ADVERTISEMENT

ಕಡಿಮೆ ಪಂದ್ಯಗಳಲ್ಲಿ ಭಾರತಕ್ಕೆ 50 ಜಯ ತಂದುಕೊಟ್ಟ ನಾಯಕ ವಿರಾಟ್‌ ಕೊಹ್ಲಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 9:37 IST
Last Updated 7 ಜೂನ್ 2019, 9:37 IST
   

ಬೆಂಗಳೂರು:ಈ ಬಾರಿಯ ವಿಶ್ವಕಪ್‌ ಪಂದ್ಯಾವಳಿಯಲ್ಲಿ ತಾನಾಡಿದ ಮೊದಲ ಪಂದ್ಯದಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿತ್ತು. ಈ ಗೆಲುವು ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಅತಿ ಕಡಿಮೆ ಪಂದ್ಯಗಳಲ್ಲಿ ಭಾರತಕ್ಕೆ 50 ಜಯ ಗಳಿಸಿಕೊಟ್ಟ ಶ್ರೇಯ ತಂದುಕೊಟ್ಟಿತು.

ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಕಡಿಮೆ ಪಂದ್ಯಗಳಲ್ಲಿ 50 ಗೆಲುವು ಕಂಡ ನಾಯಕ ಎಂಬ ದಾಖಲೆ ವೆಸ್ಟ್‌ ಇಂಡೀಸ್‌ನ ಮಾಜಿ ನಾಯಕ ಕ್ಲೈವ್‌ ಲಾಯ್ಡ್‌ ಹೆಸರಿನಲ್ಲಿದೆ. ಅವರು ಕೇವಲ 63 ಪಂದ್ಯಗಳಲ್ಲಿ 50 ಗೆಲುವು ಕಂಡಿದ್ದರು. ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರೂ ಇಷ್ಟೇ ಪಂದ್ಯಗಳಲ್ಲಿ ಸಾಧನೆ ಮಾಡಿದ್ದು, ಲಾಯ್ಡ್‌ ಜೊತೆಗೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.ದಕ್ಷಿಣ ಆಫ್ರಿಕಾ ತಂಡದ ನಾಯಕರಾಗಿದ್ದದಿವಂಗತ ಹ್ಯಾನ್ಸಿ ಕ್ರೋನಿಯೆ 68 ಪಂದ್ಯಗಳಲ್ಲಿ 50 ಜಯ ಸಾಧಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

2017ರಲ್ಲಿ ಮಹೇಂದ್ರ ಸಿಂಗ್‌ ದೋನಿ ಅವರು ನಾಯಕತ್ವ ತ್ಯಜಿಸಿದ ಬಳಿಕ ಜವಾಬ್ದಾರಿ ಹೊತ್ತುಕೊಂಡ ವಿರಾಟ್‌, ಇದುವರೆಗೆ 69 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.

ADVERTISEMENT

ಸೌತಾಂಪ್ಟನ್‌ನ ದ ರೋಸ್ ಬಾಲ್‌ಕ್ರೀಡಾಂಗಣದಲ್ಲಿ ಜೂನ್‌ 5ರಂದು ನಡೆದ ಪಂದ್ಯ ಆಫ್ರಿಕಾ ವಿರುದ್ಧ ಪಂದ್ಯ ನಡೆದಿತ್ತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಫಾಫ್‌ ಡುಪ್ಲೆಸಿ ಪಡೆ 227ರನ್‌ ಗಳಿಸಿತ್ತು. ಮೊತ್ತ ಬೆನ್ನಟ್ಟಿದ್ದ ಕೊಹ್ಲಿ ಪಡೆ, ರೋಹಿತ್‌ ಶರ್ಮಾ(122) ಶತಕದ ನೆರವಿನಿಂದ 47.3ನೇ ಓವರ್‌ನಲ್ಲಿ ಗೆಲುವಿನ ನಗೆ ಬೀರಿತ್ತು.

ಈ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್‌ ತಂಡದ ಮಾಜಿ ನಾಯಕ ವಿವಿಯನ್‌ ರಿಚರ್ಡ್ಸನ್‌ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದರು. ಅವರು 70 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.

ಭಾರತವು ವಿಶ್ವಕಪ್‌ ಪಂದ್ಯಾವಳಿಯಲ್ಲಿ ತನ್ನ ಎರಡನೇ ಪಂದ್ಯವನ್ನು ಆಸ್ಟ್ರೇಲಿಯಾ ಎದುರು ಜೂನ್‌ 9ರಂದು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.