ADVERTISEMENT

WPL 2026: ಯುಪಿ ಎದುರು ಗುಜರಾತ್ ಗೆಲುವಿನಲ್ಲಿ ಮಿಂಚಿದ RCB ಮಾಜಿ ಆಟಗಾರ್ತಿಯರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಜನವರಿ 2026, 13:31 IST
Last Updated 10 ಜನವರಿ 2026, 13:31 IST
<div class="paragraphs"><p>ಜಾರ್ಜಿಯಾ ವೇರ್ಹ್ಯಾಮ್ ಬ್ಯಾಟಿಂಗ್‌ ವೈಖರಿ</p></div>

ಜಾರ್ಜಿಯಾ ವೇರ್ಹ್ಯಾಮ್ ಬ್ಯಾಟಿಂಗ್‌ ವೈಖರಿ

   

ಚಿತ್ರ ಕೃಪೆ: ಪಿಟಿಐ

ನವಿ ಮುಂಬೈ (ಪಿಟಿಐ): ಆಸ್ಟ್ರೇಲಿಯಾದ ಬ್ಯಾಟರ್ ಫೋಬಿ ಲಿಚ್‌ಫೀಲ್ಡ್ ಅವರ ಅಧಿಕಾರಯುತ 78 ರನ್‌ಗಳ (40 ಎಸೆತ, 4x8, 6x5) ಆಟ ಫಲ ನೀಡಲಿಲ್ಲ. ಗುಜರಾತ್‌ ಜೈಂಟ್ಸ್ ತಂಡ ಶನಿವಾರ ನಡೆದ  ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್‌ನ ಹೈಸ್ಕೋರಿಂಗ್ ಪಂದ್ಯದಲ್ಲಿ 10 ರನ್‌ಗಳಿಂದ ಯುಪಿ ವಾರಿಯರ್ಸ್‌ ತಂಡವನ್ನು ಸೋಲಿಸಿತು.

ADVERTISEMENT

ಟಾಸ್ ಸೋತಿದ್ದ ಜೈಂಟ್ಸ್‌ ತಂಡವು ಮೊದಲು ಆಡಿ ಆಶ್ಲೆ ಗಾರ್ಡನರ್ ಅವರ ಅರ್ಧಶತಕ (65, 41ಎ, 4x6, 6x3) ಮತ್ತು ಕೊನೆಯಲ್ಲಿ ಜಾರ್ಜಿಯಾ ವೇರ್ಹ್ಯಮ್ ಅವರ ಮಿಂಚಿನ ಆಟದಿಂದ (ಅಜೇಯ 27, 10ಎಸೆತ) ನೆರವಿನಿಂದ 4 ವಿಕೆಟ್‌ಗೆ 207 ರನ್‌ಗಳ ಉತ್ತಮ ಮೊತ್ತ ಗಳಿಸಿತು.

ಲಿಚ್‌ಫೀಲ್ಡ್‌ ಪ್ರತ್ಯಾಕ್ರಮಣದ ಆಟವಾಡಿದರು. ಆದರೆ 16ನೇ ಓವರಿನಲ್ಲಿ ಅವರ ನಿರ್ಗಮನದ ನಂತರ ಜೈಂಟ್ಸ್ ಕೈಮೇಲಾಯಿತು. ಆಶಾ ಶೋಭನಾ 10 ಎಸೆತಗಳಲ್ಲಿ 27 ರನ್ ಸಿಡಿಸಿದರೂ ಗುರಿ ತಲುಪಲಾಗಲಿಲ್ಲ. ವಾರಿಯರ್ಸ್‌ 8 ವಿಕೆಟ್‌ಗೆ 197 ರನ್‌ ಗಳಿಸಿ ಹೋರಾಟ ಮುಗಿಸಿತು. ಲೆಗ್‌ ಸ್ಪಿನ್ನರ್ ಜಾರ್ಜಿಯಾ ವೇರ್ಹಮ್, ವೇಗಿಗಳಾದ ರೇಣುಕಾ ಸಿಂಗ್ ಮತ್ತು ಸೋಫಿ ಡಿವೈನ್ ತಲಾ ಎರಡು ವಿಕೆಟ್ ಪಡೆದರು.

