ಗುಜರಾತ್ ಟೈಟನ್ಸ್ ತಂಡದ ಸೋಫಿ ಡಿವೈನ್
-ಪಿಟಿಐ ಚಿತ್ರ
ವಡೋದರ: ಸೋಫಿ ಡಿವೈನ್ ಅವರ ಅಜೇಯ ಅರ್ಧಶತಕ ಹಾಗೂ ಎಡಗೈ ಸ್ಪಿನ್ನರ್ ರಾಜೇಶ್ವರಿ ಗಾಯಕವಾಡ್ (16ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್ ನೆರವಿನಿಂದ ಗುಜರಾತ್ ಜೈಂಟ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ಗುರುವಾರ 45 ರನ್‌ಗಳಿಂದ ಯುಪಿ ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿತು.
ಬೌಲರ್‌ಗಳಗೆ ಹೆಚ್ಚು ನೆರವು ನೀಡುತ್ತಿದ್ದ ಪಿಚ್‌ನಲ್ಲಿ ಅನುಭವಿ ಆಲ್‌ರೌಂಡರ್ ಸೋಫಿ ಅವರು 42 ಎಸೆತಗಳಲ್ಲಿ ಔಟಾಗದೇ 50 ರನ್ ಬಾರಿಸಿ ಜೈಂಟ್ಸ್ ತಂಡಕ್ಕೆ ಆಸರೆಯಾದರು. ಅವರ ಆಟದ ಬಲದಿಂದ ಆ್ಯಷ್ಲೆ ಗಾರ್ಡನರ್ ಬಳಗವು 20 ಓವರ್‌ಗಳಲ್ಲಿ 8 ವಿಕೆಟ್‌ಗೆ 153 ರನ್ ಗಳಿಸಿತು.
ಸವಾಲಿನ ಗುರಿ ಬೆನ್ನಟ್ಟಿದ ವಾರಿಯರ್ಸ್ ತಂಡವು ಜೈಂಟ್ಸ್ ತಂಡದ ಸಂಘಟಿತ ಬೌಲಿಂಗ್ ಎದುರು 17.3 ಓವರ್‌ಗಳಲ್ಲಿ 108 ರನ್‌ಗಳಿಗೆ ಕುಸಿಯಿತು. ರಾಜೇಶ್ವರಿ ಮೂರು ವಿಕೆಟ್ ಕಿತ್ತರೆ, ರೇಣುಕಾ ಸಿಂಗ್ ಠಾಕೂರ್ ಹಾಗೂ ಸೋಫಿ ಅವರು ತಲಾ ಎರಡು ವಿಕೆಟ್ ಪಡೆದರು.
ಇದಕ್ಕೆ ಮೊದಲು, ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಗಾರ್ಡನರ್ ಬಳಗವು ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಕಡಿಮೆ ಮೊತ್ತಕ್ಕೆ ಕುಸಿಯುವ ಅಪಾಯದಲ್ಲಿತ್ತು. ಈ ವೇಳೆ, ಸಂದರ್ಭಕ್ಕನುಗುಣವಾಗಿ ಬ್ಯಾಟ್ ಬೀಸಿದ ಸೋಫಿ, ತಂಡ 150ರ ಗಡಿ ದಾಟಲು ನೆರವಾದರು. ಕ್ರಾಂತಿ ಗೌಡ್ ಹಾಗೂ ಸೋಫಿ ಎಕ್ಲೆಸ್ಟೋನ್ ತಲಾ 2 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರುಗಳಲ್ಲಿ 8 ವಿಕೆಟ್‌ಗೆ 153 (ಬೆತ್ ಮೂನಿ 38, ಸೋಫಿ ಡಿವೈನ್ ಔಟಾಗದೇ 50; ಕ್ರಾಂತಿ ಗೌಡ್ 18ಕ್ಕೆ2, ಸೋಫಿ ಎಕ್ಲೆಸ್ಟೋನ್ 22ಕ್ಕೆ2).
ಯುಪಿ ವಾರಿಯರ್ಸ್: ಫೋಬಿ ಲಿಚ್‌ಫೀಲ್ಡ್ 32, ಕ್ಲೊಯೆ ಟ್ರಯಾನ್ ಔಟಾಗದೇ 30; ರಾಜೇಶ್ವರಿ ಗಾಯಕವಾಡ್ 16ಕ್ಕೆ3, ರೇಣುಕಾ ಸಿಂಗ್ ಠಾಕೂರ್ 20ಕ್ಕೆ2, ಸೋಫಿ ಡಿವೈನ್ 16ಕ್ಕೆ2).
ಫಲಿತಾಂಶ: ಗುಜರಾತ್ ಜೈಂಟ್ಸ್ ತಂಡಕ್ಕೆ 45 ರನ್‌ಗಳ ಜಯ. ಪಂದ್ಯದ ಆಟಗಾರ್ತಿ: ರಾಜೇಶ್ವರಿ ಗಾಯಕವಾಡ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.