ADVERTISEMENT

‘ಹುಲಿ’ಗಳ ಅಬ್ಬರ; ವಿಂಡೀಸ್‌ ತತ್ತರ: ವೆಸ್ಟ್‌ಇಂಡೀಸ್ ವಿರುದ್ಧ ಬಾಂಗ್ಲಾ ಗೆಲುವು

ಎರಡನೇ ಶತಕ ಸಿಡಿಸಿದ ಶಕೀಬ್‌ ಅಲ್‌ ಹಸನ್; ಲಿಟನ್‌ ದಾಸ್‌ ಮಿಂಚಿನ 94 ರನ್: ಶಾಯ್‌ ಹೋಪ್ ಆಟ ವ್ಯರ್ಥ

ಏಜೆನ್ಸೀಸ್
Published 18 ಜೂನ್ 2019, 0:32 IST
Last Updated 18 ಜೂನ್ 2019, 0:32 IST
ಶಕೀಬ್‌ ಅಲ್‌ ಹಸನ್‌ ಅವರ ಆಟದ ವೈಖರಿ –ರಾಯಿರ್ಟಸ್‌ ಚಿತ್ರ
ಶಕೀಬ್‌ ಅಲ್‌ ಹಸನ್‌ ಅವರ ಆಟದ ವೈಖರಿ –ರಾಯಿರ್ಟಸ್‌ ಚಿತ್ರ   

ಟಾಂಟನ್: ವೆಸ್ಟ್ ಇಂಡೀಸ್‌ನ ದೊಡ್ಡ ಮೊತ್ತವನ್ನು ಸವಾಲೇ ಅಲ್ಲ ಎನ್ನುವಂತೆ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೋಮವಾರ ನಡೆದ ವಿಶ್ವಕಪ್‌ ಪಂದ್ಯದಲ್ಲಿ ಏಳು ವಿಕೆಟ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿತು. ಶಕೀಬ್‌ ಅಲ್‌ ಹಸನ್‌ (ಔಟಾಗದೇ 124) ಮತ್ತೊಮ್ಮೆ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿ ವಿಶ್ವಕಪ್‌ನಲ್ಲಿ ಎರಡನೇ ಶತಕ ಹೊಡೆದರು.

ವೆಸ್ಟ್ ಇಂಡೀಸ್‌ ನಿಗದಿಪಡಿಸಿದ್ದ 322 ರನ್‌ಗಳ ಗುರಿಯನ್ನು ಬಾಂಗ್ಲಾದೇಶ ಇನ್ನೂ 8.3 ಓವರುಗಳಿ ರುವಂತೆಯೇ ಮೂರು ವಿಕೆಟ್‌ ನಷ್ಟದಲ್ಲಿ ದಾಟಿತು. ಶಕೀಬ್‌ ಅಲ್‌ ಹಸನ್‌ ಜೊತೆ ಆಕ್ರಮಣಕಾರಿ ಆಟವಾಡಿದ ಲಿಟನ್ ದಾಸ್‌ (69 ಎಸೆತ, 4 ಸಿಕ್ಸರ್‌, 8 ಬೌಂಡರಿಗಳಿದ್ದ ಅಜೇಯ 94) ಮುರಿಯದ ನಾಲ್ಕನೇ ವಿಕೆಟ್‌ಗೆ 189 ರನ್‌ (22.3 ಓವರ್‌ಗಳಲ್ಲಿ) ಸೇರಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು. ವಿಶ್ವಕಪ್‌ ಇತಿಹಾಸದಲ್ಲಿ ಇದು ಎರಡನೇ ಅತ್ಯಧಿಕ ರನ್ ಚೇಸ್‌ ಎನಿಸಿತು.

