುರು ಇಂಗ್ಲೆಂಡ್ ಒಂದು ಹಂತದಲ್ಲಿ 23 ಓವರುಗಳಲ್ಲಿ 5 ವಿಕೆಟ್‌ಗೆ 78 ಮತ್ತು 30 ಓವರುಗಳ ಬಳಿಕ 6 ವಿಕೆಟ್‌ಗೆ 103 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಮಾಜಿ ನಾಯಕಿ ಹೀದರ್ ನೈಟ್‌ ಸವಾಲನ್ನು ಸ್ವೀಕರಿಸಿ ಒಂದೆಡೆ ಬೇರೂರಿದರು. ಅವರಿಗೆ ಉಪ ನಾಯಕಿ ಚಾರ್ಲಿ ಡೀನ್ ಬೆಂಬಲ ನೀಡಿದರು. ಆಕರ್ಷಕ ಹೊಡೆತಗಳ ಮೂಲಕ ಒತ್ತಡ ನಿವಾರಿಸಿದರು.

ನೈಟ್‌ ಅವರ 111 ಎಸೆತಗಳ ಇನಿಂಗ್ಸ್‌ನಲ್ಲಿ ಒಂದು ಸಿಕ್ಸರ್, 8 ಬೌಂಡರಿ ಗಳಿದ್ದವು. ಮುರಿಯದ ಏಳನೇ ವಿಕೆಟ್‌ಗೆ ಚಾರ್ಲಿ ಡೀನ್ (ಔಟಾಗದೇ 27, 56ಎ) ಜೊತೆ 79 ರನ್ ಸೇರಿಸಿದ ಅವರು 23 ಎಸೆತಗಳಿರುವಂತೆ ತಂಡವನ್ನು ಗುರಿ ತಲುಪಿಸಿದರು. ಇಂಗ್ಲೆಂಡ್ 46.1ಓವರು ಗಳಲ್ಲಿ 6 ವಿಕೆಟ್‌ಗೆ 182 ರನ್ ಬಾರಿಸಿತು.

ಇದಕ್ಕೆ ಮೊದಲು ಎಡಗೈ ಸ್ಪಿನ್ನರ್ ಸೋಫಿ ಎಕ್ಲೆಸ್ಟೋನ್ (24ಕ್ಕೆ3) ಅವರ ಅಮೋಘ ಬೌಲಿಂಗ್‌ ನೆರವಿನಿಂದ ಇಂಗ್ಲೆಂಡ್‌ ಸ್ಪಿನ್ನರ್‌ಗಳು ವೃತ್ತಿಪರ ಆಟದ ಪ್ರದರ್ಶನ ನೀಡಿದರು.

ಒಂದೆಡೆ ವಿಕೆಟ್‌ಗಳು ಬೀಳುತ್ತಿದ್ದರೂ ಬಾಂಗ್ಲಾದೇಶ ತಂಡದ ಶೋಭನಾ ಮೊಸ್ತಾರಿ 108 ಎಸೆತಗಳಲ್ಲಿ 60 ರನ್ ಬಾರಿಸಿದರು. ಕೊನೆಯಲ್ಲಿ ರಬಿಯಾ ಖಾನ್ ಅವರು ಬಿರುಸಿನ ಆಟವಾಡಿ 27 ಎಸೆತಗಳಲ್ಲಿ 43 ರನ್ ಬಾರಿಸಿದ್ದರಿಂದ ತಂಡದ ಮೊತ್ತ 170 ರನ್‌ಗಳ ಗಡಿದಾಟಿತು.

ಎಕ್ಲೆಸ್ಟೋನ್‌ ಅವರಿಗೆ ಆಫ್‌ ಸ್ಪಿನ್ನರ್‌ ಗಳಾದ ಚಾರ್ಲಿ ಡೀನ್‌ (28ಕ್ಕೆ2) ಮತ್ತು ಅಲೈಸ್ ಕ್ಯಾಪ್ಸಿ (31ಕ್ಕೆ2) ಉತ್ತಮ ಬೆಂಬಲ ನೀಡಿದರು.

ಸ್ಕೋರುಗಳು:

ಬಾಂಗ್ಲಾದೇಶ: 49.4 ಓವರುಗಳಲ್ಲಿ 178 (ಶರ್ಮಿನ್ ಅಖ್ತರ್‌ 30, ಶೋಭನಾ ಮೊಸ್ತರಿ 60, ರಬಿಯಾ ಖಾನ್ ಔಟಾಗದೇ 43; ಲಿನ್ಸಿ ಸ್ಮಿತ್‌ 33ಕ್ಕೆ2, ಸೋಫಿ ಎಕ್ಲೆಸ್ಟೋನ್‌ 24ಕ್ಕೆ3, ಚಾರ್ಲಿ ಡೀನ್ 28ಕ್ಕೆ2, ಅಲೈಸ್‌ ಕ್ಯಾಪ್ಸಿ 31ಕ್ಕೆ2).

ಇಂಗ್ಲೆಂಡ್‌: 46.1 ಓವರುಗಳಲ್ಲಿ 6 ವಿಕೆಟ್‌ಗೆ 182 (ಹೀದರ್ ನೈಟ್‌ ಔಟಾಗದೇ 79, ನಾಟ್‌ ಶಿವರ್‌ ಬ್ರಂಟ್‌ 32, ಚಾರ್ಲಿ ಡೀನ್ ಔಟಾಗದೇ 27; ಮರೂಫಾ ಅಖ್ತರ್‌ 28ಕ್ಕೆ2, ಫಾಹಿಮಾ ಖಾತುನ್ 16ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.