
ನವದೆಹಲಿ: ಮಹಿಳಾ ಪ್ರೀಮಿಯರ್ ಲೀಗ್–2026(ಡಬ್ಲೂಪಿಎಲ್) ಬಿಡ್ ಪ್ರಕ್ರಿಯೆಯಲ್ಲಿ ಹಲವು ಆಟಗಾರ್ತಿಯರಿಗೆ ಜಾಕ್‌ಪಾಟ್ ಲಭಿಸಿದರೆ, ಕೆಲವು ಪ್ರಮುಖ ಆಟಗಾರ್ತಿಯರು ಖರೀದಿಯಾಗದೇ ಉಳಿದರು.
ಭಾರತ ಮಹಿಳಾ ಕ್ರಿಕೆಟ್ ತಂಡದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ₹3.20 ಕೋಟಿ ನೀಡಿ ಯುಪಿ ವಾರಿಯರ್ಸ್ ತಂಡ ಖರೀದಿಸಿದ್ದು, ಈ ಬಾರಿಯ ಅತಿ ದೊಡ್ಡ ಮೊತ್ತವಾಗಿದೆ. ನ್ಯೂಜಿಲೆಂಡ್ ಆಟಗಾರ್ತಿ ಅಮೇಲಿಯಾ ಕರ್(₹3 ಕೋಟಿ), ಶಿಖಾ ಪಾಂಡೆ (₹2.40 ಕೋಟಿ), ಎಡಗೈ ಸ್ಪಿನ್ನರ್ ಶ್ರೀಚರಣಿ (₹1.30 ಕೋಟಿ) ಹಾಗೂ ಲಾರಾ ವೋಲ್ವಾರ್ಟ್ (₹ 1 ಕೋಟಿ) ಅವರು ಹರಾಜಿನಲ್ಲಿ ಅತಿಹೆಚ್ಚು ಮೊತ್ತವನ್ನು ಬಾಚಿಕೊಂಡರು.
ಆದರೆ, ಈ ಬಾರಿಯ ಬಿಡ್ ಪ್ರಕ್ರಿಯೆಯಲ್ಲಿ ಕೆಲವು ಪ್ರಮುಖ ಆಟಗಾರ್ತಿಯರು ಹರಾಜಾಗದೇ ಉಳಿದರು.
ಹರಾಜಿನಲ್ಲಿ 50 ಲಕ್ಷ ಮೂಲಬೆಲೆ ಹೊಂದಿದ್ದ ಪ್ರಮುಖ ಆಟಗಾರ್ತಿಯರಾದ ಇಂಗ್ಲೆಂಡ್ ಬ್ಯಾಟರ್ ಹೀದರ್ ನೈಟ್, ವಿಕೆಟ್ ಕೀಪರ್ ಬ್ಯಾಟರ್ ಎಮಿ ಜೋನ್ಸ್, ಆಸ್ಟ್ರೇಲಿಯಾ ತಂಡದ ನಾಯಕಿ ಅಲೀಸಾ ಹೀಲಿ, ಆಲ್‌ರೌಂಡರ್ ಹೀದರ್ ಗ್ರಾಮ್, ಭಾರತದ ಉಮಾ ಚೆಟ್ರಿ ಅವರನ್ನು ಖರೀದಿಸಲು ಯಾವ ತಂಡವು ಕೂಡ ಮುಂದೆ ಬರಲಿಲ್ಲ.
ಹೀದರ್ ನೈಟ್ ಅವರು 2024ರಲ್ಲಿ ಕೊನೆಯ ಬಾರಿ ಆರ್‌ಸಿಬಿ ಪರ ಆಡಿದ್ದರೆ, ಅಲೀಸಾ ಹೀಲಿ ಅವರು ಸತತ ಮೂರು ವರ್ಷಗಳ ಕಾಲ ಯುಪಿ ವಾರಿಯರ್ಸ್ ತಂಡವನ್ನು ಮುನ್ನಡೆಸಿದ್ದರು.
ಆಸ್ಟ್ರೇಲಿಯಾದ ಅಲಾನಾ ಕಿಂಗ್(₹40 ಲಕ್ಷ ಮೂಲಬೆಲೆ), ನ್ಯೂಜಿಲೆಂಡ್ ವಿಕೆಟ್ ಕೀಪರ್ ಇಸಾಬೆಲ್ಲಾ ಗೇಜ್ (₹40 ಲಕ್ಷ ಮೂಲಬೆಲೆ), ದಕ್ಷಿಣ ಆಫ್ರಿಕಾ ಬ್ಯಾಟರ್ ತಜ್ಮಿನ್ ಬ್ರಿಟ್ಸ್ (₹30 ಲಕ್ಷ ಮೂಲಬೆಲೆ), ಕಳೆದ ಬಾರಿ ಆರ್‌ಸಿಬಿ ಪರ ಆಡಿದ್ದ ಮೇಘನಾ (₹30 ಲಕ್ಷ ಮೂಲಬೆಲೆ), ಬೌಲರ್ ಪ್ರಿಯಾ ಮಿಶ್ರಾ (₹30 ಲಕ್ಷ ಮೂಲಬೆಲೆ) ಹರಾಜಾಗದೇ ಉಳಿದ ಇನ್ನಿತರ ಪ್ರಮುಖ ಆಟಗಾರ್ತಿಯರಾಗಿದ್ದಾರೆ.
ಎಲ್ಲಾ ತಂಡಗಳು ಕೂಡ ಭಾರತದ ಆಟಗಾರ್ತಿಯರಿಗೆ ಹೆಚ್ಚಿನ ಒಲವು ತೋರಿದ್ದರಿಂದ, ಕೆಲವು ಪ್ರಮುಖ ವಿದೇಶಿ ಆಟಗಾರ್ತಿಯರು ಕೂಡ ಖರೀದಿಯಾಗದೇ ಉಳಿದರು.
ಬಿಡ್‌ನಲ್ಲಿ ಒಟ್ಟು 67 ಆಟಗಾರ್ತಿಯರನ್ನು 5 ತಂಡಗಳು ಸೇರ್ಪಡೆ ಮಾಡಿಕೊಂಡವು. ಜನವರಿ 9 ರಿಂದ ಫೆಬ್ರುವರಿ 5ರವರೆಗೆ ನವಿ ಮುಂಬೈ ಮತ್ತು ವಡೋದರಾದಲ್ಲಿ ಡಬ್ಲ್ಯೂಪಿಎಲ್ ಪಂದ್ಯಗಳು ಆಯೋಜನೆಗೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.