ತಮೀಮ್‌ ಇಕ್ಬಾಲ್‌ ಮತ್ತು ಸೌಮ್ಯ ಸರ್ಕಾರ್‌ ಮೊದಲ ವಿಕೆಟ್‌ಗೆ 52 ರನ್‌ ಸೇರಿಸಿದ ಮೇಲೆ ಶಕೀಬ್‌ ಆಟವನ್ನು ನಿಯಂತ್ರಿಸಿದರು. ತಮೀಮ್‌ (48) ಜೊತೆ ಅವರು ಎರಡನೇ ವಿಕೆಟ್‌ಗೆ 69 ರನ್‌ ಕಲೆಹಾಕಿದರು. ವಿಕೆಟ್‌ ಕೀಪರ್‌ ಮುಷ್ಫಿಕರ್‌ ರಹೀಮ್‌ ಮಾತ್ರ ವಿಫಲರಾದರು. ಸಾಮಾನ್ಯವಾಗಿ ಇನಿಂಗ್ಸ್‌ ಆರಂಭಿಸುವ ಲಿಟನ್‌ ದಾಸ್‌ ಐದನೇ ಕ್ರಮಾಂಕದಲ್ಲಿ ಆಡಿ ಶಕೀಬ್‌ಗೆ ನಿರೀಕ್ಷೆಗೂ ಮೀರಿದ ಬೆಂಬಲ ನೀಡಿದರು.

ADVERTISEMENT

ಈ ಮೊದಲು ಎರಡು ಅರ್ಧ ಶತಕ ಮತ್ತು ಇಂಗ್ಲೆಂಡ್‌ ವಿರುದ್ಧ ಶತಕ (121) ಬಾರಿಸಿದ್ದ ಶಕೀಬ್‌ ಈ ಬಾರಿ 99 ಎಸೆತಗಳ ಆಟದಲ್ಲಿ 16 ಬೌಂಡರಿಗಳನ್ನು ಬಾರಿಸಿದರು. ಆ ಹಾದಿಯಲ್ಲಿ ಒಂದು ದಿನದ ಪಂದ್ಯಗಳಲ್ಲಿ ಆರು ಸಾವಿರ ರನ್‌ (202 ಪಂದ್ಯಗಳಲ್ಲಿ) ಪೂರೈಸಿದರು. ಶಕೀಬ್‌ಗೆ ಇದು ಒಂಬತ್ತನೇ ಶತಕ.

ಸೋಮವಾರದ ಸೋಲಿನೊಂದಿಗೆ ಜೇಸನ್‌ ಹೋಲ್ಡರ್‌ ಪಡೆಯ ಅಸ್ಥಿರ ಪ್ರದ ರ್ಶನ ಮುಂದುವರಿಯಿತು. ಬೌಲಿಂಗ್‌, ಕ್ಷೇತ್ರರಕ್ಷಣೆಯಲ್ಲಿ ಶಿಸ್ತು ಇರಲಿಲ್ಲ. 26 ಇತರೆ ರನ್‌ಗಳಲ್ಲಿ 25 ವೈಡ್‌ಗಳೇ ಇದ್ದವು!

ಈ ಹೀನಾಯ ಸೋಲಿನೊಂದಿಗೆ ಎರಡು ಬಾರಿಯ ಚಾಂಪಿಯನ್ನರ ಸೆಮಿಫೈನಲ್‌ ಸಾಧ್ಯತೆ ದೂರವಾಗಿದೆ. ಇನ್ನೊಂದೆಡೆ ಬಾಂಗ್ಲಾದೇಶ 5 ಪಂದ್ಯ ಗಳಿಂದ 5 ಪಾಯಿಂಟ್ಸ್‌ ಸಂಗ್ರಹಿಸಿದ್ದು, ಸೆಮಿಫೈನಲ್ ಅವಕಾಶ ಜೀವಂತವಾಗಿರಿಸಿದೆ.

ಟಾಸ್‌ ಸೋತಿದ್ದ ವೆಸ್ಟ್‌ ಇಂಡೀಸ್‌ 50 ಓವರುಗಳಲ್ಲಿ 8 ವಿಕೆಟ್‌ಗೆ 321 ರನ್‌ಗಳನ್ನು ಗಳಿಸಿತು.

