
ಅಹಮದಾಬಾದ್: ಅಫ್ಗಾನಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಲೀಗ್ ಪಂದ್ಯವು ಎರಡು ಸೂಪರ್ ಓವರ್‌ಗಳಿಗೆ ಸಾಕ್ಷಿಯಾಯಿತು.
ಎರಡನೇ ಸೂಪರ್ ಓವರ್‌ನ ಕೊನೆಯ ಎಸೆತದವರೆಗೂ ಸಾಗಿದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವು ಸಾಧಿಸಿತು.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು ಕ್ವಿಂಟನ್ ಡಿ ಕಾಕ್ (59 ರನ್; 41 ಎಸೆತ) ಹಾಗೂ ರಯಾನ್ ರಿಕೆಲ್ಟನ್ (61 ರನ್; 28 ಎಸೆತ) ಅವರ ಅರ್ಧಶತಕದ ನೆರವಿನಿಂದ 20 ಓವರ್‌ಗಳ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.
188 ರನ್‌ಗಳ ಗುರಿ ಬೆನ್ನತ್ತಿದ ಅಫ್ಗಾನಿಸ್ತಾನ ತಂಡದ ಇಬ್ರಾಹಿಂ ಜದ್ರಾನ್ ಹಾಗೂ ಗುಲ್ಬಾದಿನ್ ನೈಬ್ ಅವರ ವಿಕೆಟ್ ಪಡೆಯುವ ಮೂಲಕ ಲುಂಗಿ ಎನ್‌ಗಿಡಿ ಆಘಾತ ನೀಡಿದರು.
ಆರಂಭಿಕ ರಹಮಾನುಲ್ಲಾ ಗುರ್ಬಾಜ್ 42 ಎಸೆತಗಳಲ್ಲಿ 84 ರನ್ ಗಳಿಸುವ ಮೂಲಕ ಆಸರೆಯಾದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ರನ್ ಗಳಿಸುವಲ್ಲಿ ವಿಫಲರಾದರು. ಆದರೆ, ಡೆತ್ ಓವರ್‌ನಲ್ಲಿ ನಾಯಕ ರಶೀದ್ ಖಾನ್ (20 ರನ್; 12 ಎಸೆತ) ಹಾಗೂ ನೂರ್ ಅಹಮ್ಮದ್ (15 ರನ್: 9 ಎಸೆತ) ಸ್ಪೋಟಕ ಆಟವಾಡುವ ಮೂಲಕ ತಂಡವನ್ನು ಗೆಲುವಿನಂಚಿಕೆ ತಂದರು. 3 ಎಸೆತಗಳಲ್ಲಿ 1 ರನ್ ಅಗತ್ಯವಿದ್ದಾಗ ಫಜಲ್ಹಕ್ ಫಾರೂಕಿ ರನ್ ಔಟ್ ಆಗುವ ಮೂಲಕ ಈ ವಿಶ್ವಕಪ್‌ನಲ್ಲಿ ಮೊದಲ ಬಾರಿಗೆ ಪಂದ್ಯ ಟೈ ಆಯಿತು.
ಮೊದಲ ಸೂಪರ್ ಓವರ್‌ನಲ್ಲಿ ಅಫ್ಗಾನಿಸ್ತಾನ ತಂಡ 17 ರನ್ ಗಳಿಸಿತು. ಹರಿಣಗಳು ಕೂಡ ಅಷ್ಟೇ ರನ್ ಗಳಿಸಿದರು.
ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಪರ ಮಿಲ್ಲರ್, ಕೇವಲ 4 ಎಸೆತಗಳಲ್ಲಿ 2 ಸಿಕ್ಸರ್ ಸಹಿತ 16 ರನ್ ಗಳಿಸಿದರು. ಒಟ್ಟು 23 ರನ್ ಬಾರಿಸಿದರು.
24 ರನ್ ಗುರಿ ಬೆನ್ನಟ್ಟಿದ ಅಫ್ಗಾನಿಸ್ತಾನ, ಎರಡನೇ ಎಸೆತದಲ್ಲೇ ನಬಿ ವಿಕೆಟ್ ಕಳೆದುಕೊಂಡಿತು. ಮಹಾರಾಜ ಬೌಲಿಂಗ್‌ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಗುರ್ಬಾಜ್ ಅವರು ಪಂದ್ಯವನ್ನು ರೋಚಕ ಹಂತಕ್ಕೆ ತಲುಪಿಸಿದರು. ಆದರೆ, ಕೊನೆಯ ಎಸೆತದಲ್ಲಿ ಗುರ್ಬಾಜ್, ಮಿಲ್ಲರ್‌ಗೆ ಕ್ಯಾಚ್ ನೀಡುವ ಮೂಲಕ, ಆಫ್ಘನ್ ತಂಡವು 4 ರನ್‌ಗಳ ಸೋಲನುಭವಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.