ಮುಂಬೈ ಇಂಡಿಯನ್ಸ್ ತಂಡದ ಆಟಗಾರ್ತಿಯರ ಸಂಭ್ರಮ
–ಪಿಟಿಐ ಚಿತ್ರ
ಮುಂಬೈ: ಹೇಯ್ಲಿ ಮ್ಯಾಥ್ಯೂಸ್ ಮತ್ತು ನ್ಯಾಟ್ ಶಿವರ್ ಬ್ರಂಟ್ ಅವರ ಆಲ್‌ರೌಂಡ್ ಆಟದ ಬಲದಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎಲಿಮಿನೇಟರ್‌ನಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು 47 ರನ್‌ಗಳಿಂದ ಮಣಿಸಿ ಎರಡನೇ ಬಾರಿ ಫೈನಲ್ ಪ್ರವೇಶಿಸಿತು.
ಶನಿವಾರ ನಡೆಯುವ ಫೈನಲ್‌ನಲ್ಲಿ 2023ರ ಆವೃತ್ತಿಯ ಚಾಂಪಿಯನ್ ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಡೆಲ್ಲಿ ತಂಡವು ಲೀಗ್ ಹಂತದಲ್ಲಿ ಅಗ್ರಸ್ಥಾನ ದೊಡನೆ ಸತತ ಮೂರನೇ ಬಾರಿ ಫೈನಲ್ ತಲುಪಿದೆ.
ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಆತಿಥೇಯ ಇಂಡಿಯನ್ಸ್ ತಂಡವು ಹೇಯ್ಲಿ (77;50ಎ, 4x10, 6x3) ಮತ್ತು ಬ್ರಂಟ್ (77;41ಎ, 4x10, 6x2) ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 ರನ್ ಗಳಿಸಿತು. ಈ ಬೃಹತ್ ಮೊತ್ತದ ಗುರಿಯನ್ನು ಬೆನ್ನಟ್ಟಿದ ಗುಜರಾತ್ ತಂಡವು 19.2 ಓವರ್‌ಗಳಲ್ಲಿ 166 ರನ್ ಗಳಿಸಿ ಹೋರಾಟ ಮುಗಿಸಿತು. ಮುಂಬೈಗೆ ಜೈಂಟ್ಸ್ ವಿರುದ್ಧ ಇದು ಸತತ ಏಳನೇ ಗೆಲುವಾಗಿದೆ.
ಗುಜರಾತ್‌ನ ಡೇನಿಯಲ್ ಗಿಬ್ಸನ್ (34), ಫೋಬೆ ಲಿಚ್‌ಫೀಲ್ಡ್ (31), ಭಾರತಿ ಫೂಲ್ಮಾಲಿ (30) ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ನಿರಾಸೆ ಮೂಡಿ ಸಿದರು. ಹೇಯ್ಲಿ ಮತ್ತು ಅಮೆಲಿಯಾ ಕೆರ್ ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಪಡೆದು ಎದುರಾಳಿ ತಂಡಕ್ಕೆ ಕಡಿವಾಣ ಹಾಕಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಯಷ್ಟಿಕಾ ಭಾಟಿಯಾ (15; 14ಎ) ಮತ್ತು ಹೇಯ್ಲಿ ಅವರು ಉತ್ತಮ ಆರಂಭ ನೀಡಿದರು. ಆದರೆ 5ನೇ ಓವರ್‌ನಲ್ಲಿ ಡೇನಿಯಲ್ ಗಿಬ್ಸನ್ ಬೌಲಿಂಗ್‌ನಲ್ಲಿ ಯಷ್ಟಿಕಾ ಔಟಾದರು.
ಈ ಸಂದರ್ಭದಲ್ಲಿ ಹೇಯ್ಲಿ ಜೊತೆಗೂಡಿದ ಬ್ರಂಟ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 133 ರನ್ ಸೇರಿಸಿದರು. ಇವರಿಬ್ಬರು 17ನೇ ಓವರ್‌ವರೆಗೂ ಬೌಲರ್‌ಗಳನ್ನು ಕಾಡಿದರು.
ಕಶ್ವಿ ಗೌತಮ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಮ್ಯಾಥ್ಯೂಸ್ ಅವರು ಬೆತ್ ಮೂನಿಗೆ ಕ್ಯಾಚಿತ್ತರು. ಆದರೆ ಗುಜರಾತ್ ಸಂಕಷ್ಟ ಮುಗಿಯಲಿಲ್ಲ. ಕ್ರೀಸ್‌ಗೆ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ (36; 12ಎ, 4x2, 6x4) ಮಿಂಚಿನ ಬ್ಯಾಟಿಂಗ್ ಮಾಡಿ ತಂಡದ ಮೊತ್ತವು ‘ದ್ವಿಶತಕ’ ದಾಟಲು ಕಾರಣರಾದರು. 300ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ಬ್ಯಾಟಿಂಗ್ ಮಾಡಿದರು.
ಸಂಕ್ಷಿಪ್ತ ಸ್ಕೋರು: ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 213 (ಹೇಯ್ಲಿ ಮ್ಯಾಥ್ಯೂಸ್ 77, ನ್ಯಾಟ್ ಶಿವರ್ ಬ್ರಂಟ್ 77, ಹರ್ಮನ್‌ಪ್ರೀತ್ ಕೌರ್ 36, ಡೇನಿಯಲ್ ಗಿಬ್ಸನ್ 40ಕ್ಕೆ2).
ಗುಜರಾತ್ ಜೈಂಟ್ಸ್: 19.2 ಓವರ್‌ಗಳಲ್ಲಿ 166 (ಡೇನಿಯಲ್ ಗಿಬ್ಸನ್ 34, ಫೋಬೆ ಲಿಚ್‌ಫೀಲ್ಡ್ 31, ಭಾರತಿ ಫೂಲ್ಮಾಲಿ 30; ಹೇಯ್ಲಿ ಮ್ಯಾಥ್ಯೂಸ್ 31ಕ್ಕೆ 3, ಅಮೆಲಿಯಾ ಕೆರ್ 28ಕ್ಕೆ 2, ನ್ಯಾಟ್ ಶಿವರ್ ಬ್ರಂಟ್ 31ಕ್ಕೆ 1). ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 47 ರನ್‌ಗಳ ಜಯ.
ಪಂದ್ಯದ ಆಟಗಾರ್ತಿ: ಹೇಯ್ಲಿ ಮ್ಯಾಥ್ಯೂಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.