
ಮಹಿಳೆಯರ ಪ್ರೀಮಿಯರ್ ಲೀಗ್‌ನ 2024ರ ಆವೃತ್ತಿಯಲ್ಲಿ ಚಾಂಪಿಯನ್‌ಪಟ್ಟಕ್ಕೇರಿದ ಆರ್‌ಸಿಬಿ ತಂಡ
ಕೃಪೆ: ಪಿಟಿಐ
ಮಹಿಳೆಯರ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಬ್ರ್ಯಾಂಡ್ ಮೌಲ್ಯ 2025ರಲ್ಲಿ ತುಸು ಕುಸಿದಿದೆ. ಆದಾಗ್ಯೂ, ಲೀಗ್‌ನ ಜನಪ್ರಿಯತೆ ಮತ್ತು ಸಾಂಸ್ಕೃತಿಕ ಪರಿಣಾಮವು ಬೆಳೆಯುತ್ತಿದೆ ಎಂದು ವರದಿಯಾಗಿದೆ.
'ಡಿ ಅಂಡ್ ಪಿ ಅಡ್ವೈಸರಿ' ಕಂಪನಿಯು 'ಬಿಯಾಂಡ್ 22 ಯಾರ್ಡ್ಸ್' ಹೆಸರಿನಲ್ಲಿ ಬಿಡುಗಡೆ ಮಾಡಿರುವ 2025ರ ವರದಿ ಪ್ರಕಾರ, ಲೀಗ್‌ನ ಒಟ್ಟಾರೆ ಮೌಲ್ಯ ₹ 1,275 ಕೋಟಿಯಷ್ಟಿದ್ದು, ಶೇ 5.6 ರಷ್ಟು ಕುಸಿದಿದೆ. ಅದು, 2024ರಲ್ಲಿ ₹ 1,350 ಕೋಟಿಯಷ್ಟಿತ್ತು.
ಮೌಲ್ಯ ಕುಸಿದಿರುವುದರ ಹೊರತಾಗಿಯೂ, ಡಬ್ಲ್ಯುಪಿಎಲ್ ಪ್ರಭಾವ ಹೆಚ್ಚಾಗಿದೆ. ಸಮುದಾಯವನ್ನು ಸಾಧ್ಯವಾದಷ್ಟು ತಲುಪಲು, ಡಿಜಿಟಲ್ ವೇದಿಕೆಗಳಲ್ಲಿ ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳಲು ಹಾಗೂ ಮಹಿಳಾ ಸಬಲೀಕರಣಕ್ಕೆ ಸಂಬಂಧಿಸಿದ ಅಭಿಯಾನಗಳಿಗೆ ತಂಡಗಳು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿವೆ. ಈ ಪ್ರಯತ್ನಗಳು ಭಾರತದಲ್ಲಿ ಮಹಿಳಾ ಕ್ರಿಕೆಟರ್‌ಗಳಿಗೆ ಸ್ಥಿರ ಮತ್ತು ಸುಸ್ಥಿರ ವೃತ್ತಿ ಮಾರ್ಗವನ್ನು ಸೃಷ್ಟಿಸಲು ಸಹಕಾರಿಯಾಗಿವೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಕ್ರಿಕೆಟ್ ತಂಡವು ಇದೇ ತಿಂಗಳ ಆರಂಭದಲ್ಲಿ ಮಹಿಳೆಯರ ಏಕದಿನ ವಿಶ್ವಕಪ್ ಜಯಿಸುವ ಮೂಲಕ, ಐತಿಹಾಸಿಕ ಸಾಧನೆ ಮಾಡಿದೆ. ಅದರ ಪರಿಣಾಮವಾಗಿಯೂ, ಮಹಿಳಾ ಕ್ರಿಕೆಟ್‌ನ ಸ್ಥಿತಿ ಮತ್ತಷ್ಟು ಸುಧಾರಿಸುವ ನಿರೀಕ್ಷೆ ಇದೆ.
ವಿಶ್ವಕಪ್ ಗೆದ್ದ ತಂಡದಲ್ಲಿದ್ದ, ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂದಾನ, ದೀಪ್ತಿ ಶರ್ಮಾ, ರಿಚಾ ಘೋಷ್, ಶೆಫಾಲಿ ವರ್ಮಾ ಅವರೆಲ್ಲರೂ ಲೀಗ್‌ನಲ್ಲಿ ಮಿಂಚಿದವರೇ. ಹಾಗಾಗಿಯೇ, ಭಾರತದ ಮಾಜಿ ಆಟಗಾರ್ತಿ ಮಿಥಾಲಿ ರಾಜ್ ಅವರು, ಭಾರತದ ಗೆಲುವಿಗೆ ಡಬ್ಲ್ಯುಪಿಎಲ್ ಅನುಭವವೂ ನೆರವಾಗಿದೆ ಎಂದು ಹೇಳಿದ್ದರು.
2026ರ ಆವೃತ್ತಿಗೂ ಮುನ್ನ ನಡೆಯುವ ಮೆಗಾ ಹರಾಜು ಪ್ರಕ್ರಿಯೆಗೆ ನವದೆಹಲಿಯಲ್ಲಿ ವೇದಿಕೆ ಸಜ್ಜಾಗಿದೆ. ನಾಳೆ ಹರಾಜು ನಡೆಯಲಿದೆ.
ಪ್ರಶಸ್ತಿ ವಿಜೇತರು
2023: ಮುಂಬೈ ಇಂಡಿಯನ್ಸ್
2024: ರಾಯಲ್ ಚಾಲೆಂಜರ್ಸ್ ಬೆಂಗಳೂರು
2025: ಮುಂಬೈ ಇಂಡಿಯನ್ಸ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.