ಇತ್ತೀಚೆಗೆ ನಡೆದ ಸಂದರ್ಶವೊಂದರಲ್ಲಿ ಜನಪ್ರಿಯ ಕ್ರಿಕೆಟ್ ಆಟಗಾರ ಯಜುವೇಂದ್ರ ಚಾಹಲ್, ತಮ್ಮ ಪ್ರೀತಿ ಮತ್ತು ವೈವಾಹಿಕ ಬದುಕಿನ ಕೆಲವು ಕ್ಷಣಗಳನ್ನು ಮೆಲುಕು ಹಾಕಿದ್ದಾರೆ. ‘ನಾನು ನಿನ್ನನ್ನು ಮದುವೆಯಾಗಲು ಇಷ್ಟಪಡುತ್ತೇನೆ, ಡೇಟಿಂಗ್ ನಡೆಸಲು ನನಗೆ ಇಷ್ಟವಿಲ್ಲ‘ ಎಂದು ಮದುವೆಗೆ ಮೊದಲು ತಮ್ಮ ಪತ್ನಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.
ಚಹಲ್ ಮತ್ತು ಅವರ ಪತ್ನಿ ಧನಶ್ರೀ 2020ರ ಡಿಸೆಂಬರ್‌ನಲ್ಲಿ ಮದುವೆಯಾಗಿದ್ದರು. ಧನಶ್ರೀ ವೃತ್ತಿಯಲ್ಲಿ ಡ್ಯಾನ್ಸರ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಚಹಲ್ ಮತ್ತು ಧನಶ್ರೀ ಪರಸ್ಪರ ಪರಿಚಿತರಾಗಿದ್ದು, ಪರಿಚಯ ಪ್ರೀತಿಗೆ ತಿರುಗಿ ನಂತರ ವಿವಾಹವಾಗಿದ್ಧಾರೆ.
ಯೂಟ್ಯೂಬ್ ಚಾನಲ್‌ವೊಂದು ನಡೆಸಿದ ಸಂದರ್ಶನದಲ್ಲಿ ಮಾತನಾಡುತ್ತಾ ಧನಶ್ರೀ ತಮಗೆ ಹೇಗೆ ಪರಿಚಯವಾದರು ಎಂಬುವುದರ ಬಗ್ಗೆ ತಿಳಿಸಿದ್ದಾರೆ. ‘ಲಾಕ್‌ಡೌನ್ ಸಮಯದಲ್ಲಿ ಸುಮಾರು ಮೂರು ನಾಲ್ಕು ತಿಂಗಳುಗಳ ಕಾಲ ನಾನು ನಮ್ಮ ಊರಾದ ಗುರುಗಾಮ್‌ನಲ್ಲಿದ್ದೆ. ಅದೇ ಮೊದಲ ಬಾರಿಗೆ ನಾನು ಅಷ್ಟು ಸಮಯ ಕುಟುಂಬದವರೊಂದಿಗೆ ಕಾಲ ಕಳೆದಿದ್ದೆ. ಈ ವೇಳೆ ನನಗೆ ನೃತ್ಯ ಕಲಿಯುವ ಆಸೆಯಾಗಿತ್ತು. ಧನಶ್ರೀ ಎಂಬುವವರು ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿತು. ನಾನು ಆನ್‌ಲೈನ್ ತರಗತಿ ಸೇರಿಕೊಂಡೆ‘ ಎಂದರು
‘ಸಣ್ಣ ಸಣ್ಣ ವಿಷಯಗಳಲ್ಲೂ ಖುಷಿಯನ್ನು ಕಾಣುವ ಧನಶ್ರೀ ಅವರ ಗುಣ ನನಗೆ ತುಂಬಾ ಹಿಡಿಸಿತ್ತು. ಧನಶ್ರೀ ಅವರನ್ನು ಮದುವೆಯಾಗುವ ಬಗ್ಗೆ ನಾನು ನನ್ನ ಕುಟುಂಬದವರಿಗೆ ಹೇಳಿದ್ದೆ. ಕೊನೆಗೆ ಧನಶ್ರೀ ಅವರಲ್ಲೂ ಕೇಳಿದ್ದೆ. ನನಗೆ ಈಗ 30 ವರ್ಷ. ನನಗೆ ಡೇಟಿಂಗ್‌ಯೆಲ್ಲಾ ಹಿಡಿಸುವುದಿಲ್ಲ. ನಾನು ನಿಮ್ಮನ್ನು ಮದುವೆಯಾಗಲು ಇಷ್ಟಪಡುತ್ತೇನೆ ಎಂದು ನೇರವಾಗಿ ಹೇಳಿದ್ದೆ. ಅದಕ್ಕೆ ಅವರು ಒಪ್ಪಿರಲಿಲ್ಲ. ನಿಮ್ಮನ್ನು ನೇರವಾಗಿ ಭೇಟಿ ಮಾಡಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಕೊನೆಗೆ ಇಬ್ಬರು ಮುಂಬೈನಲ್ಲಿ ಭೇಟಿಯಾದೆವು. ಈಗ ವಿವಾಹವಾಗಿದ್ದೇವೆ‘ ಎಂದು ತಮ್ಮ ಪ್ರೀತಿ ಮತ್ತು ವಿವಾಹದ ಬದುಕಿನ ಕಥೆಯನ್ನು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.