ಶಾಯ್‌ ಹೋಪ್‌ ಕೇವಲ ನಾಲ್ಕು ರನ್‌ಗಳಿಂದ ಶತಕ ತಪ್ಪಿಸಿಕೊಂಡರೆ, ಆಲ್‌ರೌಂಡರ್‌ ಶಿಮ್ರಾನ್‌ ಹೆಟ್ಮೆಯರ್‌ ಟೂರ್ನಿಯ ಜಂಟಿ ಅತಿ ವೇಗದ ಅರ್ಧ ಶತಕ ಗಳಿಸಿದ್ದರು.

ವೆಸ್ಟ್ ಇಂಡೀಸ್‌ ತಂಡ ಎಚ್ಚರಿಕೆಯ ಆರಂಭದ ನಂತರ ಕೊನೆಯ 25 ಓವರುಗಳಲ್ಲಿ ಬಿರುಸಿನ ಆಟವಾಡಿತು.ನಾಲ್ಕನೇ ಓವರ್‌ನಲ್ಲಿ ಕ್ರಿಸ್‌ ಗೇಲ್‌ (0) ನಿರ್ಗಮಿಸಿದ ನಂತರ ಎವಿನ್‌ ಲೂಯಿಸ್‌ (67 ಎಸೆತಗಳಲ್ಲಿ 70)ಮತ್ತು ವಿಕೆಟ್‌ ಕೀಪರ್‌ ಹೋಪ್‌ ತಂಡಕ್ಕೆ ಚೇತರಿಕೆ ನೀಡಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ116 ರನ್‌ಗಳು ಬಂದವು. ಇದು ಈ ವಿಶ್ವಕಪ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಮೊದಲ ಶತಕದ ಜೊತೆಯಾಟವೆನಿಸಿತು.

ಹೋಪ್‌ (96, 121 ಎಸೆತ, 1 ಸಿಕ್ಸರ್‌, 4 ಬೌಂಡರಿ) ಮೊದಲು ಸಂಯಮ ವಹಿಸಿದರೂ, ನಂತರ ಚುರುಕಾಗಿ ರನ್‌ ಗಳಿಸತೊಡಗಿದರು.

ಹೆಟ್ಮೆಯರ್‌ ಆಕ್ರಮಣಕಾರಿ ಆಟವಾಡಿ ಕೇವಲ 26 ಎಸೆತಗಳಲ್ಲಿ ಮೂರು ಸಿಕ್ಸರ್‌, ನಾಲ್ಕು ಬೌಂಡರಿಗಳಿದ್ದ ಬರೋಬ್ಬರಿ 50 ರನ್‌ ಚಚ್ಚಿದರು.‌ ಏಕದಿನ ಪಂದ್ಯಗಳಲ್ಲಿ ಅವರು ಒಂದು ಸಾವಿರ ರನ್ ಪೂರೈಸಿದರು. ಇದು ಅವರಿಗೆ 27ನೇ ಪಂದ್ಯವಾಗಿತ್ತು.

ಹೋಲ್ಡರ್‌ ಕೂಡ ಬಿರುಸಿನ ಆಟವಾಡಿ 15 ಎಸೆತಗಳಲ್ಲಿ 33 ರನ್‌ ಬಾರಿಸಿ ವೆಸ್ಟ್ ಇಂಡೀಸ್‌ 300 ರನ್‌ಗಳ ಗಡಿ ದಾಟಲು ನೆರವಾದರು. ಬಾಂಗ್ಲಾದೇಶ ವಿಶ್ವಕಪ್‌ನ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಗೆದ್ದು ಅನಿರೀಕ್ಷಿತ ಫಲಿತಾಂಶ ನೀಡಿತ್ತು.

ಲಿಟನ್ ದಾಸ್‌

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.