ಆರಂಭ ಆಟಗಾರ್ತಿ ಕಿರಣ್ ನವಗಿರೆ ವಿಕೆಟ್ ಪಡೆಯುವ ಮೂಲಕ ರೇಣುಕಾ ಸಿಂಗ್ ಐದನೇ ಎಸೆತದಲ್ಲೇ ವಾರಿಯರ್ಸ್‌ಗೆ ಆಘಾತ ನೀಡಿದರು. ಆದರೆ ಮೆಗ್ ಲ್ಯಾನಿಂಗ್ (30) ಮತ್ತು ಫೋಬಿ ಲಿಚ್‌ಫೀಲ್ಡ್‌ ಎರಡನೇ ವಿಕೆಟ್‌ಗೆ 70 ರನ್ ಸೇರಿಸಿ ಚೇತರಿಕೆ ನೀಡಿದರು. ನಂತರ ವಾರಿಯರ್ಸ್ ಕುಸಿತ ಕಂಡಿತು. ಲ್ಯಾನಿಂಗ್ ಜೊತೆಗೆ ಹರ್ಲೀನ್ ಡಿಯೋಲ್ (0), ದೀಪ್ತಿ ಶರ್ಮಾ (1) ಅವರು ಬೇಗನೇ ಪೆವಿಲಿಯನ್‌ಗೆ ಮರಳಿದರು. 9ನೇ ಓವರಿನಲ್ಲಿ 1 ವಿಕೆಟ್‌ಗೆ 73 ರನ್ ಗಳಿಸಿದ್ದ ತಂಡ ಹತ್ತು ಓವರ್ ನಂತರ 74 ರನ್ನಿಗೆ 4 ವಿಕೆಟ್ ಕಳೆದುಕೊಂಡಿತು.

ಲಿಚ್‌ಫೀಲ್ಡ್‌ ಐದನೇ ವಿಕೆಟ್‌ಗೆ  ಶ್ವೇತಾ ಸೆಹ್ರಾವತ್ (25) ಜೊತೆ 69 ರನ್ ಸೇರಿಸಿದರೂ, ವಾರಿಯರ್ಸ್ ನಂತರ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು.

ಇದಕ್ಕೆ ಮೊದಲು, ಜೈಂಟ್ಸ್ ತಂಡವು ದೊಡ್ಡ ಮೊತ್ತ ಗಳಿಸಲು ನಾಯಕಿ ಗಾರ್ಡನರ್‌ ಆಟ ಕಾರಣವಾಯಿತು. ಅವರು ಅನುಷ್ಕಾ ಶರ್ಮಾ (44, 30ಎ) ಜತೆ ಮೂರನೇ ವಿಕೆಟ್‌ಗೆ 103 ರನ್ ಸೇರಿಸಿದರು. ಕೊನೆಯಲ್ಲಿ ಆಸ್ಟ್ರೇಲಿಯಾದ ಮತ್ತೊಬ್ಬ ಆಟಗಾರ್ತಿ ವೇರ್ಹ್ಯಮ್ ಮಿಂಚಿನ ಆಟದಿಂದ ತಂಡ 200ರ ಗಡಿ ದಾಟಿತು.

ವೇರ್ಹ್ಯಮ್, ರೇಣುಕಾ ಠಾಕೂರ್‌ ಹಾಗೂ ಸೋಫಿ ಡಿವೈನ್‌ – ಹಿಂದಿನ ಆವೃತ್ತಿಗಳಲ್ಲಿ ಆರ್‌ಸಿಬಿ ತಂಡದಲ್ಲಿ ಆಡಿದ್ದರು.

ಸಂಕ್ಷಿಪ್ತ ಸ್ಕೋರು

ಗುಜರಾತ್ ಜೈಂಟ್ಸ್‌: 20 ಓವರುಗಳಲ್ಲಿ 4 ವಿಕೆಟ್‌ಗೆ 207 (ಸೋಫಿ ಡಿವೈನ್ 38, ಅನುಷ್ಕಾ ಶರ್ಮಾ 44, ಆಶ್ಲೆ ಗಾರ್ಡನರ್‌ 65, ಜಾರ್ಜಿಯಾ ವೇರ್ಹ್ಯಮ್ ಔಟಾಗದೇ 27; ಸೋಫಿ ಎಕ್ಲೆಸ್ಟೋನ್‌ 32ಕ್ಕೆ2)

ಯುಪಿ ವಾರಿಯರ್ಸ್‌: 20 ಓವರುಗಳಲ್ಲಿ 8 ವಿಕೆಟ್‌ಗೆ 197 (ಮೆಗ್‌ ಲ್ಯಾನಿಂಗ್ 30, ಫೋಬಿ ಲಿಚ್‌ಫೀಲ್ಡ್‌ 78, ಆಶಾ ಶೋಭನಾ ಔಟಾಗದೇ 27; ರೇಣುಕಾ ಸಿಂಗ್ 27ಕ್ಕೆ2, ಜಾರ್ಜಿಯಾ ವೇರ್ಹ್ಯಮ್ 30ಕ್ಕೆ2).

ಪಂದ್ಯದ ಆಟಗಾರ್ತಿ: ಜಾರ್ಜಿಯಾ ವೇರ್ಹ್ಯಮ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.