ರಿಚಾ ಘೋಷ್, ಸ್ನೇಹಾ ರಾಣಾ
ಚಿತ್ರ ಕೃಪೆ: @BCCIWomen
ವಿಶಾಖಪಟ್ಟಣ: ವಿಕೆಟ್ ಕೀಪರ್, ಬ್ಯಾಟರ್ ರಿಚಾ ಘೋಷ್ ಅವರ ಸಮಯೋಚಿತ ಅರ್ಧಶತಕದ (94) ಬೆಂಬಲದೊಂದಿಗೆ ಭಾರತ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಇಂದು (ಗುರುವಾರ) ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ 252 ರನ್‌ಗಳ ಗುರಿ ಒಡ್ಡಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟ ಭಾರತದ ಆರಂಭ ಉತ್ತಮವಾಗಿತ್ತು. ಪ್ರತೀಕಾ ರಾವಲ್ (37) ಹಾಗೂ ಸ್ಮೃತಿ ಮಂದಾನ (23) ಮೊದಲ ವಿಕೆಟ್‌ಗೆ 55 ರನ್‌ಗಳ ಜೊತೆಯಾಟ ಕಟ್ಟಿದರು.
ಆದರೆ ಮೊದಲ ವಿಕೆಟ್ ಪತನದ ಬೆನ್ನಲ್ಲೇ ದಿಢೀರ್ ಪತನವನ್ನು ಕಂಡಿತು. ಒಂದು ಹಂತದಲ್ಲಿ 25.6 ಓವರ್‌ಗಳಲ್ಲಿ 102 ರನ್ನಿಗೆ ಆರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಹರ್ಲೀನ್ ಡಿಯೋಲ್ (13), ನಾಯಕಿ ಹರ್ಮನ್‌ಪ್ರೀತ್ ಕೌರ್ (9), ಜೆಮಿಮಾ ರಾಡ್ರಿಗಸ್ (0) ಹಾಗೂ ದೀಪ್ತಿ ಶರ್ಮಾ (4) ನಿರಾಸೆ ಮೂಡಿಸಿದರು.
ಈ ನಡುವೆ ಅಮನ್‌ಜೋತ್ ಕೌರ್ (13) ಅವರೊಂದಿಗೆ ಸೇರಿದ ರಿಚಾ ಏಳನೇ ವಿಕೆಟ್‌ಗೆ 51 ರನ್‌ಗಳ ಅಮೂಲ್ಯ ಜೊತೆಯಾಟ ಕಟ್ಟಿದರು.
ಬಳಿಕ ಎಂಟನೇ ವಿಕೆಟ್‌ಗೆ ಸ್ನೇಹ ರಾಣಾ ಅವರೊಂದಿಗೆ 88 ರನ್‌ಗಳ ಜೊತೆಯಾಟ ಕಟ್ಟುವ ಮೂಲಕ ತಂಡವನ್ನು ಗೌರವಯುತ ಮೊತ್ತದತ್ತ ಮುನ್ನಡೆಸಿದರು.
ದಕ್ಷಿಣ ಆಫ್ರಿಕಾ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ರಿಚಾ 77 ಎಸೆತಗಳಲ್ಲಿ 94 ರನ್ ಗಳಿಸಿದರು. ಆ ಮೂಲಕ 6 ರನ್ ಅಂತರದಿಂದ ಶತಕದಿಂದ ವಂಚಿತರಾದರು. ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರಿಚಾ 4 ಸಿಕ್ಸರ್ ಹಾಗೂ 11 ಬೌಂಡರಿಗಳನ್ನು ಗಳಿಸಿದರು.
ಸ್ನೇಹಾ ರಾಣಾ 33 ರನ್‌ಗಳ ಉಪಯುಕ್ತ ಇನಿಂಗ್ಸ್ ಕಟ್ಟಿದರು. ಅಂತಿಮವಾಗಿ ಭಾರತ 49.5 ಓವರ್‌ಗಳಲ್ಲಿ 251 ರನ್‌ಗಳಿಗೆ ಆಲೌಟ್ ಆಯಿತು.
ಮಳೆ ಅಡಚಣೆ, ಟಾಸ್ ಗೆದ್ದ ದ.ಆಫ್ರಿಕಾ ಫೀಲ್ಡಿಂಗ್...
ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನ 10ನೇ ಪಂದ್ಯ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ವಿಶಾಖಪಟ್ಟಣ ಅಂತರರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮಹಿಳಾ ತಂಡ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ.
ಭಾರತ ಮಹಿಳಾ ತಂಡ ಟೂರ್ನಿಯಲ್ಲಿ ಆಡಿರುವ ಮೊದಲ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಆಡಿರುವ 2 ಪಂದ್ಯಗಳಲ್ಲಿ 1 ಗೆಲುವು ಹಾಗೂ ಒಂದು ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಮಳೆಯಿಂದಾಗಿ ಟಾಸ್ ವಿಳಂಬವಾಯಿತು.
ಉಭಯ ತಂಡಗಳ ಆಡುವ ಹನ್ನೊಂದರ ಬಳಗ
ಭಾರತ ಮಹಿಳಾ ಪ್ಲೇಯಿಂಗ್ XI: ಪ್ರತೀಕಾ ರಾವಲ್, ಸ್ಮೃತಿ ಮಂದಾನ, ಹರ್ಲೀನ್ ಡಿಯೋಲ್, ಹರ್ಮನ್‌ಪ್ರೀತ್ ಕೌರ್(ನಾಯಕಿ), ಜೆಮಿಮಾ ರಾಡ್ರಿಗಸ್, ರಿಚಾ ಘೋಷ್( ವಿಕೆಟ್ ಕೀಪರ್), ದೀಪ್ತಿ ಶರ್ಮಾ, ಅಮಂಜೋತ್ ಕೌರ್, ಸ್ನೇಹ ರಾಣಾ, ಕ್ರಾಂತಿ ಗೌಡ್, ಶ್ರೀ ಚರಣಿ
ದಕ್ಷಿಣ ಆಫ್ರಿಕಾ ಮಹಿಳಾ ಪ್ಲೇಯಿಂಗ್ XI: ಲಾರಾ ವೊಲ್ವಾರ್ಡ್ಟ್ (ನಾಯಕಿ), ತಜ್‌ಮಿನ್ ಬ್ರಿಟ್ಸ್, ಸುನೆ ಲೂಸ್, ಮರಿಜಾನ್ನೆ ಕಪ್, ಅನ್ನೆಕೆ ಬಾಷ್, ಸಿನಾಲೊ ಜಾಫ್ತಾ (ವಿಕೆಟ್ ಕೀಪರ್), ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಅಯಾಬೊಂಗಾ ಖಾಕಾ, ತುಮಿ ಸೆಖುಖುನೆ, ನಾನ್ಕುಲುಲೆಕೊ ಮ್ಲಾಬಾ
ಮಳೆಯ ಅಡಣೆಯಿಂದಾಗಿ 3 ಗಂಟೆಗೆ ನಡೆಯಬೇಕಿದ್ದ ಟಾಸ್ 3.40 ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.