ADVERTISEMENT

WPL: ಬ್ಯಾಟಿಂಗ್ ವೈಫಲ್ಯ ಕಂಡ ಆರ್‌ಸಿಬಿಯ ಜಯದ ಓಟಕ್ಕೆ ಬ್ರೇಕ್ ಹಾಕುವುದೇ ಡೆಲ್ಲಿ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ಜನವರಿ 2026, 14:34 IST
Last Updated 24 ಜನವರಿ 2026, 14:34 IST
<div class="paragraphs"><p>ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರ್ತಿಯರು</p></div>

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರ್ತಿಯರು

   

ಚಿತ್ರ ಕೃಪೆ: X / @wplt20

ವಡೋದರ: ಮಹಿಳೆಯರ ಪ್ರೀಮಿಯರ್‌ ಲೀಗ್‌ (ಡಬ್ಲ್ಯುಪಿಎಲ್‌) ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಆಜೇಯ ಓಟ ಮುಂದುವರಿಸುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡ, ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಬ್ಯಾಟಿಂಗ್ ವೈಫಲ್ಯ ಅನುಭವಿಸಿತು.

ADVERTISEMENT

ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಬಾರಿಗೆ ಆಲೌಟ್‌ ಆಗಿರುವ ಸ್ಮೃತಿ ಮಂದಾನ ಬಳಗದ ಜಯದ ಓಟಕ್ಕೆ ಬ್ರೇಕ್‌ ಹಾಕುವ ಅವಕಾಶವನ್ನು ಡೆಲ್ಲಿ ಪಡೆದುಕೊಂಡಿದೆ.

ವಡೋದರದ ಕೊತಂಬಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ ಎಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕಲೆಹಾಕಿರುವುದು 109 ರನ್‌ ಮಾತ್ರ.

ಡೆಲ್ಲಿ ಪಡೆಯ ಸಂಘಟಿತ ಬೌಲಿಂಗ್ ಎದುರು, ಆರ್‌ಸಿಬಿಯ ಬಲಿಷ್ಠ ಬ್ಯಾಟಿಂಗ್‌ ವಿಭಾಗ ಕಂಗೆಟ್ಟಿತು. ನಾಯಕಿ ಸ್ಮೃತಿ (38 ರನ್‌) ಹಾಗೂ ಆಲ್‌ರೌಂಡರ್‌ ರಾಧಾ ಯಾದವ್‌ (18 ರನ್‌) ಹೊರತುಪಡಿಸಿ ಉಳಿದ ಯಾರೂ ಎರಡಂಕಿಯನ್ನೇ ತಲುಪಲಿಲ್ಲ.

ಡೆಲ್ಲಿ ಪರ ಮಿಂಚಿದ ನಂದಿನಿ ಶರ್ಮಾ, 26 ರನ್‌ ನೀಡಿ ಮೂರು ವಿಕೆಟ್‌ಗಳನ್ನು ಪಡೆದುಕೊಂಡರು. ಅದರೊಂದಿಗೆ ಟೂರ್ನಿಯಲ್ಲಿ ಅತಿಹೆಚ್ಚು (13) ವಿಕೆಟ್‌ ಪಡೆದ ಬೌಲರ್‌ ಎನಿಸಿದರು. ಅವರಿಗೆ ಉತ್ತಮ ಸಹಕಾರ ನೀಡಿದ ಚಿನೆಲ್ಲೆ ಹೆನ್ರಿ, ಮರಿಜನ್ನೆ ಕೇಪ್‌ ಹಾಗೂ ಮಿನ್ನು ಮಣಿ ಎರಡೆರಡು ವಿಕೆಟ್‌ ಕಿತ್ತರು. ಇನ್ನೊಂದು ವಿಕೆಟ್‌ ಶ್ರೀಚರಣಿ ಪಾಲಾಯಿತು.

ಫೈನಲ್‌ ಮೇಲೆ ಕಣ್ಣು

ಬೆಂಗಳೂರಿನ ತಂಡ ಟೂರ್ನಿಯಲ್ಲಿ ಆಡಿರುವ ಐದೂ ಪಂದ್ಯಗಳನ್ನು ಗೆದ್ದು, ಪ್ಲೇ ಆಫ್‌ಗೆ ಅರ್ಹತೆ ಗಿಟ್ಟಿಸಿದೆ. ಈ ಪಂದ್ಯವನ್ನೂ ಗೆದ್ದರೆ ನೇರವಾಗಿ ಫೈನಲ್‌ ಟಿಕೆಟ್‌ ಗಿಟ್ಟಿಸಿಕೊಳ್ಳಲಿದೆ. ಅದೇ ಲೆಕ್ಕಾಚಾರದಲ್ಲಿರುವ ಸ್ಮೃತಿ ಬಳಗ, ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಪ್ರೇಮಾ ರಾವತ್‌ ಬದಲು ಅರುಂಧತಿ ರೆಡ್ಡಿಗೆ ಸ್ಥಾನ ನೀಡಲಾಗಿದೆ.

ಇತ್ತ ಡೆಲ್ಲಿ ಪಡೆಗೆ ಪ್ಲೇ ಆಫ್‌ ರೇಸ್‌ನಲ್ಲಿ ಉಳಿಯುವ ಸವಾಲು ಎದುರಾಗಿದೆ. ಆಡಿರುವ ಐದರಲ್ಲಿ ಕೇವಲ ಎರಡರಲ್ಲಷ್ಟೇ ಗೆದ್ದಿರುವ ಈ ತಂಡ, ಉಳಿದ ಮೂರರಲ್ಲಿ ಸೋತಿದೆ. ಹೀಗಾಗಿ, ಮುಂದಿನ ಹಂತಕ್ಕೇರಬೇಕಾದರೆ ಈ ಪಂದ್ಯವನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಇಲ್ಲಿ ಸೋತು, ಉಳಿದೆರಡು ಪಂದ್ಯಗಳಲ್ಲಿ ಗೆದ್ದರೂ, ಇತರ ಪಂದ್ಯಗಳ ಫಲಿತಾಂಶ ಏನಾಗಲಿದೆ ಎಂಬುದರ ಮೇಲೆ ಜೆಮಿಮಾ ರಾಡ್ರಿಗಸ್ ಪಡೆಯ ಭವಿಷ್ಯ ನಿರ್ಧಾರವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.